
ಬೆಂಗಳೂರು (ಸೆ.25): ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಗಳ ಬಳಕೆಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ನಡುವೆ ವಾದ-ಪ್ರತಿವಾದ ನಡೆದಿದೆ. 'ರಾಜ್ಯದಲ್ಲಿ ಪ್ರಯಾಣಿಕರ ಸಾಗಣೆಗಾಗಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಯಾವುದೇ ಅನುಮತಿಯನ್ನು ನೀಡಿಲ್ಲ' ಎಂದು ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರೂ, 'ನೀತಿ ರೂಪಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಹೈಕೋರ್ಟ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೈಕ್ ಟ್ಯಾಕ್ಸಿಗಳ ಕುರಿತ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರು, ಬೈಕ್ ಟ್ಯಾಕ್ಸಿಗಳ ಬಳಕೆಯನ್ನು ನಿರ್ಬಂಧಿಸಿರುವ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಪ್ರಯಾಣಿಕರಿಗೆ ಅನುಮತಿಯಿಲ್ಲ: ಬೈಕ್‌ಗಳನ್ನು ಪ್ರಯಾಣಿಕರ ಸಾಗಣೆಗಾಗಿ ಟ್ಯಾಕ್ಸಿ ಎಂದು ಬಳಸಲು ಸರ್ಕಾರವು ಅನುಮತಿ ನೀಡಿಲ್ಲ.
ಡೆಲಿವರಿಗೆ ಮಾತ್ರ ಅವಕಾಶ: ಬೈಕ್‌ಗಳನ್ನು ಕೇವಲ ಡೆಲಿವರಿ ಸೇವೆಗಳಿಗಾಗಿ ಬಳಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ.
ಕ್ರಮಕ್ಕೆ ಮನವಿ: ಅನುಮತಿ ಇಲ್ಲದಿದ್ದರೂ ಕೆಲವು ಬೈಕ್ ಟ್ಯಾಕ್ಸಿ ಕಂಪನಿಗಳು ತಮ್ಮ ವಾಹನಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಆದ್ದರಿಂದ, ಇಂತಹ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಎಜಿ ಮನವಿ ಮಾಡಿದರು.
ಬೈಕ್ ಟ್ಯಾಕ್ಸಿ ನೀತಿ ರೂಪಿಸುವ ವಿಚಾರದಲ್ಲಿ ಸರ್ಕಾರ ತೋರಿದ ವಿಳಂಬಕ್ಕೆ ಹೈಕೋರ್ಟ್‌ನ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಒಂದು ತಿಂಗಳಾದರೂ ನೀತಿ ರೂಪಿಸಿಲ್ಲ: 'ಸರ್ಕಾರಕ್ಕೆ ನೀತಿ ರೂಪಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ನೀತಿ ರೂಪಿಸಿಲ್ಲ' ಎಂದು ಕೋರ್ಟ್ ಅಸಮಧಾನಗೊಂಡಿತು.
ಕಾರ್ಮಿಕರ ಬಗ್ಗೆ ಪ್ರಸ್ತಾಪ: ಬೈಕ್ ಟ್ಯಾಕ್ಸಿ ವಿಚಾರ ಬಿಟ್ಟು ಕೇವಲ ಬೈಕ್‌ಗಳನ್ನು ಡೆಲಿವರಿಗೆ ಬಳಸುವ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ತಡೆಯಾಜ್ಞೆ ಪರಿಶೀಲನೆ: ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿರುವುದಕ್ಕೆ ನ್ಯಾಯಾಲಯದಿಂದ ತಡೆ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿತು.
ಅಂತಿಮವಾಗಿ, ಬೈಕ್ ಟ್ಯಾಕ್ಸಿಗಳ ಕುರಿತು ಸರ್ಕಾರದ ನಿಖರವಾದ ವಾದವೇನು ಎಂಬುದನ್ನು ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್, ನಂತರ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಪಡಿಸಲಾಗಿದೆ. ಬೈಕ್ ಟ್ಯಾಕ್ಸಿ ನಿಷೇಧದ ಪರ ಮತ್ತು ವಿರೋಧದ ಅಂತಿಮ ನಿರ್ಧಾರವು ನ್ಯಾಯಾಲಯದ ಮುಂದಿನ ಆದೇಶವನ್ನು ಅವಲಂಬಿಸಿದೆ.
ಈಗ ಬೈಕ್ ಟ್ಯಾಕ್ಸಿ ಸಂಚಾರ ಅಧಿಕೃತ ಬ್ಯಾನ್ ಆಗಿದೆಯೇ?
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ, ಎಂದು ಸರ್ಕಾರದಿಂದ ನಿಷೇಧ ಮಾಡಲಾಗಿದೆ. ಈ ಬಗ್ಗೆ ಬೈಕ್ ಟ್ಯಾಕ್ಸಿ ಆಪ್ ಮಾಲೀಕರು ಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ಕೋರ್ಟ್ ಬೈಕ್ ಟ್ಯಾಕ್ಸಿ ಕಾರ್ಮಿಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸರ್ಕಾರಕ್ಕೆ ಖಡಕ್ ಸೂಚನೆ ರವಾನಿಸಿದೆ. ಈ ಮೂಲಕ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ನಿಷೇಧವನ್ನಾಗಲೀ, ಅನುಮತಿಯನ್ನಾಗಲೀ ಹೈಕೋರ್ಟ್ ನೀಡಿಲ್ಲ. ಆದರೆ, ಈಗ ಬೈಕ್ ಟ್ಯಾಕ್ಸಿ ಸಂಚಾರ ಮಾಡುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಸರ್ಕಾರಕ್ಕೆ ತಿಳಿಸಿದ್ದರಿಂದ ಎಲ್ಲೆಡೆ ಬೈಕ್ ಟ್ಯಾಕ್ಸಿಗಳ ಸೇವೆ ಎಗ್ಗಿಲ್ಲದೆ ಸಾಗಿದೆ.
ಕಮೀಷನ್ ಇಲ್ಲದ ಬೈಕ್ ಟ್ಯಾಕ್ಸಿ ಸಂಚಾರ:
ಇನ್ನು ರಾಪಿಡೋ ಬೈಕ್ ಟ್ಯಾಕ್ಸಿ ಆಪ್ ಮೂಲಕ ಪ್ರಯಾಣಿಕರ ಸೇವೆಯನ್ನು, ಡೆಲಿವರಿ ಸೇವೆಯನ್ನೂ, ಪಾರ್ಸಲ್ ಸೇವೆಯನ್ನೂ ನೀಡಲಾಗುತ್ತಿದೆ. ಆದರೆ, ಸರ್ಕಾರದ ನಿರ್ಬಂಧ ಇರುವುದರಿಂದ ಕಾರ್ಮಿಕರ ಕೆಲಸದ ಮೇಲೆ ಯಾವುದೇ ಕಮೀಷನ್ ಹಣವನ್ನು ಪಡೆಯುತ್ತಿಲ್ಲ. ಆದರೆ, ಆಪ್ ಸೇವೆಯ ಮೂಲಕ ಬೈಕ್ ಟ್ಯಾಕ್ಸಿ ಕಾರ್ಮಿಕರ ಸೇವೆಯನ್ನು ಮುಂದುವರೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ