
ವಿಧಾನಸೌಧ: ಬೆಂಗಳೂರು ನಗರದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರ ಮೆಟ್ರೋ ನಿಲ್ದಾಣದವರೆಗೂ ಹೊರವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸಲು 307 ಕೋಟಿ ರು. ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಡೆಟ್ (ಬಿಸ್ಮೈಲ್) ವತಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಇದನ್ನು ಜಾಗತಿಕ ರೂಪದಲ್ಲಿ ವಿನ್ಯಾಸಗೊಳಿಸಲು ತೀರ್ಮಾನಿಸಲಾಗಿದೆ. ಸುಖಕರವಾದ ಗುಣಮಟ್ಟದ ಪ್ರಯಾಣ ಮತ್ತು ಈ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 17.01 ಕಿಮೀಟರ್ ಉದ್ದದ ಈ ರಸ್ತೆಯನ್ನು ಉನ್ನತ ರೀತಿಯಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ.
ದಶಪಥದ ರಸ್ತೆ (ಒಟ್ಟು 10 ಪಥ) ಇದಾಗಿರಲಿದ್ದು, ಮೂರು ಪಥದ ಪ್ರಮುಖ ರಸ್ತೆಗಗಳು ಜೊತೆಗೆ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಸ್ ಆದ್ಯತಾ ಪಥವನ್ನು ಪುನರ್ ಸ್ಥಾಪಿಸುವ ಯೋಜನೆ ಕೂಡ ಇದ್ದು, ಇದರಿಂದ ಸಂಚಾರ ದಟ್ಟಣೆ ತೀವ್ರವಾಗಿ ಕಡಿಮೆಯಾಗಲಿದೆ. ಇಷ್ಟು ಮಾತ್ರವಲ್ಲ ರಸ್ತೆಯ ಎರಡೂ ಬದಿಗಳಲ್ಲಿ ಪಾದಾಚಾರಿ ಮತ್ತು ಸೈಕಲ್ ಪಥ ಕೂಡ ಇರಲಿದೆ. ರಸ್ತೆಯ ಕೆಲವು ಭಾಗಗಳನ್ನು ಮರುನಿರ್ಮಾಣ ಕೂಡ ಮಾಡಲು ಉದ್ದೇಶಿಸಲಾಗಿದ್ದು, ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ ಸಂಪೂರ್ಣ ಮಾಹಿತಿಯ ಬೋರ್ಡ್ ಇರಲಿದೆ.
ಇನ್ನು ಸರ್ಕಾರ ಮತ್ತು ಖಾಸಗಿಯವರ ಪಾಲುದಾರಿಕೆಯಲ್ಲಿ ಇಬ್ಬಲೂರಿನಿಂದ ಕೆ ಆರ್ ಪುರದವರೆಗೆ ಮೆಟ್ರೋ ಎತ್ತರಿಸಿದ ಮಾರ್ಗದ ಅಡಿಯಲ್ಲಿ ಸ್ಕೈವಾಕ್ ನಿರ್ಮಾಣ ಕೂಡ ನಿರ್ಮಾಣವಾಗಲಿದೆ. ಅಂತೆಯೆ ಬೆಂಗಳೂರು ನಗರದ ಸಾಫ್ಟ್ ವೇರ್ ಟೆಕ್ನಾಲಜಿ ಆಫ್ ಇಂಡಿಯಾ(ಎಸ್‌ಟಿಪಿಐ) ಸಂಸ್ಥೆಯಿಂದ 100 ರ್‍ಯಾಕ್ ಗಳಿಗೆ ಸ್ಥಳಾವಕಾಶ ಪಡೆದು 131.10 ಕೋಟಿ ರು. ವೆಚ್ಚದಲ್ಲಿ ರಾಜ್ಯದ ದತ್ತಾಂಶ ಕೇಂದ್ರದ ಕಾರ್ಯಾಚರಣೆಗಳ ಸ್ಥಳಾಂತರ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ವಿಧಾನಸಭೆ: ಸರ್ಕಾರಿ ಶಾಲೆ-ಪಿಯು ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಶೀಘ್ರವೇ 585 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘3 ವಾರಗಳ ಹಿಂದಷ್ಟೇ ಸಚಿವ ಸಂಪುಟ ಸಭೆಯಲ್ಲಿ ಶಾಲೆಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರು., ಹಳೆಯ ಕೊಠಡಿಗಳ ದುರಸ್ಥಿಗೆ 100 ಕೋಟಿ ರು., ಶೌಚಾಲಯಗಳ ನಿರ್ಮಾಣ, ದುರಸ್ಥಿಗೆ 90 ಕೋಟಿ ರು. ಮತ್ತು ಪದವಿ ಪೂರ್ವ ಕಾಲೇಜುಗಳ ಮೂಲಸೌಕರ್ಯಕ್ಕೆ ಒಟ್ಟಾರೆ 95 ಕೋಟಿ ರು. ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಬಳಿಕ ಈ ಎಲ್ಲಾ ಅನುದಾನ ಬಿಡುಗಡೆಗೆ ಅಧಿಕೃತವಾಗಿ ಆದೇಶ ಸಿದ್ಧವಾಗಿದೆ. ಒಂದೆರಡು ದಿನದಲ್ಲಿ ಆದೇಶ ಹೊರಡಿಸಲಾಗುವುದು’ ಎಂದರು.
ಈ ವೇಳೆ, ಮಾತನಾಡಿದ ಮಹೇಶ್ ಟೆಂಗಿನಕಾಯಿ, ‘2025-26ರನೇ ಸಾಲಿನಲ್ಲಿ ಶೈಕ್ಷಣಿಕ ಅವಧಿ ಮುಗಿಯುತ್ತಾ ಬರುತ್ತಿದ್ದರೂ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಇನ್ನೂ ಕೂಡ ಪೂರ್ಣ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರದಲ್ಲಿ ಮಕ್ಕಳ ಶೂ, ಸಾಕ್ಸ್‌ಗೂ ಹಣ ಇಲ್ಲವೇ, ಕೆಲವೆಡೆ ಶಾಲೆಯ ಖರ್ಚು ವೆಚ್ಚಕ್ಕೆ ಇರುವ ಸಂಚಿತ ನಿಧಿಯಿಂದ ಶೂ, ಸಾಕ್ಸ್ ಖರೀದಿಸಲು ಅಧಿಕಾರಿಗಳು ಸೂಚಿಸಿರುವುದು ಏಕೆ?’ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ದಾಖಲಾತಿ ಪ್ರಕ್ರಿಯೆ ಜುಲೈ ಅಂತ್ಯದ ವರೆಗೂ ನಡೆಯುತ್ತಿರುತ್ತದೆ. ಎಸ್‌ಡಿಎಂಸಿಗಳಿಂದ ಮಕ್ಕಳ ಸಂಖ್ಯೆ ಹಾಗೂ ಪಾದದ ಅಳತೆಯ ಮಾಹಿತಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವುದರಿಂದ ಹಣ ಬಿಡುಗಡೆ ತಡವಾಗಿರಬಹುದು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಯಾವುದೇ ಅಧಿಕಾರಿಗಳಿಗೂ ಶಾಲಾ ಸಂಚಿತ ನಿಧಿಯಿಂದ ಹಣ ಬಳಕೆ ಮಾಡಿಕೊಳ್ಳಲು ಸೂಚಿಸುವಂತೆ ನಾನು ಹೇಳಿಲ್ಲ. ಈ ಬಗ್ಗೆ ಇನ್ನೊಮ್ಮೆ ಮಾಹಿತಿ ಪಡೆದು ತಮಗೆ ತಿಳಿಸುತ್ತೇನೆ. ಸರ್ಕಾರದಲ್ಲಿ ಶೂ, ಸಾಕ್ ಖರೀದಿಗೆ ಬೇಕಿರುವ 117 ಕೋಟಿ ರು. ಹಣಕ್ಕೆ ಕೊರತೆ ಇಲ್ಲ. ಹಾಗೊಂದು ವೇಳೆ ಅಧಿಕಾರಿಗಳಿಂದ ಏನಾದರೂ ಲೋಪಗಳಾಗಿದ್ದರೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ