ರಾಜ್ಯಸಭೆ: ಹೈಕಮಾಂಡ್‌ ನಡೆಗೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಅಸಮಾಧಾನ

By Kannadaprabha NewsFirst Published Jun 12, 2020, 10:09 AM IST
Highlights

ಕೋರ್‌ ಕಮಿಟಿಯ ನಿರ್ಧಾರ ಕೈಬಿಟ್ಟು ಬೇರೆಯವರನ್ನು ನೇಮಿಸಿದ್ದೇಕೆ?| ಮೊದಲೇ ಹೇಳಿದ್ದರೆ ರಾಜ್ಯದಿಂದಲೇ ಗಸ್ತಿ, ಕಡಾಡಿ ಹೆಸರು| ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಘಟಕದ ಯಾವುದೇ ಹಿರಿಯ ನಾಯಕರು ಹೈಕಮಾಂಡ್‌ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿಯಲ್ಲಿ ಇಲ್ಲ|

ಬೆಂಗಳೂರು(ಜೂ.12): ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿಯ ಶಿಫಾರಸನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಕೊನೆಯ ಕ್ಷಣದಲ್ಲಿ ತಮ್ಮದೇ ಆಯ್ಕೆಯ ಇಬ್ಬರನ್ನು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿರುವ ಬಿಜೆಪಿ ಹೈಕಮಾಂಡ್‌ ಕ್ರಮಕ್ಕೆ ಸರ್ಕಾರ ಹಾಗೂ ಪಕ್ಷದ ರಾಜ್ಯ ಘಟಕದಲ್ಲಿ ತೀವ್ರ ಅಸಮಾಧಾನ ಹೊಗೆಯಾಡತೊಡಗಿದೆ.

ಬಿಜೆಪಿ ಸಂಘಟನೆಯಲ್ಲಿ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಾಗಿಯೇ ಕೋರ್‌ ಕಮಿಟಿಗಳನ್ನು ರಚಿಸಲಾಗಿದೆ. ಅಲ್ಲಿ ಸುದೀರ್ಘ ಚರ್ಚೆ, ವಾದ-ಪ್ರತಿವಾದದ ನಂತರವೇ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹಾಗಿರುವಾಗ ಆ ಕೋರ್‌ ಕಮಿಟಿಯ ನಿರ್ಣಯ ಸರಿಯಿಲ್ಲ ಎಂಬಂತೆ ಹೈಕಮಾಂಡ್‌ ಬಹಿರಂಗವಾಗಿ ನಡೆದುಕೊಂಡಿರುವುದು ಸರಿಯಲ್ಲ ಎನ್ನುವ ಚರ್ಚೆ ಪಕ್ಷದಲ್ಲಿ ಗಂಭೀರವಾಗಿ ನಡೆದಿದೆ.

ರಾಜ್ಯಸಭೆಯಂತೆ ಪರಿಷತ್‌ನಲ್ಲಿಯೂ ಬಿಜೆಪಿ ಶಾಕ್; ಗುಟ್ಟು ಬಿಟ್ಟ ಕಟೀಲ್!

ಕೋರ್‌ ಕಮಿಟಿ ಸಭೆ ನಡೆಯುವುದಕ್ಕೂ ಮೊದಲೇ ಈ ಬಾರಿ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಇಂತಿಂಥ ಮಾನದಂಡ ಅನುಸರಿಸಿ ಎಂಬ ಸಲಹೆಯನ್ನಾದರೂ ನೀಡಬಹುದಿತ್ತು. ಅದು ಬೇಡ ಎಂದಾದರೆ ನೇರವಾಗಿ ಇಂಥವರ ಹೆಸರುಗಳನ್ನೇ ಶಿಫಾರಸು ಮಾಡಿ ಎಂಬ ಸೂಚನೆಯನ್ನೂ ಕೊಡಬಹುದಿತ್ತು. ಹಾಗೆ ಮಾಡದೆ ರಾಜ್ಯ ಘಟಕದಿಂದ ಶಿಫಾರಸು ಮಾಡಿ ಕಳುಹಿಸುವವರೆಗೆ ಸುಮ್ಮನಿದ್ದು, ಆ ಶಿಫಾರಸುಗೊಂಡ ಹೆಸರುಗಳು ಮಾಧ್ಯಮದಲ್ಲಿ ಬಹಿರಂಗಗೊಂಡ ನಂತರ ಅದನ್ನು ತಿರಸ್ಕರಿಸುವುದು ಜನತೆಗೆ ಕೆಟ್ಟಸಂದೇಶ ರವಾನಿಸಿದಂತಾಗಲಿಲ್ಲವೇ ಎಂಬ ಪ್ರಶ್ನೆಯನ್ನು ಪಕ್ಷದ ಹಲವು ನಾಯಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಮುಖಂಡರು ಪ್ರಸ್ತಾಪಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಘಟಕದ ಯಾವುದೇ ಹಿರಿಯ ನಾಯಕರು ಹೈಕಮಾಂಡ್‌ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿಯೆ ಪಕ್ಷದ ಹೈಕಮಾಂಡ್‌ ನಿಲುವನ್ನು ಸ್ವಾಗತಿಸಿ ವರಿಷ್ಠರ ಆಯ್ಕೆ ಉತ್ತಮವಾದದ್ದು ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದಲ್ಲ. ಪರಸ್ಪರ ಚರ್ಚೆ ಮೂಲಕ ವರಿಷ್ಠರು ತಮ್ಮ ನಿರೀಕ್ಷೆಯನ್ನು ರಾಜ್ಯ ಘಟಕದ ನಾಯಕರಿಗೆ ತಿಳಿಸಬಹುದಾಗಿತ್ತು. ಈಗ ಜನರೆದುರು ನಮ್ಮ ಪಕ್ಷವೇ ಪಕ್ಷದ ವರಿಷ್ಠರು ರಾಜ್ಯ ನಾಯಕರ ಮಾನ ಕಳೆದಂತಾಯಿತು. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ತೀವ್ರ ಬೇಸರ ಹೊರಹಾಕಿದರು.

ಈರಣ್ಣ ಕಡಾಡಿ ಮತ್ತು ಅಶೋಕ್‌ ಗಸ್ತಿ ಇಬ್ಬರೂ ಪಕ್ಷದ ಹಿರಿಯ ಕಾರ್ಯಕರ್ತರು. ಅವರಿಗೆ ಟಿಕೆಟ್‌ ಸಿಕ್ಕಿದ್ದು ಸಂತೋಷವೇ. ಆದರೆ, ಅವರಿಬ್ಬರ ಮನದಲ್ಲೂ ತಾವು ಪಕ್ಷದ ಹೈಕಮಾಂಡ್‌ನಿಂದ ಆಯ್ಕೆಯಾದವರು. ರಾಜ್ಯ ನಾಯಕರು ನಮ್ಮ ಹೆಸರುಗಳನ್ನು ಕಳುಹಿಸಿರಲಿಲ್ಲ ಎಂಬ ಭಾವನೆ ಬರುವುದಂತೂ ನಿಶ್ಚಿತ. ಇದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಸಮನ್ವಯತೆ ಆಧಾರದ ಮೇಲೆ ಕೆಲಸ ಮಾಡಲು ಕಷ್ಟವಾಗಬಹುದು ಎಂದೂ ಆ ನಾಯಕರು ಆತಂಕ ವ್ಯಕ್ತಪಡಿಸಿದರು.
 

click me!