
ಬೆಂಗಳೂರು (ಆ.20): ವಿರೋಧ ಪಕ್ಷಗಳ ಗದ್ದಲದ ನಡುವೆ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ಗಳ ಮಾಲೀಕತ್ವ ರಕ್ಷಿಸುವ ಉದ್ದೇಶದ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)’ ವಿಧೇಯಕ 2026 ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಭೋಜನಾ ವಿರಾಮದ ಬಳಿಕ ನಡೆದ ಕಲಾಪದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರ ಗದ್ದಲ ನಡುವೆಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ವಿಧೇಯಕವನ್ನು ಮಂಡಿಸಿದರು.
ಇದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ರ(1963ರ ಕರ್ನಾಟಕ ಅಧಿನಿಯಮ 11) ಅಡಿಯಲ್ಲಿ ಮಂಜೂರಾದ ಏಕ ಫ್ಲ್ಯಾಟ್ ಅನುಮೋದನೆಗಳು/ಅಭಿವೃದ್ಧಿ ಯೋಜನೆ ಅನುಮೋದನೆಗಳ ಭಾಗವಾಗಿರುವ ವಿಲ್ಲಾಗಳನ್ನು ಒಳಗೊಂಡಂತೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ 8ಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಯೋಜನೆಗಳಿಗೆ ಮತ್ತು ಅನುಮೋದಿತ ಬಡಾವಣೆಗಳಲ್ಲಿ ರೂಪುಗೊಂಡಿರುವ ಕಟ್ಟಡ ಸ್ಥಳಗಳಲ್ಲಿ ಅಭಿವೃದ್ಧಿ ಪಡಿಸಲಾದ 8ಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಯೋಜನೆಗಳಿಗೆ ಅನ್ವಯವಾಗಲಿದೆ.
ಅಪಾರ್ಟ್‌ಮೆಂಟ್ ಸಂಘಗಳ ರಚನೆ, ಮಾಲೀಕತ್ವದ ಹಕ್ಕು, ಬಿಲ್ಡರ್‌ಗಳ ಹೊಣೆಗಾರಿಕೆ, ತಿಂಗಳ ನಿರ್ವಹಣಾ ಶುಲ್ಕ ಮುಂತಾದ ವಿಷಯಗಳನ್ನು ಒಳಗೊಂಡಿರುವ ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ, ಹಳೆಯ ಮತ್ತು ಹೊಸ ಎಲ್ಲ ಅಪಾರ್ಟ್‌ಮೆಂಟ್‌ಗಳು ತಮ್ಮ ಸಂಘಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸುವುದು ಕಡ್ಡಾಯ ಆಗಲಿದೆ.
ಈ ವಿಧೇಯಕದ ಪ್ರಕಾರ, ಪ್ರತಿಯೊಬ್ಬ ಫ್ಲ್ಯಾಟ್ ಮಾಲೀಕರು ಜಮೀನು ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಸ್ವಯಂಚಾಲಿತವಾಗಿ ಅನುಪಾತದ ಆಧಾರದಲ್ಲಿ ಅವಿಭಜಿತ ಷೇರು (ಯುಡಿಎಸ್) ಹೊಂದಲಿದ್ದಾರೆ. ಬಿಲ್ಡರ್‌ಗಳು ಅಥವಾ ಗೃಹ ಯೋಜನೆಗಳ ಪ್ರವರ್ತಕರು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆದ 60 ದಿನಗಳ ಒಳಗೆ ಯೋಜನೆಯ ಎಲ್ಲ ದಾಖಲೆಗಳು, ಮಂಜೂರಾದ ನಕ್ಷೆಗಳು, ವಾರಂಟಿಗಳು, ನಿರ್ವಹಣಾ ಒಪ್ಪಂದಗಳು, ಕಾರ್ಪಸ್ ಫಂಡ್, ಠೇವಣಿಗಳು ಮತ್ತು ಇತರ ದಾಖಲೆಗಳನ್ನು ಅಪಾರ್ಟ್‌ಮೆಂಟ್ ಸಂಘಕ್ಕೆ ಹಸ್ತಾಂತರಿಸಬೇಕು. ಬಾಕಿ ನಿರ್ವಹಣಾ ಶುಲ್ಕವನ್ನು ಬಡ್ಡಿ ಸಹಿತ ವಸೂಲಿ ಮಾಡಲು ಸಂಘಗಳಿಗೆ ಹಕ್ಕು ಸಿಗಲಿದೆ.
ಪ್ರತಿಯೊಂದು ಅಪಾರ್ಟ್‌ಮೆಂಟ್‌ನ ‘ಸೂಪರ್ ಬಿಲ್ಟ್‌ಪ್ ಏರಿಯಾ’ಕ್ಕೆ ಅನುಗುಣವಾಗಿ ನಿರ್ವಹಣಾ ಶುಲ್ಕ ವಿಧಿಸಬೇಕು ಎಂದು ಕಾನೂನಿನಲ್ಲಿದ್ದರೂ, ವೈಯಕ್ತಿಕ ನಿವಾಸಿಗಳು ಪಡೆಯುವ ವಿಶೇಷ ಸೇವೆಗಳು ಅಥವಾ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲು ಮಸೂದೆ ಅವಕಾಶ ನೀಡಿದೆ. ಅಪಾರ್ಟ್‌ಮೆಂಟ್ ಅನ್ನು ಮಾರಲು ಬಯಸುವ ಮಾಲೀಕರು, ಯಾವುದೇ ಬಾಕಿ ಹಣ ಉಳಿಸಿಕೊಂಡಿಲ್ಲವೆಂದು ಸಂಘದಿಂದ ಪ್ರಮಾಣಪತ್ರ ಪಡೆಯಬೇಕು. ಮಾರಾಟವಾಗದ ಫ್ಲ್ಯಾಟ್‌ಗಳಿಗೂ ಬಿಲ್ಡರ್‌ಗಳು ನಿರ್ವಹಣಾ ಶುಲ್ಕ ಪಾವತಿಸಬೇಕು. ಕನಿಷ್ಠ ಶೇ.75ರಷ್ಟು ಫ್ಲ್ಯಾಟ್ ಮಾಲೀಕರ ಒಪ್ಪಿಗೆ ಇದ್ದರೆ ಮಾತ್ರ ಅಪಾರ್ಟ್‌ಮೆಂಟ್‌ಗಳ ಪ್ರಮುಖ ರಚನಾತ್ಮಕ ಬದಲಾವಣೆಗಳು, ಪುನರ್ನಿರ್ಮಾಣ, ಪುನರ್ ಅಭಿವೃದ್ಧಿ ಅಥವಾ ಫ್ಲ್ಯಾಟ್ ಗಳ ಸಂಖ್ಯೆ ಅಥವಾ ಗಾತ್ರದ ಮೇಲೆ ಪರಿಣಾಮ ಬೀರುವ ಬದಲಾವಣೆ ಮಾಡಬಹುದು.
ಈ ವಿಧೇಯಕದಲ್ಲಿ ಹಂಚಿಕೆದಾರರ ಅಥವಾ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹಂಚಿಕೆ ಮಾಡಿರುವ, ಮಾರಾಟ ಮಾಡಿರುವ ಅಥವಾ ವರ್ಗಾಯಿಸಲಾಗಿರುವ ಅಪಾರ್ಟ್‌ಮೆಂಟ್‌ಗಳ ಯೋಜನೆಗಳಿಗೆ ಸಂಬಂಧಿಸಿ ಸಂಘದ ನೋಂದಣಿ ಮಾಡಬೇಕು. ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ಮೂರು ತಿಂಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಸಕ್ಷಮ ಪ್ರಾಧಿಕಾರ ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ಸಂಘವನ್ನು ನೋಂದಾಯಿಸಿ, ಪ್ರಮಾಣ ಪತ್ರ ನೀಡಲಿದೆ. ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಗರಿಷ್ಠ ಎರಡು ವರ್ಷ. ಸತತ ಎರಡು ಅವಧಿ ಪೂರ್ಣಗೊಳಿಸಿದ ಸದಸ್ಯರು ನಂತರದ ಅವಧಿಗೆ ಸ್ಪರ್ಧಿಸುವ ಅಥವಾ ನಾಮನಿರ್ದೇಶನ ಅವಕಾಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ಮೂರು ತಿಂಗಳೊಳಗೆ ಸಕ್ಷಮ ಪ್ರಾಧಿಕಾರವಾಗಿ ಬಿ ದರ್ಜೆಗಿಂತ ಕಡಿಮೆ ಇಲ್ಲದ ಸ್ಥಳೀಯ ಪ್ರಾಧಿಕಾರ ಅಥವಾ ಯೋಜನಾ ಪ್ರಾಧಿಕಾರದ ಒಬ್ಬ ಅಧಿಕಾರಿ ಅಥವಾ ಹೆಚ್ಚಿನ ಅಧಿಕಾರಿ ನೇಮಿಸಲು ಅವಕಾಶ ನೀಡಲಾಗಿದೆ. ಈ ಪ್ರಾಧಿಕಾರವು ಅಪಾರ್ಟ್‌ಮೆಂಟ್ ಸಂಘಗಳ ನೋಂದಣಿ, ರಚನೆ, ಕಾರ್ಯ ವೈಖರಿ, ಆರ್ಥಿಕ ಪರಿಸ್ಥಿತಿ ಒಳಗೊಂಡ ಯೋಜನೆಯ ವ್ಯವಹಾರಗಳ ವಿಚಾರಣೆ ನಡೆಸಲಿದೆ. ಬಿಲ್ಡರ್‌ಗಳು, ಅಪಾರ್ಟ್‌ಮೆಂಟ್ ಮಾಲೀಕರು, ಸಂಘಗಳು ಕಾಯ್ದೆಯ ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಬಡ್ಡಿ ವಿಧಿಸುವುದು, ನಿರ್ವಹಣಾ ಬಾಕಿಗಳು ಇತರೆ ಯಾವುದೇ ಮೊತ್ತವನ್ನು ಪಾವತಿಸುವಂತೆ ನಿರ್ದೇಶಿಸಿ ಆದೇಶ ಹೊರಡಿಸಲಿದೆ.
ಈ ವಿಧೇಯಕದ ಅನ್ವಯ, ಹಂಚಿಕೆದಾರ ಘೋಷಣಾಪತ್ರ ಅಥವಾ ಅದಕ್ಕೆ ಮಾಡಿರುವ ಯಾವುದೇ ತಿದ್ದುಪಡಿ ಸಲ್ಲಿಸಲು ವಿಫಲನಾದರೆ, ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ರಚನೆಗೆ ಅನುಕೂಲ ಕಲ್ಪಿಸಲು ವಿಫಲರಾದರೆ, ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರ ಪಡೆಯದೆ ಅಪಾರ್ಟ್‌ಮೆಂಟ್ ಸ್ವಾಧೀನ ಹಂಸ್ತಾಂತರಿಸಿದರೆ, ಅಪಾರ್ಟ್‌ಮೆಂಟ್ ವರ್ಗಾವಣೆ ಪತ್ರ ಬರೆದುಕೊಡಲು ವಿಫಲನಾದರೆ ಸಕ್ಷಮ ಪ್ರಾಧಿಕಾರ 1 ಲಕ್ಷ ರು. ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಬಹುದು. ಉಲ್ಲಂಘನೆ ಮುಂದುವರೆದರೆ, ಪ್ರತಿ ದಿನಕ್ಕೆ 1 ಸಾವಿರ ರು. ವರೆಗೆ ವಿಸ್ತರಿಸಬಹುದಾದ ಹೆಚ್ಚುವರಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಅಂತೆಯೇ ಬಿಲ್ಡರ್, ಅಪಾರ್ಟ್‌ಮೆಂಟ್ ಸಂಘ, ಅಪಾರ್ಟ್‌ಮೆಂಟ್ ಮಾಲೀಕರು ಕಾಯ್ದೆಯ ನಿಯ ಉಲ್ಲಂಘಿಸಿದರೆ, ಈ ಸಂಬಂಧ ದೂರು ಬಂದಲ್ಲಿ ಅಥವಾ ಸ್ವಯಂ ಪ್ರೇರಿತವಾಗಿ ಪ್ರಾಧಿಕಾರ ಪ್ರತಿ ಉಲ್ಲಂಘನೆ 20 ಸಾವಿರ ರು. ವರೆಗೆ ವಿಸ್ತರಿಸಬಹುದಾದ ದಂಡ, ಮುಂದುವರೆದರೆ ದಿನಕ್ಕೆ 1 ಸಾವಿರ ರು. ಹೆಚ್ಚುವರಿ ದಂಡ ವಿಧಿಸಬಹುದಾಗಿದೆ. ದಂಡ ಪಾವತಿಸಲು ವಿಫಲವಾದರೆ, ಭೂಕಂದಾಯ ಬಾಕಿ ಅಥವಾ ಸ್ವತ್ತು ತೆರಿಗೆ ಬಾಕಿಗಳಂತೆ ವಸೂಲಿ ಮಾಡಬಹುದು.
ಈ ವಿಧೇಯಕದ ಪ್ರಕಾರ, ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಅಪಾರ್ಟ್‌ಮೆಂಟ್ ಮಾಲೀಕರ ಕಾಳಜಿಗಳು ಮತ್ತು ಕಾನೂನು ಪ್ರಕಾರ ಕಾರ್ಯಗತಗೊಳಿಸಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ರಾಜ್ಯದ ಮಟ್ಟದ ‘ಕರ್ನಾಟಕ ರಾಜ್ಯ ಸಮಾಲೋಚನೆ ಮತ್ತು ಸಲಹಾ ಸಮಿತಿ’ ಹೆಸರಿನಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಅವಕಾಶ ನೀಡಲಾಗಿದೆ. ಈ ಸಮಿತಿಗೆ ರಾಜ್ಯ ಸರ್ಕಾರವೇ ಅಧ್ಯಕ್ಷರನ್ನು ನೇಮಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ