
ಬೆಂಗಳೂರು (ಮೇ.22): ಕಲಬುರಗಿ ಜಿಲ್ಲೆಯ ಆಳಂದ ಕೋಮುಗಲಭೆ ಪ್ರಕರಣದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ್ದ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಪುಂಡಾಟಿಕೆ ನಡೆಸಿದ್ದ ಮುಸ್ಲಿಂ ಸಮುದಾಯದವರದ್ದು ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಲೇ ಮಶಾಕ ದರ್ಗಾ ಆವರಣದಲ್ಲಿನ ರಾಘವಚೈತನ್ಯ ಶಿವಲಿಂಗದ ಮೇಲೆ ಕೆಲ ಬಾಲಾಪರಾಧಿಗಳು ಮಲಮೂತ್ರ ವಿಸರ್ಜನೆ ಮಾಡಿ ಲಿಂಗಕ್ಕೆ ಹೇಸಿಗೆ ಹಚ್ಚಿ ಅಪಮಾನ ಮಾಡಿದ್ದರು. ಇದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ವಿರುದ್ಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿ, ಜೇವರ್ಗಿಯ ಆಂದೋಲ ಮಠದ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಲಿಂಗ ಶುದ್ಧೀಕರಣ ಮಾಡಲು ಕಲಬುರಗಿಯ ನಗರದ ವಿಶ್ವಾರಾಧ್ಯ ಗುಡಿಯಿಂದ ಅಳಂದ ಚಲೋ ನಡೆಸಲು ಕರೆ ನೀಡಲಾಗಿತ್ತು.
ಈ ವೇಳೆ ಕೋಮುಗಲಭೆ ಸಾಧ್ಯತೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ, ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಸಿದ್ದಲಿಂಗ ಸ್ವಾಮೀಜಿ ಅವರು ಪಟ್ಟಣ ಪ್ರವೇಶಿಸಿದ್ದರಿಂದ ಕ್ರಿಮಿನಲ್ ಪ್ರಕರಣ ದಾಖಿಸಲಾಗಿತ್ತು.
ಮತ್ತೊಂದೆಡೆ ಬಂದೋಬಸ್ತ್‌ಗೆ ಇದ್ದ ಪೊಲೀಸ್ ವಾಹನಕ್ಕೆ ಜಖಂ ಮಾಡಿ ಓಡಿ ಹೋಗುತ್ತಿದ್ದ ಅಕೀಬ ಅನ್ಸಾರಿ ಎಂಬ 22 ವರ್ಷದ ಮುಸ್ಲಿಂ ಯುವಕ, ನಿಷೇಧಾಜ್ಞೆ ಇದ್ದರೂ ಗುಂಪಾಗಿ ಸಂಚರಿಸಿದ್ದ ಆರೋಪದ ಮೇಲೆ 15 ವರ್ಷದ ಬಾಲಕ ಹಾಗೂ 16 ವರ್ಷದ ಮತ್ತೊಬ್ಬನ ಮೇಲೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಕನ್ನಡಪರ ಹೋರಾಟಗಳು, ಮೇಕೆದಾಟು ಹೋರಾಟ, ಕಾವೇರಿ ವಿವಾದದ ವೇಳೆಯ ಹೋರಾಟಗಳ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಒಟ್ಟು 10 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಕನ್ನಡ ಹೋರಾಟಗಾರರ ವಿರುದ್ಧ ಪ್ರಕರಣಗಳು ರದ್ದು, ಕನ್ನಡ ನಾಮಫಲಕ ಚಳುವಳಿ ವೇಳೆ ಸೋಫಿಯಾ ಸ್ಕೂಲ್ ಬಳಿಯ ಸ್ಕೈವಾಕ್ ಮೇಲೆ ಅಂಟಿಸಿದ್ದ ಇಂಗ್ಲಿಷ್ ಬ್ಯಾನರ್ ತೆರವುಗೊಳಿಸಿದ್ದ ಪ್ರಕರಣದ ಸಂಬಂಧ ರೂಪೇಶ್ ರಾಜಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣ ಹಾಗೂ ವಿಧಾನಸೌಧದ ಠಾಣೆಯಲ್ಲಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ಸೇರಿದಂತೆ ಒಟ್ಟು 52 ಪ್ರಕರಣ ಹಿಂಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ