ನೀಟ್‌, 'ಒಂದು ದೇಶ ಒಂದು ಚುನಾವಣೆ’, ಕ್ಷೇತ್ರ ವಿಂಗಡಣೆ ವಿರುದ್ಧ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

By Kannadaprabha News  |  First Published Jul 23, 2024, 6:40 AM IST

‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವನೆಗಳನ್ನು ವಿರೋಧಿಸಿ ವಿಧಾನಮಂಡಲ ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಲು ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.


ಬೆಂಗಳೂರು (ಜು.23) : ವೈದ್ಯ ಮತ್ತು ದಂತವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕೇಂದ್ರದಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ‘ನೀಟ್‌’; ಕೇಂದ್ರದ ಮಹತ್ವಾಕಾಂಕ್ಷಿ ‘ರಾಜ್ಯವಾರು ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್‌ ವಿಂಗಡಣೆ’ ಹಾಗೂ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವನೆಗಳನ್ನು ವಿರೋಧಿಸಿ ವಿಧಾನಮಂಡಲ ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಲು ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೇಂದ್ರದ ರಾಜ್ಯ ವಿರೋಧಿ ನೀತಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಈ ವೇಳೆ ರಾಜ್ಯಕ್ಕೆ ಮಾರಕವಾಗುತ್ತಿರುವ ಕೇಂದ್ರದ ಮೂರು ನಿರ್ಧಾರಗಳನ್ನು ವಿರೋಧಿಸಿ ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕಾರಕ್ಕೆ ನಿರ್ಧರಿಸಲಾಗಿದೆ.

Latest Videos

undefined

 

ಒಂದು ದೇಶ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಬಿಜೆಪಿ ಪ್ರಣಾಳಿಕೆ ಭಾಗ?

ನೀಟ್‌ ಬೇಡ, ರಾಜ್ಯ ಮಟ್ಟದಲ್ಲೇ ಪ್ರವೇಶ ಪರೀಕ್ಷೆ:

ನೀಟ್‌ನಲ್ಲಿ ಪರೀಕ್ಷಾ ಅಕ್ರಮ, ಫಲಿತಾಂಶ ಪ್ರಕಟಣೆಯಲ್ಲಿ ಭಾರೀ ಲೋಪಗಳಾಗಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ನೀಟ್ ಪಾವಿತ್ರ್ಯತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯ, ರಾಜ್ಯದ ಕಾಲೇಜಿನ ಸೀಟುಗಳು ಅನ್ಯ ರಾಜ್ಯದವರ ಪಾಲಾಗುತ್ತಿರುವುದು, ಪರೀಕ್ಷಾ ಒತ್ತಡ ಸೇರಿದಂತೆ ಅನೇಕ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರಾಜ್ಯದಲ್ಲಿ ನೀಟ್‌ ರದ್ದುಪಡಿಸಿ ತಮಿಳುನಾಡು ಮಾದರಿಯಲ್ಲಿ ನಿರ್ಣಯ ಕೈಗೊಳ್ಳಲು ಸಂಪುಟದಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಜಾರಿಯಲ್ಲಿರುವ ನೀಟ್‌ ರದ್ದುಪಡಿಸಿ, ಈ ಹಿಂದೆ ಇದ್ದಂತೆ ಆಯಾ ರಾಜ್ಯಗಳಿಗೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲು ಅವಕಾಶ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕವು ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಮಾದರಿಯಾಗಿದೆ. ಹಾಗಾಗಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೂ ಇದೇ ಮಾದರಿ ಅನುಸರಿಸಲು ಅವಕಾಶ ನೀಡಬೇಕು ಎಂದು ಕೋರಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಕ್ಷೇತ್ರ ವಿಂಗಡಣೆ ಬೇಡ:

ರಾಜ್ಯವಾರು ವಿಧಾನಸಭೆ ಕ್ಷೇತ್ರಗಳ ಸಮೀಕ್ಷೆ ನಡೆಸಿದ ಬಳಿಕ 2026ರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯನ್ನು ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೂಡ ವಿರೋಧಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಆಲೋಚನೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಜನಸಂಖ್ಯೆಯನ್ನು ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದರೆ ರಾಜ್ಯದ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಸಚಿವ ಸಂಪುಟ ಸಭೆ ಆತಂಕ ವ್ಯಕ್ತಪಡಿಸಿದೆ.

ಒಂದು ದೇಶ ಒಂದು ಚುನಾವಣೆ: ಪ್ರತಿ 15 ವರ್ಷಕ್ಕೊಮ್ಮೆ ಇವಿಎಂ ಕೊಳ್ಳಲು ಬೇಕು ₹10000 ಕೋಟಿ

ಒಂದು ದೇಶ, ಒಂದು ಚುನಾವಣೆ ಬೇಡ:ಪ್ರಾದೇಶಿಕವಾರು ಜನರ ಸಮಸ್ಯೆಗಳು, ಆಕಾಂಕ್ಷೆಗಳಿಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆಯಬೇಕು. ಅದೇ ಈವರೆಗೂ ಇರುವ ವಾಡಿಕೆ. ಇದು ವೈವಿಧ್ಯಮಯ ದೇಶವಾದ ಭಾರತಕ್ಕೆ ಸರಿಹೊಂದುತ್ತದೆ. ಆದರೆ ಪ್ರಜಾ ಪ್ರಭುತ್ವದ ವಿಕೇಂದ್ರೀಕರಣದ ವಿರುದ್ಧ ಕೇಂದ್ರವು ಏಕಕಾಲಕ್ಕೆ ಚುನಾವಣೆ ನಡೆಸಲು ಹೊರಟಿರುವುದು ದೇಶಕ್ಕೆ ಮಾರಕ. ಹೀಗಾಗಿ ಒಂದು ದೇಶ ಒಂದು ಚುನಾವಣೆ ವಿರೋಧಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

click me!