ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿ 60 ಕೇಸ್‌ಗಳು ವಾಪಸ್‌

Kannadaprabha News   | Kannada Prabha
Published : Sep 05, 2025, 05:13 AM IST
Vidhan soudha

ಸಾರಾಂಶ

ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ರಾಜ್ಯದ ಬೇರೆಬೇರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 15ಕ್ಕೂ ಹೆಚ್ಚಿನ ಪ್ರಕರಣಗಳು, ಪೊಲೀಸ್‌ ಠಾಣೆ ಮೇಲೆಯೇ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದ ಪ್ರಕರಣ ಸೇರಿ 60 ಪ್ರಕರಣಗಳನ್ನು ಹಿಂಪಡೆಯಲು ಗುರುವಾರದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಬೆಂಗಳೂರು : ವಿವಿಧ ಸಂದರ್ಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ರಾಜ್ಯದ ಬೇರೆಬೇರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 15ಕ್ಕೂ ಹೆಚ್ಚಿನ ಪ್ರಕರಣಗಳು, ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್‌ ಠಾಣೆ ಮೇಲೆಯೇ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದ ಪ್ರಕರಣ ಸೇರಿ 60 ಪ್ರಕರಣಗಳನ್ನು ಹಿಂಪಡೆಯಲು ಗುರುವಾರದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಜಾರಿ ನಿರ್ದೇಶನಾಲಯ(ಇ.ಡಿ) 2019 ಜೂನ್‌ನಲ್ಲಿ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದರಲ್ಲೂ ಕನಕಪುರ, ರಾಮನಗರಗಳಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ್ದರು. ಈ ಕುರಿತು ಸಾತನೂರು, ಕನಕಪುರ, ಕೋಡಿಹಳ್ಳಿ, ಬೀದರ್‌ ಜಿಲ್ಲೆಯ ಕಮಲಾನಗರ ಸೇರಿ ಹಲವು ಪೊಲೀಸ್‌ ಠಾಣೆಗಳಲ್ಲಿ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಹೀಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನೂ ಹಿಂಪಡೆದು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ.

ಅದೇ ರೀತಿ 2021ರ ಮಾ. 25ರಂದು ಅಂದಿನ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕಿ ಪುಷ್ಪಾ ಅಮರನಾಥ್‌ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಕುರಿತು ದಾಖಲಾಗಿದ್ದ ಪ್ರಕರಣವನ್ನೂ ರದ್ದು ಮಾಡಲಾಗುತ್ತಿದೆ. ಹಾಗೆಯೇ, 2022ರ ಏ.12ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಪಟ್ಟಿ ತೋರಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣ, ವಿರೋಧ ಪಕ್ಷದ ನಾಯಕರಾಗಿದ್ದಾಗ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ.

ಠಾಣೆಗೆ ಕಲ್ಲು ತೂರಿದ ಕೇಸ್‌ ಕೂಡ ವಾಪಸ್‌:

ಹಸುಗಳನ್ನು ಸಾಗಿಸುತ್ತಿದ್ದ ವಾಹನ ಹಿಡಿದಿದ್ದನ್ನು ಖಂಡಿಸಿ, ಹಸುಗಳನ್ನು ಮತ್ತು ವಾಹನವನ್ನು ಬಿಡುವಂತೆ ಆಗ್ರಹಿಸಿ 2019ರ ಆ.11ರಂದು ಚಿತ್ತಾಪುರ ಪೊಲೀಸ್‌ ಠಾಣೆ ಮೇಲೆ 25ರಿಂದ 30 ಮಂದಿ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿದ್ದರು. ಈ ಕುರಿತು ಸುಮಾರರು 30 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈಗ ಆ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ.

14 ವರ್ಷದ ಹಿಂದಿನ ಪ್ರಕರಣ ರದ್ದು:

ರಾಮನಗರದ ಕನಕಪುರದಲ್ಲಿನ ವಿಶ್ವೋದಯ ವಿದ್ಯಾಸಂಸ್ಥೆಗೆ 2011ರ ಅ.15ರಂದು ನಡೆದ ಆಡಳಿತ ಮಂಡಳಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದಾಂಧಲೆ ಪ್ರಕರಣವನ್ನು ರದ್ದು ಮಾಡಲಾಗಿದೆ. ಹಾಗೆಯೇ, 2012ರ ನ. 3ರಂದು ರಾಮನಗರದಲ್ಲಿ ನಡೆದ ವಿವಿಧ ಸರ್ಕಾರಿ ಕಾರ್ಯಕ್ರಮಕ್ಕೆ ಅಂದಿನ ಸಂಸದ ಡಿ.ಕೆ.ಸುರೇಶ್‌ ಅವರನ್ನು ಆಹ್ವಾನಿಸದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆಯಲೂ ಸಂಪುಟ ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!