
ಬೆಂಗಳೂರು (ಮೇ 21): ಪ್ರತಿ ಜಿಲ್ಲೆಗೆ 15 ವಿದ್ಯಾರ್ಥಿಗಳಂತೆ ರಾಜ್ಯಾದ್ಯಂತ ಒಟ್ಟು 500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ವರ್ಷಗಳ ಕಾಲ ವಸತಿ ಸಹಿತ ಪಿಯುಸಿ (ವಿಜ್ಞಾನ ವಿಭಾಗ) ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ, ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ಬಲ ನೀಡುವ ಯೋಜನೆಗಳ ಬಗ್ಗೆ ವಿವರ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಪ್ರತಿ ಜಿಲ್ಲೆಗೆ 15 ವಿದ್ಯಾರ್ಥಿಗಳಂತೆ ರಾಜ್ಯಾದ್ಯಂತ ಒಟ್ಟು 500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ವರ್ಷಗಳ ಕಾಲ ವಸತಿ ಸಹಿತ ಪಿಯುಸಿ (ವಿಜ್ಞಾನ ವಿಭಾಗ) ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಇದರ ಜೊತೆಗೆ NEET, JEE ಮತ್ತು CET ಪರೀಕ್ಷೆಗಳಿಗೆ ವಿಶೇಷ ಪೂರ್ವ ತರಬೇತಿಯನ್ನು ಸಹ ಉಚಿತವಾಗಿ ನೀಡಲಾಗುವುದು. ಇದು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನೆರವಿನೊಂದಿಗೆ 'ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿವರ್ತನೆ' (KSHET) ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ 802 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯದ 53 ಸರ್ಕಾರಿ ಪದವಿ ಕಾಲೇಜುಗಳು, 14 ಸರ್ಕಾರಿ ಪಾಲಿಟೆಕ್ನಿಕ್‌ಗಳು ಹಾಗೂ 5 ಉತ್ಕೃಷ್ಟತಾ ಕೇಂದ್ರಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮತ್ತು ಶೈಕ್ಷಣಿಕ ವಸ್ತುಗಳನ್ನು ಮುಂಗಡವಾಗಿ ಖರೀದಿಸಲಾಗುತ್ತದೆ. ಈ ಕ್ರಮದಿಂದ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ಗುರಿ ಹೊಂದಲಾಗಿದೆ.
ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಅಡಿಪಾಯ ಹಾಕಲು ಸರ್ಕಾರ ಮುಂದಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ 'ಶಾಲಾಪೂರ್ವ ಶಿಕ್ಷಣ ಕಿಟ್'ಗಳನ್ನು ಖರೀದಿಸಲು 20.98 ಕೋಟಿ ರೂಪಾಯಿ ಅನುಮೋದಿಸಲಾಗಿದೆ. ಪ್ರತಿ ಅಂಗನವಾಡಿಗೆ 3,000 ರೂಪಾಯಿ ವೆಚ್ಚದ ಕಿಟ್‌ಗಳನ್ನು ಒದಗಿಸಲಾಗುವುದು, ಇದರಿಂದ ಮಕ್ಕಳು ಆಟಪಾಠಗಳ ಮೂಲಕ ಜ್ಞಾನಾರ್ಜನೆ ಮಾಡಲು ನೆರವಾಗಲಿದೆ.
ರಾಜ್ಯದ 32 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ (GTTC) ಹಳೆಯ ಯಂತ್ರೋಪಕರಣಗಳ ಬದಲಾಗಿ ಹೊಸ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ಖರೀದಿಸಲು ಸಂಪುಟ ಸಭೆಯಲ್ಲಿ 90 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ತರಬೇತಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ