ಬಜೆಟ್‌ನಲ್ಲಿ ಮುಸ್ಲಿಂರಿಗೆ ಆದ್ಯತೆ ನೀಡಿದರೆ ನಾನು ವಿರೋಧಿಸುವುದಿಲ್ಲ: ಶ್ರೀರಾಮುಲು

Published : Mar 09, 2025, 07:41 AM ISTUpdated : Mar 09, 2025, 07:58 AM IST
ಬಜೆಟ್‌ನಲ್ಲಿ ಮುಸ್ಲಿಂರಿಗೆ ಆದ್ಯತೆ ನೀಡಿದರೆ ನಾನು ವಿರೋಧಿಸುವುದಿಲ್ಲ: ಶ್ರೀರಾಮುಲು

ಸಾರಾಂಶ

ಬಿಜೆಪಿ ಮುಖಂಡ ಬಿ.ಶ್ರೀರಾಮುಲು, ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರವು ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಬಳ್ಳಾರಿ (ಮಾ.9): ನನಗೆ ಎಲ್ಲ ಧರ್ಮಿಯರೂ ಒಂದೇ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಧರ್ಮಿಯ ಮತ್ತು ಎಲ್ಲ ಜಾತಿಯವರನ್ನು ಒಂದೇ ಭಾವನೆಯಿಂದ ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Karnataka budget 2025 | 'ಹಲಾಲ್‌ ಬಜೆಟ್‌' ಎನ್ನುವ ಬಿಜೆಪಿಯದ್ದು ಕೊಳಕು ಮನಃಸ್ಥಿತಿ: ಸಿಎಂ ಸಿದ್ದರಾಮಯ್ಯ ಕಿಡಿ!

ನಮಗೆ ಏನು, ಏಕೆ ಕೊಟ್ಟಿಲ್ಲ ಎಂಬುದಷ್ಟೇ ಮುಖ್ಯ:

ನಮಗೆ ಏನು ಕೊಟ್ಟಿಲ್ಲ ಎಂಬುದನ್ನಷ್ಟೇ ಮಾತನಾಡುತ್ತೇನೆಯೇ ಹೊರತು, ಅವರಿಗೆ ಯಾಕೆ ಕೊಟ್ಟಿರಿ ಎಂದು ಕೇಳುವುದಿಲ್ಲ. ಪಕ್ಷದ ನಿರ್ಧಾರದಂತೆ ಅಲ್ಪಸಂಖ್ಯಾತರಿಗೆ ಆದ್ಯತೆ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ. ಪಕ್ಷ ವಿರೋಧಿಸಿದರೆ ಅದು ಪಕ್ಷದ ವಿಚಾರ. ಈ ಕುರಿತು ಹೆಚ್ಚು ಪ್ರತಿಕ್ರಿಯಿಸಲಾರೆ ಎಂದರಲ್ಲದೆ, ನಾನೂ ಮುಂದಿನ ದಿನಗಳಲ್ಲಿ ಚುನಾವಣೆಗೆ ತೆರಳಬೇಕಿದೆ. ಎಲ್ಲ ಸಮುದಾಯದ ಜನರ ಬಳಿ ತೆರಳಬೇಕಾಗುತ್ತದೆ ಎಂದರು.

ಸ್ವಾರ್ಥದಿಂದ ಕೂಡಿದ ಬಜೆಟ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನ್ನು ರಾಜಕೀಯ ಸ್ವಾರ್ಥಕ್ಕಾಗಿ ಮಂಡಿಸಿದ್ದಾರೆ. ಮೊದಲ ಬಾರಿಗೆ ರಾಜ್ಯದಲ್ಲಿ ನಾಲ್ಕು ಲಕ್ಷ ಕೋಟಿಗೂ ಅಧಿಕ ಬಜೆಟ್‌ ಮಂಡಿಸಿದ ಸಿಎಂ ಅವರ ಇಡೀ ಬಜೆಟ್, ಜನಪರವಾದ ಯೋಜನೆ- ಯೋಚನೆಯಿಲ್ಲದ ಬಜೆಟ್ ಆಗಿದೆ. ಪ್ರಮುಖವಾಗಿ ಆರೋಗ್ಯ ಇಲಾಖೆ, ಕೃಷಿ, ಶಿಕ್ಷಣ, ಮೂಲ ಸೌಕರ್ಯ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಶ್ರೀರಾಮುಲು ಆರೋಪಿಸಿದರು.

ರಾಜ್ಯದ ಮೇಲೆ ಏಳು ಲಕ್ಷ ಕೋಟಿ ಸಾಲ:

₹51 ಸಾವಿರ ಕೋಟಿ ಗ್ಯಾರಂಟಿಗೆ ಮೀಸಲಿಟ್ಟಿದ್ದಾರೆ. ಆದರೆ, ನಾಲ್ಕು ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿಯ ₹900 ಕೋಟಿ ಪಿಎಫ್‌ ವಂತಿಕೆ ಕಟ್ಟುವುದನ್ನು ಸರ್ಕಾರ ನಿಲ್ಲಿಸಿದೆ. ಸಾರಿಗೆ ಸಿಬ್ಬಂದಿಯ ರಕ್ಷಣೆ, ನಿಗಮಗಳ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ. ರಾಜ್ಯದ ಮೇಲೆ ಏಳು ಲಕ್ಷ ಕೋಟಿ ಸಾಲವಿದ್ದು, ಇದರಲ್ಲಿ ಸುಮಾರು ಒಂದು ಲಕ್ಷ ಕೋಟಿ ಸಾಲವನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿಯೇ ಆಗಿದೆ. ಈ ಮೂಲಕ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.

ಎಸ್ಸಿ-ಎಸ್ಟಿಗಳಿಗೆ ಅನ್ಯಾಯ:

ಎಸ್ಸಿ, ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾರ ಬಹುದೊಡ್ಡ ಅನ್ಯಾಯ ಮಾಡಿದೆ. ಈ ಬಜೆಟ್‌ನಲ್ಲಿ ₹ 15ಸಾವಿರ ಕೋಟಿ ಬಳಕೆ ಮಾಡಿದ್ದು, ಇದಕ್ಕೆ ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಶ್ನಿಸಿದರು.

ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿದ್ಯಾರ್ಥಿ ವೇತನವಿಲ್ಲ. ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಹಣ ಮೀಸಲಿಡದೇ ಅದೇ ಸಮುದಾಯದ ಹಣ ಪಡೆಯಲಾಗುತ್ತದೆ. ಹೀಗಾಗಿ, 7ಸಿ ಕಾನೂನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಮಾತಿಗೆ ಬೆಲೆ ಇಲ್ಲ:

ರಾಹುಲ್‌ ಗಾಂಧಿ ಅವರು ಬಳ್ಳಾರಿಗೆ ಪಾದಯಾತ್ರೆ ಮೂಲಕ ಆಗಮಿಸಿದ ವೇಳೆ ಜೀನ್ಸ್ ಅಪೆರಲ್‌ ಪಾರ್ಕ್‌ ಸ್ಥಾಪನೆ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕನ ಮಾತಿಗೆ ಬೆಲೆ ಇಲ್ಲದಂತಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ವ್‌ ಗೇಟ್‌ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಆದ್ಯತೆ ನೀಡಿಲ್ಲ ಎಂದು ದೂರಿದರು.

ಇದನ್ನೂ ಓದಿ: ಮುಸ್ಲಿಂ, ಪಾಕಿಸ್ತಾನ ಎರಡೂ ಬಿಜೆಪಿಯವರಿಗೆ ಸಂಜೀವಿನಿ ಇದ್ದಂತೆ, ಪಾಕ್ ಬಜೆಟ್ ಎಂದ ಬಿಜೆಪಿಗರಿಗೆ ಸಾಹುಕಾರ ತಿರುಗೇಟು!

ಅಮಿತ್ ಶಾ ಭೇಟಿ ಮಾಡಿಲ್ಲ:

ಬೆಂಗಳೂರಿನಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಲಾಗಲಿಲ್ಲ. ಜನಾರ್ದನ ರೆಡ್ಡಿ ಶಾಸಕರು, ಹೀಗಾಗಿ ಭೇಟಿ ಮಾಡಿರಬಹುದು. ಹೈಕಮಾಂಡ್‌ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಭೇಟಿಯಾಗುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ಮುಖಂಡ ಗುರುಲಿಂಗನಗೌಡ, ಪಾಲಿಕೆ ಸದಸ್ಯ ಗೋವಿಂದರಾಜುಲು, ಗುಡಿಗಂಟಿ ಹನುಮಂತಪ್ಪ, ವೇಮಣ್ಣ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್