
ವಿಧಾನಪರಿಷತ್ತು: ಕೋಲಾರ, ಚಿಕ್ಕಬಳ್ಳಾಪುರ ಸೇರಿ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯಲ್ಲಿ ಸರ್ಕಾರದಿಂದ ಮಾಡಲಾದ ವೆಚ್ಚಕ್ಕೆ ತಕ್ಕ ಹಾಗೆ ಕಾಮಗಾರಿಗಳು ನಡೆದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಆರೋಪಿಸಿದ್ದಾರೆ.
ನಿಯಮ 72ರ ಅಡಿ ಎತ್ತಿನಹೊಳೆ ಯೋಜನೆ ಕುರಿತು ಸರ್ಕಾರದ ಗಮನ ಸೆಳೆದ ಕಾಂಗ್ರೆಸ್‌ನ ಐವಾನ್ ಡಿಸೋಜಾ, 2012ರಲ್ಲಿ ಯೋಜನೆಗೆ 8,323 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿತ್ತು. ಇದೀಗ ಆ ಮೊತ್ತ 30000 ಕೋಟಿ ರು. ದಾಟಿದೆ. ಕಳೆದ 14 ವರ್ಷಗಳಿಂದ ಯೋಜನೆ ಪೂರ್ಣಗೊಳಿಸದೇ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯವಲ್ಲವೇ ಎಂದು ಪ್ರಶ್ನಿಸಿದರು. ಭೂಸ್ವಾಧೀನ ಸೇರಿ ಮತ್ತಿತರ ಸಮಸ್ಯೆಗಳು ಇನ್ನೂ ಮುಂದುವರಿದಿದೆ. ಈ ವರ್ಷದ ನವೆಂಬರ್‌ನಲ್ಲಿ ಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಅದು ಮತ್ತಷ್ಟು ವಿಳಂಬವಾಗಲಿದೆ ಎಂದು ಆಕ್ಷೇಪಿಸಿದರು.
ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ನೀರು ಸಂಗ್ರಹಿಸಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಬರಪೀಡಿತ ತಾಲೂಕು, ನಗರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಅಲ್ಲದೆ 54 ಪ್ಯಾಕೇಜ್‌ಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ 20 ಪ್ಯಾಕೇಜ್ ಮಾತ್ರ ಪೂರ್ಣಗೊಂಡಿದೆ. ಉಳಿದವು ಇನ್ನೂ ಪ್ರಗತಿಯಲ್ಲಿವೆ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಸಾಮರ್ಥ್ಯ ಇಲ್ಲದಿದ್ದರೂ ಕಾಮಗಾರಿ ಅನುಷ್ಠಾನಕ್ಕೆ ನೀಡಲಾಗಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ 15,297 ಕೋಟಿ ರು. ವೆಚ್ಚ ಮಾಡಿದ್ದರೂ ಯೋಜನೆ ಉದ್ದೇಶ ಈಡೇರಲಿಲ್ಲ. ಇದೀಗ ನೀಡಿರುವ ಗಡುವಿನಲ್ಲೂ ಕಾಮಗಾರಿ ಪೂರ್ಣವಾಗುವುದಿಲ್ಲ.ಈಗಾಗಲೇ ಅಳವಡಿಸಲಾಗಿರುವ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ ಎಂದರು.
ಅದಕ್ಕೆ ಉತ್ತರಿಸಿದ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು 7 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದೆ. ಜತೆಗೆ 2024ರ ಸೆ.6ರಿಂದ 32.50 ಕಿ.ಮೀ.ವರೆಗೆ ನೀರು ಹರಿಸಲಾಗಿದೆ. ಉಳಿದಂತೆ 252.61 ಕಿ.ಮೀ. ಉದ್ದದ ಗುರುತ್ವ ಮುಖ್ಯ ಕಾಲುವೆ ನಿರ್ಮಾಣ, ಸಮತೋಲನಾ ಜಲಾಶಯ ನಿರ್ಮಾಣ, ಫೀಡರ್ ಪೈಪ್‌ಲೈನ್ ಕಾಲುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಅದರಲ್ಲಿ 8.87 ಕಿ.ಮೀ. ಕಾಲುವೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಬೇಕಿದ್ದು, ಅದಕ್ಕೆ ಅರಣ್ಯ ತೀರುವಳಿ ಸಿಕ್ಕಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಎಲ್ಲ ಅನುಮತಿ ಪಡೆದು ಈ ವರ್ಷದ ನವೆಂಬರ್‌ಗೆ ತುಮಕೂರಿಗೆ ಹಾಗೂ 2027ರ ಅಂತ್ಯಕ್ಕೆ ಯೋಜನೆ ಸಂಪೂರ್ಣ ಮುಕ್ತಾಯವಾಗಲಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ