
ವಿಧಾನಸಭೆ : ತೆಲಂಗಾಣ ಬಳಿಕ ಇದೀಗ ರಾಜ್ಯದಲ್ಲೂ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಕಡಿವಾಣ ಹೇರುವ ಕುರಿತು ಚಿಂತನೆ ನಡೆಯುತ್ತಿದೆ. ಅಪ್ರಾಪ್ತರ ಸಾಮಾಜಿಕ ಜಾಲತಾಣ ಬಳಕೆ ಕುರಿತು ಜಾಗೃತಿ ಮೂಡಿಸಲು ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಮಾಡಲು ನಿರ್ಧರಿಸಲಾಗಿದೆ.
ಮಕ್ಕಳ ಸಾಮಾಜಿಕ ಜಾಲತಾಣ ಬಳಕೆ ಕುರಿತ ಕಳವಳದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರವು ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ವಿಚಾರ ಪ್ರಸ್ತಾಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಬಿಜೆಪಿಯ ಸುರೇಶ್ ಕುಮಾರ್ ಮಾತನಾಡುತ್ತಾ, ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಸಣ್ಣ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ವಿಚಾರಗಳನ್ನು ನೋಡುತ್ತಾ, ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ಸುರೇಶ್ ಕುಮಾರ್ ಅವರು ಗಂಭೀರ ವಿಚಾರ ಪ್ರಸ್ತಾಪಿಸಿದ್ದಾರೆ. ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ದೂರವಿಡುವ ಸಂಬಂಧ ಫಿನ್ಲೆಂಡ್, ಆಸ್ಟ್ರೇಲಿಯಾ, ಫ್ರಾನ್ಸ್ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ನಾವು ಕೂಡ ಸಾಮಾಜಿಕ ಜಾಲತಾಣ ಹಾಗೂ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಜವಾಬ್ದಾರಿಯುತ ಬಳಕೆ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಈ ವಿಚಾರ ಚರ್ಚೆ ಹಂತದಲ್ಲಿದೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಜತೆಗೆ, ಕೃತಕ ಬುದ್ಧಿಮತ್ತೆ ಮೂಲಕ ಸಾಮಾಜಿಕ ಜಾಲತಾಣದ ವೀಡಿಯೋಗಳನ್ನು ಪರಾಮರ್ಶಿಸಲು ಚಿಂತನೆ ನಡೆಸಲಾಗಿದೆ. ಮೆಟಾ ಸಂಸ್ಥೆ ಜತೆಗೆ ಸೇರಿಕೊಂಡು ಈ ಮೂಲಕ ಡಿಜಿಟಲ್ ಡಿಟಾಕ್ಸಿಫಿಕೇಷನ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ 3 ಲಕ್ಷ ವಿದ್ಯಾರ್ಥಿಗಳು ಮತ್ತು 1 ಲಕ್ಷ ಶಿಕ್ಷಕರಿಗೆ ಸಾಮಾಜಿಕ ಜಾಲತಾಣದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಾಮಾಜಿಕ ಜಾಲತಾಣ ಬಳಕೆಯಿಂದ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆ, ಶಿಕ್ಷಣ ಕುಂಠಿತ
ಜಾಲತಾಣ ಬಳಸಿಕೊಂಡು ಮಕ್ಕಳ ದುರ್ಬಳಕೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಎಲ್ಲೆಡೆ ಆತಂಕ
ಆಸ್ಟ್ರೇಲಿಯಾ, ಫ್ರಾನ್ಸ್‌ನಲ್ಲಿ 16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜಾಲತಾಣ ಕಡಿವಾಣ
ತೆಲಂಗಾಣದಲ್ಲೂ ಇದೇ ರೀತಿಯ ಕ್ರಮಕ್ಕೆ ಒಲವು. ಅದರ ಬೆನ್ನಲ್ಲೇ ರಾಜ್ಯದಲ್ಲೂ ಅಂಥ ಚಿಂತನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ