'ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ' ತೀವ್ರ ಚರ್ಚೆ ಹುಟ್ಟುಹಾಕಿದ ಶಾಸಕ ಹರೀಶ್ ಪೂಂಜಾರ ಮತ್ತೊಂದು ಪೋಸ್ಟ್!

By Ravi JanekalFirst Published Feb 16, 2024, 8:11 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 44 ಸಾವಿರ ಕೋಟಿ ರೂ. ಅಧಿಕ ಗಾತ್ರದ ಬಜೆಟ್ ಆಗಿತ್ತು. ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಸದನದೊಳಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿ ಕೋಲಾಹಲ ನಡೆದುಹೋಯ್ತು.

ದಕ್ಷಿಣ ಕನ್ನಡ (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 44 ಸಾವಿರ ಕೋಟಿ ರೂ. ಅಧಿಕ ಗಾತ್ರದ ಬಜೆಟ್ ಆಗಿತ್ತು. ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಸದನದೊಳಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿ ಕೋಲಾಹಲ ನಡೆದುಹೋಯ್ತು.

ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ ಬಿಜೆಪಿ ನಾಯಕರು ಸಿಎಂ ಮಂಡಿಸಿರುವ ಬಜೆಟ್ ಕಳಪೆ ಬಜೆಟ್, ರಾಜ್ಯದ ಜನರಿಗೆ ಮೋಸವಾಗಿದೆ. ಇದರಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ ಎಂದು ಪ್ರತಿಭಟನೆ ನಡೆಸಿದರು. 'ನಮ್ಮ ತೆರಿಗೆ ನಮ್ಮ ಹಕ್ಕು ನಮ್ಮ ತೆರಿಗೆ ನಮಗೆ ಕೊಡಿ. ದಕ್ಷಿಣ ಕನ್ನಡದ ತೆರಿಗೆ ದಕ್ಷಿಣ ಕನ್ನಡಕ್ಕೆ ನೀಡಿ, 'ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ' ಎಂದು ದಕ್ಷಿಣ ಕನ್ನಡದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು ಮತ್ತೆ ವಿವಾದ ಹುಟ್ಟುಹಾಕಿದೆ.

'ಹಿಂದೂಗಳ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಲಿ': ಭಾರೀ ವಿವಾದ ಸೃಷ್ಟಿಸಿದ ಶಾಸಕ ಹರೀಶ್ ಪೂಂಜಾ ಪೋಸ್ಟ್!

ರಾಜ್ಯ ಬಜೆಟ್ ಬೆನ್ನಲ್ಲೇ ಇದೀಗ ಹರೀಶ್ ಪೂಂಜಾ ದಕ್ಷಿಣ ಕನ್ನಡ ತೆರಿಗೆ ದಕ್ಷಿಣ ಕನ್ನಡಕ್ಕೆ ಪೋಸ್ಟ್ ತೀವ್ರ ಚರ್ಚೆ ಹುಟ್ಟುಹಾಕಿದೆ. ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅನುದಾನ ಘೋಷಣೆ ಮಾಡದ ಹಿನ್ನೆಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಹರೀಶ್ ಪೂಂಜಾ, ನಮ್ಮ ತೆರಿಗೆ ಮುಸ್ಲಿಮರ ಅಭಿವೃದ್ಧಿ ಬಳಕೆಯಾಗ್ತಿದೆ ಎಂದು ಮಂಗಳೂರಿನಲ್ಲಿ ಹಜ್ ಭವನಕ್ಕೆ ಹತ್ತು ಕೋಟಿ ಮೀಸಲಿಟ್ಟಿರುವುದಕ್ಕೆ ಕಿಡಿಕಾರಿದ್ದಾರೆ. 

ತೆರಿಗೆ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯದ ಸತ್ಯಾಂಶವನ್ನ ಪೂಂಜಾ ಒಪ್ಪಿಕೊಳ್ಳಬೇಕು: ಸಚಿವ ದಿನೇಶ್ ಗುಂಡೂರಾವ್

ಈ ಹಿಂದೆಯೂ ಶಾಸಕ ಹರೀಶ್ ಪೂಂಜಾ ಹಿಂದೂಗಳ ತೆರಿಗೆ ಹಿಂದೂಗಳಿಗೆ ನೀಡಿ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರದ ಮೋದಿ ಸರ್ಕಾರದ ವಿರುದ್ಧದ ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಿದ 'ನನ್ನ ತೆರಿಗೆ... ನನ್ನ ಹಕ್ಕು' ಅಭಿಯಾನಕ್ಕೆ ಪ್ರತಿಯಾಗಿ  ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬ ಹೊಸ ವಾದದ ಮೂಲಕ ಚರ್ಚೆ ಹುಟ್ಟುಹಾಕಿದ್ದರು. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು. ಹಿಂದೂಗಳ ಹಣ ಹಿಂದೂ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಹಿಂದೂಗಳು ಕಟ್ಟಿದ ತೆರಿಗೆ ಹಣ ಇತರ ಧರ್ಮದ ಜನರಿಗೆ ಸೇರುವುದು ಅನ್ಯಾಯ ಎಂದು ವಾದಿಸಿದ್ದರು. ಇದೀಗ ಮತ್ತೆ ದಕ್ಷಿಣ ಕನ್ನಡ ತೆರಿಗೆ ದಕ್ಷಿಣ ಕನ್ನಡಕ್ಕೆ ನೀಡಿ ಎಂಬ ಪೋಸ್ಟ್ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.

 

click me!