
ರಾಯಚೂರು (ಜ.30): ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳು ಹರಿಯುತ್ತೆ. ಈ ಎರಡು ನದಿಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ರಾಜಾರೋಷವಾಗಿ ನಡೆದುಕೊಂಡು ಬರುತ್ತಿದೆ. ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಯಾರ ಭಯವೂ ಇಲ್ಲದೆ ಅಧಿಕಾರಿಗಳಿಗೆ ಅಷ್ಟೋ - ಇಷ್ಟೋ ಅಂತ ಮಾತನಾಡಿಕೊಂಡು ಅಕ್ರಮ ದಂಧೆ ನಡೆಸುತ್ತಿದ್ದಾರೆ. ಅಕ್ರಮ ಮರಳು ದಂಧೆ ಕೃಷ್ಣ ಮತ್ತು ತುಂಗಭದ್ರಾ ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ದಂಧೆ ಶುರುವಾಗುತ್ತೆ. ಎರಡು ನದಿಯ ಕೆಲವು ಪ್ರದೇಶಗಳಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಟೆಂಡರ್ ಮಾಡಿದೆ. ಆದ್ರೆ ಟೆಂಡರ್ ನಿಯಮದಂತೆ ಮರಳುಗಾರಿಕೆ ಮಾಡದೇ ಅದೇ ನೆಪದಲ್ಲಿ ಮನಬಂದಂತೆ ನದಿಯಲ್ಲಿ ಮರಳುಗಾರಿಕೆ ಮಾಡುವುದು ನಡೆಯುತ್ತಿದೆ. ಈ ಬಗ್ಗೆ ದೇವದುರ್ಗ ಶಾಸಕಿ ಸದನದಲ್ಲಿ ಧ್ವನಿ ಎತ್ತಿದ್ರು. ಅದಕ್ಕೆ ರಾಜ್ಯ ಗೃಹ ಸಚಿವರು ಸಹ ಉತ್ತರ ಸಹ ನೀಡಿದ್ರು. ಹೀಗಾಗಿ ಈಗ ರಾಯಚೂರು ಜಿಲ್ಲಾಧಿಕಾರಿ ಅಕ್ರಮ ಮರಳು ತಡೆಗಾಗಿ ಸಭೆ ನಡೆಸಿ ದೇವದುರ್ಗ, ಸಿರವಾರ, ಮಾನವಿ, ಸಿಂಧನೂರು ಮತ್ತು ಲಿಂಗಸೂಗೂರು ತಾಲೂಕು ಸೇರಿದಂತೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧೀಕೃತವಾಗಿ ಮರಳು ಸಾಗಣೆ ಕೂಡಲೇ ನಿಲ್ಲಬೇಕು. ಯಾವುದೇ ಕಡೆಗಳಲ್ಲಿ ರಾಜಾರೋಷವಾಗಿ ಮರಳು ಎತ್ತುವುದು ಕಂಡು ಬಂದಲ್ಲಿ ಅದನ್ನು ಸಹಿಸಲಾಗುವುದಿಲ್ಲ. ಅವರು ಎಷ್ಟೇ ಪ್ರಭಾವಿಗಳಾಗಿರಲಿ, ಯಾರೇ ಇರಲಿ ಅಂತವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಿ ಅಂತ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಖಡಕ್ ಸೂಚನೆ ನೀಡಿದ್ರು.
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಮಿತಿಗಳ ಸಭೆ ನಡೆಯಿತು. ಜಿಲ್ಲಾಧಿಕಾರಿ ನಿತೀಶ್ ಕೆ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ, ಮಾನವಿ ಸೇರಿದಂತೆ ಇನ್ನೀತರ ಕಡೆ ಅನಧೀಕೃತ ಮರಳು ಸಾಗಣೆ ಅವ್ಯಾಹತ ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಅಧಿಕಾರಿಗಳು ಕ್ರಮವಹಿಸಬೇಕು. ಅಕ್ರಮ ಮರಳು ದಂಧೆ ಬಗ್ಗೆ ಕೆಡಿಪಿ ಸಭೆ ಮತ್ತು ಇನ್ನಿತರ ಸಭೆಗಳಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಈ ವಿಷಯವನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ಈ ಸ್ಯಾಂಡ್ ಮಾಫಿಯಾದಲ್ಲಿ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಕೂಡದು.
ಈ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ನೋಡಿಯೂ ನೋಡದಂತೆ ಇದ್ದರೆ, ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಆಗುತ್ತೆ ಅಂತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೀಶ್ .ಕೆ. ಎಚ್ಚರಿಕೆ ನೀಡಿದ್ರು. ದಂಧೆಯಲ್ಲಿ
ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರು, ತಹಸೀಲ್ದಾರರು, ತಾಲೂಕು ಪಂಚಾಯತ್ ಇಒ, ಪಿಡಿಓ ಯಾರೇ ಇರಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲು ಕೂಡಲೇ ಶಿಫಾರಸ್ಸು ಮಾಡಲಾಗುವುದು. ಪ್ರಕರಣವು ಗಂಭೀರವಾಗಿದ್ದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆಯೇ ಎಫ್‌ಐಆರ್ ದಾಖಲಿಸಿ ಶಾಶ್ವತವಾಗಿ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಮರಳು ಸಾಗಣೆಗೆ ಬ್ರೇಕ್ ಹಾಕಬೇಕು ಎಂಬುದು ದೇವದುರ್ಗ ಸಿಟಿ ಜನರು ಹಾಗೂ ಆ ತಾಲೂಕಿನ 48 ಹಳ್ಳಿಗಳ ಒಕ್ಕೋರಲಿನ ಮನವಿ ಮತ್ತು ಒತ್ತಾಯವಾಗಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ದೇವದುರ್ಗ ತಾಲೂಕಿನಲ್ಲಿ ವಾರಗಳ ಕಾಲ ವಿಶೇಷ ಕಾರ್ಯಾಚರಣೆಗೆ ಇಳಿಯಬೇಕು. ದೇವದುರ್ಗ ಮತ್ತು ಮಾನವಿಯಲ್ಲಿ ಆರ್‌ಟಿಓ ಅಧಿಕಾರಿಗಳು ವಿಶೇಷ ಡ್ರೈ ವ್ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕಾರ್ಯಾಚರಣೆ ವೇಳೆ ಪೊಲೀಸ್ ರಕ್ಷಣೆ ಪಡೆದುಕೊಳ್ಳಿ
ಅಕ್ರಮ ಮರಳು ದಂಧೆಗೆ ನೇಮ್ ಪ್ಲೇಟ್ ಇಲ್ಲದ ಟಿಪ್ಪರ್ ಗಳು ಜಿಲ್ಲೆಯಲ್ಲಿ ರಾಜಾರೋಷವಾಗಿ ಓಡಾಟ ಮಾಡುತ್ತಿವೆ. ಎಷ್ಟೋ ವಾಹನಗಳಿಗೆ ನಂಬರ್ ಪ್ಲೇಟ್ ಸಹ ಇರುವುದಿಲ್ಲ. ಅಂತಹ ವಾಹನಗಳು ಓಡಾಟ ಮಾಡಿದ್ರು, ಪೊಲೀಸರು ಹಾಗೂ ಆರ್ ಟಿಒ ಅಧಿಕಾರಿಗಳು ನೋಡಿಯೂ ನೋಡದಂತೆ ಇರುತ್ತಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಅಂತಹ ತಪ್ಪು ಆಗಬಾರದು. ಮರಳು, ಮಣ್ಣು ತುಂಬಿಕೊಂಡು ಓಡಾಡುವ ಟಿಪ್ಪರ್, ಟ್ರಾಕ್ಟರ್‌ಗಳ ಮೇಲೆ ಕಣ್ಣಿಟ್ಟು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಾಳಿ ನಡೆಸಿ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. ಹೇವಿ ಪೆನಾಲ್ಟಿ ಹಾಕಿ ಬಿಸಿ ಮುಟ್ಟಿಸಬೇಕು. ಸೀಜ್ ಮಾಡಿ ಸುಮ್ಮನೆ ಬಿಡಬಾರದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು
ಮರಳು ತಪಾಸಣೆಗೆ ಚೆಕ್‌ಪೋಸ್ಟ್ ಸ್ಥಾಪನೆಗೆ ಸೂಚನೆ:
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಕ್ರಮ ಮರಳು ದಂಧೆ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು. ಅಷ್ಟೇ ಅಲ್ಲದೇ ದೇವದುರ್ಗ ತಾಲೂಕಿನ ಜಾಲಹಳ್ಳಿ, ಗಬ್ಬೂರ ಸೇರಿದಂತೆ ದೇವದುರ್ಗ, ಸಿರವಾರ, ಲಿಂಗಸೂಗೂರು, ಮಾನವಿ, ಸಿಂಧನೂರು ತಾಲೂಕಿನ ವಿವಿಧೆಡೆ ಕೂಡಲೇ ಚೆಕ್‌ಪೋಸ್ಟ್ ಸ್ಥಾಪನೆಗೆ ಕ್ರಮವಹಿಸಿ ಅಕ್ರಮ ಮರಳು ಸಾಗಣೆ ತಡೆಯಬೇಕು. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ಒಟ್ಟು ಮೂರು ತಂಡಗಳಾಗಿ ಚೆಕ್‌ಪೋಸ್ಟನಲ್ಲಿ ನಿಗಾ ಇಡಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ಯಾವುದೇ ಮೇಸೇಜ್ ಪಾಸಾಗದಂತೆ ಜಾಗರೂಕತೆವಹಿಸಿ
ಬೇರೆ ಬೇರೆ ಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚೆಕ್‌ಪೋಸ್ಟಗಳಿಗೆ ನಿಯೋಜನೆ ಮಾಡಬೇಕು. ಬೇರೆ ಬೇರೆ ಇಲಾಖೆಗಳಲ್ಲಿನ ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಇನ್ನೀತರ ಸಿಬ್ಬಂದಿಯನ್ನು ಕಾರ್ಯಾಚರಣೆ ನಡೆಸುವ ಸಮಿತಿಗೆ ಸೇರಿಸಿಕೊಂಡು ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಎಲ್ಲಾ ಮರಳು ಘಟಕದಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚನೆ:
ಪಟ್ಟಾ ಲ್ಯಾಂಡ್ ನಲ್ಲಿ ಹಾಗೂ ನದಿಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡುವಾಗ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹತ್ತಾರು ನಿಯಮಗಳು ಪಾಲನೆ ಮಾಡಲು ಸೂಚನೆ ನೀಡಿ ಲೈಸನ್ಸ್ ನೀಡುತ್ತಾರೆ. ಆದ್ರೆ ಲೈಸನ್ಸ್ ಪಡೆದವರು ನಿಯಮಗಳು ಗಾಳಿಗೆ ತೂರಿ ಮನಬಂದಂತೆ ಮರಳುಗಾರಿಕೆ ಮಾಡುವುದು ಕಂಡು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ
ಸಿಸಿಟಿವಿ ಅಳವಡಿಸಿ ಅವರು ಕಾರ್ಯ ನಿರ್ವಹಿಸುವಂತೆ ನೋಡಿ ನಿಗಾವಹಿಸಬೇಕು.
ಸಿಟಿಟಿವಿ ರೆಕಾರ್ಡ್ ಇಟ್ಟುಕೊಳ್ಳಬೇಕು. ಸಿಸಿಟಿವಿ ಅಳವಡಿಸಿಲ್ಲ ಎಂದು ಯಾವುದೇ ಕಾರಣಕ್ಕೂ ಸಬೂಬು ಹೇಳುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೀಜ್ ಮಾಡಿದ ಸ್ಯಾಂಡ್ ವಿಲೇವಾರಿಗೂ ಸಭೆಯಲ್ಲಿ ಸೂಚನೆ:
ಅಕ್ರಮ ಮರಳುಗಾರಿಕೆ ದಂಧೆ ಒಂದು ಕಡೆಯಾಗಿದ್ರೆ, ಮತ್ತೊಂದು ಕಡೆ ಹಲವು ಕೇಸ್ ಗಳಲ್ಲಿ ಸೀಜ್ ಮಾಡಲಾದ ಮರಳು ಜಿಲ್ಲೆಯಲ್ಲಿ ಕೆಕೆಆರ್‌ಡಿಬಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಜಲಧಾರೆಯ ದೊಡ್ಡ ಪ್ರೊಜೆಕ್ಟ್ ಅನುಷ್ಠಾನವಾಗುತ್ತಿದೆ. ನಿರ್ಮಿತಿ ಕೇಂದ್ರದಿಂದಲೂ ಕೆಲವು ಕಾಮಗಾರಿಗಳು ಚಾಲ್ತಿಯಲ್ಲಿವೆ. ಇಂತಹ ಕಾಮಗಾರಿಗಳಿಗೆ ಮಣ್ಣು ಮತ್ತು ಮರಳು ಬೇಕಾಗುತ್ತದೆ. ಇದುವೆರೆಗೆ ಜಪ್ತಿ ಮಾಡಿದ ಮರಳು ಮತ್ತು ಮಣ್ದಿಗೆ ನಿಯಮಾನುಸಾರ ಇ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಎಸಿ ಮತ್ತು ತಹಸೀಲ್ದಾರಗೆ ಸೂಚನೆ:
ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಬ್ರೇಕ್ ಹಾಕಲು ಎಸಿ ಮತ್ತು ತಹಸೀಲ್ದಾರ್ ಕೂಡ ಸಾಥ್ ನೀಡಬೇಕು. ಅಕ್ರಮ ಮರಳು ಸಾಗಣೆ ಪ್ರಕರಣಗಳ ಬಗ್ಗೆ ಎಸಿ ಮತ್ತು ತಹಸೀಲ್ದಾರ್ ವಿಶೇಷ ನಿಗಾವಹಿಸಬೇಕು. ತಮ್ಮ ಹಂತದಲ್ಲಿ ತಂಡಗಳನ್ನು ರಚಿಸಿಕೊಂಡು ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯಾವ ಕಡೆಗೆ ಎಷ್ಟು ದಾಳಿ ಮಾಡಿದ್ದೀರಿ ಎಂಬುದರ ಬಗ್ಗೆ ಟಾರ್ಗೆಟ್ ನೀಡಬೇಕು. ತಮ್ಮ ಹಂತದಲ್ಲಿ ದಾಳಿ ನಡೆಸಿ ಜೆಸಿಬಿ, ಟಿಪ್ಪರ್, ಟ್ಯಾಕ್ಟರ್ ಸೀಜ್ ಮಾಡಿ ಬಿಸಿ ಮುಟ್ಟಿಸಬೇಕು.
ಒಂದು ವಾಹನಕ್ಕೆ ಅನುಮತಿ ಪಡೆದು ನಾಲ್ಕು- ಐದು ವಾಹನಗಳ ಓಡಾಟ:
ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಒಂದು ವಾಹನಕ್ಕೆ ಅನುಮತಿ ಪಡೆದು, ನಾಲ್ಕು- ಐದು ವಾಹನಗಳಲ್ಲಿ ಮರಳು ಸಾಗಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಇವೆ. ಇದರಿಂದಾಗಿ ಪೊಲೀಸರು ಹಾಗೂ ಆರ್ ಟಿಒ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು. ರಾತ್ರಿ 9 ಗಂಟೆಯಿಂದ ಬೆಳಗಿನ 7 ಗಂಟೆವರೆಗಿನ ಅವಧಿಯಲ್ಲಿ ವಿಶೇಷ ನಿಗಾವಹಿಸಬೇಕು. ಒಂದೇ ವಾಹನಕ್ಕೆ ಅನುಮತಿ ಪಡೆದು ಒಂದೇ ನೇಮ್ ಪ್ಲೇಟ್ ಮೇಲೆ ನಾಲ್ಕಾರು ಗಾಡಿ ಓಡಿಸುವ ಜಾಲದ ಬಗ್ಗೆ ಗಮನ ಹರಿಸಬೇಕು ಎಂದು ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ಕಂಡು ಬಂದ್ರೆ ಎಫ್ ಐಆರ್
ಅಕ್ರಮ ದಂಧೆ ಬಗ್ಗೆ ಅನುಮಾನ ಬಂದ್ರೆ ಅಧಿಕಾರಿಗಳು ಕೂಡಲೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಿ, ಉಪಖನಿಜ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ ಹಲವಾರು ವಾಹನಗಳಿಗೆ ಪರವಾನಿಗೆ ಇಲ್ಲದೇ, ನಂಬರ್ ಪ್ಲೇಟ್ ಇಲ್ಲದೇ ಹಾಗೂ ಜಿಪಿಎಸ್ ನೋಂದಣಿ ಇಲ್ಲದೇ ಅನಧೀಕೃತವಾಗಿ ಉಪ ಖನಿಜ ಸಾಗಣೆ ಮಾಡುವ ಬಗ್ಗೆ ದೂರುಗಳನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಯಾರ ಮಾತಿಗೂ ಅಧಿಕಾರಿಗಳು ಕಿವಿಕೊಡದೇ ತಮ್ಮ ಕರ್ತವ್ಯ ತಾವು ನಿಷ್ಠೆಯಿಂದ ಮಾಡಿ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕುವಂತೆ ಸಭೆಯಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ