ಮನೆ ಮನೆಗೆ ನಲ್ಲಿ ನೀರು ನೀಡಲು 3428 ಕೋಟಿ: ಸಂಪುಟ ಸಭೆಯಲ್ಲಿ ಒಪ್ಪಿಗೆ

By Kannadaprabha NewsFirst Published Oct 21, 2022, 10:25 AM IST
Highlights

ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ವಿವಿಧೆಡೆ ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು 3428 ಕೋಟಿ ರು. ವೆಚ್ಚದಲ್ಲಿ 24 ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು (ಅ.21): ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ವಿವಿಧೆಡೆ ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು 3428 ಕೋಟಿ ರು. ವೆಚ್ಚದಲ್ಲಿ 24 ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯದ ವಿವಿಧೆಡೆ ಜನಜೀವನ್‌ ಮಿಷನ್‌ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ 24 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 

ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಲಾಲಂದೇವನಹಳ್ಳಿ ಮತ್ತು ಇತರೆ 37 ಜನವಸತಿಗಳಿಗೆ ಕುಡಿಯುವ ನೀರು ಯೋಜನೆಯನ್ನು 35 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕುಗಳ 1477 ಬಹುಗ್ರಾಮ ಕುಡಿಯುವ ಗ್ರಾಮೀಣ ಜನವಸತಿಗಳಿಗೆ ನೀರು ಸರಬರಾಜು ಯೋಜನೆಯನ್ನು 855.39 ಕೋಟಿ ರು. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು. ಇದೇ ರೀತಿ ಶಿವಮೊಗ್ಗ ಜಿಲ್ಲೆಯ ಯೋಜನೆಗೆ 313 ಕೋಟಿ, ಕಲಬುರಗಿ ಜಿಲ್ಲೆಗೆ 12 ಕೋಟಿ, ಮಂಡ್ಯ ಜಿಲ್ಲೆಗೆ 943 ಕೋಟಿ, ಉತ್ತರ ಕನ್ನಡಕ್ಕೆ 169 ಕೋಟಿ, ಹಾಸನ 217 ಕೋಟಿ, ದಾವಣಗೆರೆ ಜಿಲ್ಲೆಯ ಯೋಜನೆಗೆ 482 ಕೋಟಿ ಅನುದಾನಕ್ಕೆ ಸಮ್ಮತಿ ಸಿಕ್ಕಿದೆ.

ಮನೆ ಮನೆಗೆ ನಲ್ಲಿ ಸಂಪರ್ಕ ಚುರುಕಿಗೆ ಸಿಎಂ ಬೊಮ್ಮಾಯಿ ಅಪ್ಪಣೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಮತ್ತು ಇತೆ 198 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 313 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಕ್ಕೆ ಒಪ್ಪಿಗೆ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಮತ್ತು ಇತರ 209 ಜನವಸತಿಗಳಿಗೆ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು 170 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಸಿಕ್ಕಿದೆ. ಉತ್ತರ ಕನ್ನಡಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿ ಮತ್ತು ಇತರೆ 22 ಗ್ರಾಮಗಳ ಮತ್ತು ಕರವಾಡಿ ಮತ್ತು ಇತರೆ 17 ಗ್ರಾಮಗಳ ಸಂಯೋಜಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 120 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಚೂರ್‌ ಮತ್ತು ಇತರೆ 12 ಗ್ರಾಮೀಣ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 12 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ ತಾಲೂಕಿನ ಆಯ್ದ ಗ್ರಾಮೀಣ ಜನವಸತಿಗಳಿಗೆ ಮತ್ತು ಬೆಳ್ಕೂರು ಪಟ್ಟಣ ಪಂಚಾಯಿತಿ ಒಳಗೊಂಡ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು 943 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಲಕೊಡ, ಹೆಗಡೆ ಮತ್ತು ಇತರೆ 53 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು 169 ಕೋಟಿ ರು. ಮೊತ್ತದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ಸಿಕ್ಕಿದೆ ಎಂದರು.

ಎಸ್ಸಿ, ಎಸ್ಟಿ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ: ಸಂಪುಟ ನಿರ್ಧಾರ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಾನಗುಂದಿ ಮತ್ತು ಇತರೆ 260 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು 217.33 ಕೊಟಿ ರು. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸಂತೆ ಮುದ್ದಾಪುರ ಮತ್ತು ಇತರೆ 164 ಜನವಸತಿಗಳು ಬಾತಿ ಹೆಬ್ಬಾಳ ಮತ್ತು ಇತರೆ 18 ಜನವಸತಿಗಳು ಮತ್ತು ಹರಿಹರ ತಾಲೂಕಿನ ಕೊಂಡಜ್ಜಿ ಮತ್ತು ಇತರೆ 10 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 482 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ದೊರೆತಿದೆ. ಹಾನಸ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಆನಂದೂರು ಮತ್ತು ಇತರೆ 84 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ 94.20 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

click me!