ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 3 ರಿಂದ ಆರಂಭವಾಗುತ್ತಿದೆ. ಪದವಿ ಪೂರ್ವ ಶಿಕ್ಷಣ ಮಂಡಳಿಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ.
ಹಾವೇರಿ [ಮಾ.03]: ಮಾ. 4ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ನಕಲು ಮುಕ್ತ ಹಾಗೂ ಪಾರದರ್ಶಕ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಮಂಡಳಿಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಬಿಗಿಭದ್ರತೆಯನ್ನು ಕೈಗೊಂಡಿದೆ. ಎಲ್ಲ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಮಾ. 4ರಿಂದ 23ರ ವರೆಗೆ ನಡೆಯಲಿರುವ ಪರೀಕ್ಷೆಗೆ ಜಿಲ್ಲೆಯಾದ್ಯಂತ 23 ಪರೀಕ್ಷಾ ಕೇಂದ್ರಗಳನ್ನು ಗುರ್ತಿಸಲಾಗಿದೆ. ತಾಲೂಕಾವಾರು ವಿವರದಂತೆ ಹಾವೇರಿ 4, ಸವಣೂರು 1, ಶಿಗ್ಗಾಂವಿ 2, ಹಾನಗಲ್ಲ 3, ಹಿರೇಕೆರೂರು 4, ಬ್ಯಾಡಗಿ 2, ರಾಣಿಬೆನ್ನೂರು 7 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ವರ್ಷ ಜಿಲ್ಲೆಯಿಂದ 14588 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ನೋಂದಾಯಿಸಿಕೊಂಡಿದ್ದಾರೆ. ಕಲಾ ವಿಭಾಗದಿಂದ 6941, ವಾಣಿಜ್ಯ ವಿಭಾಗದಿಂದ 4868 ಹಾಗೂ ವಿಜ್ಞಾನ ವಿಭಾಗದಿಂದ 2779 ವಿದ್ಯಾರ್ಥಿಗಳು ಒಳಗೊಂಡಂತೆ ಒಟ್ಟಾರೆ 14588 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ 12261 ರೆಗ್ಯೂಲರ ವಿದ್ಯಾರ್ಥಿಗಳು , 1707 ಪುನರಾವರ್ತಿತ ವಿದ್ಯಾರ್ಥಿಗಳು, 620 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ.
undefined
ಪಾರದರ್ಶಕ ಪರೀಕ್ಷೆಗಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾ ಜಾಗೃತ ದಳ ತಂಡ ರಚಿಸಲಾಗಿದೆ. ಪ್ರತಿ ತಾಲೂಕಿಗೊಂದರಂತೆ ಎಂಟು ಸಿಟ್ಟಿಂಗ್ ಸ್ಕಾಡ್‌ಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ರೋಟೆಶನ್ ಮಾದರಿಯಲ್ಲಿ ತಲಾ ಇಬ್ಬರು ಸಿಟ್ಟಿಂಗ್ ಸ್ಕಾ$್ವಡ್‌ಗಳನ್ನು ಹಾಗೂ ಜಾಗೃತ ದಳದ ಸದಸ್ಯರು ಹಾಜರಿರುವಂತೆ ನಿಯೋಜಿಸಲಾಗಿದೆ. ಖಜಾನೆಯಿಂದ ಪ್ರತಿದಿನದ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಸೂಕ್ತ ಬಂದೋಬಸ್ತಿನೊಂದಿಗೆ ರವಾನಿಸಲಾಗುವುದು. ಈ ಉದ್ದೇಶಕ್ಕಾಗಿ ತ್ರಿ-ಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ರವಾನಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಪೊಲೀಸ್ ಪಹರೆಯೊಂದಿಗೆ ಪರೀಕ್ಷಾ ಕೇಂದ್ರ ತಲುಪುವ ವ್ಯವಸ್ಥೆ ಮಾಡಲಾಗಿದೆ.
SSLC, PUC, ಡಿಗ್ರಿ ಪಾಸಾದವರಿಗೂ ಕೇಂದ್ರ ಸರ್ಕಾರಿ ಹುದ್ದೆ..
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣಗಳ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ತಕ್ಷಣವೇ ಸೂಕ್ತಚಿಕಿತ್ಸೆ ನೀಡಲು ಆರೋಗ್ಯ ಸಹಾಯಕರ ಸೇವೆ ಪರೀಕ್ಷಾ ಕೇಂದ್ರದಲ್ಲಿ ಲಭ್ಯವಿರುವಂತೆ ಕ್ರಮವಹಿಸಲಾಗಿದೆ.
ಮೊಬೈಲ್-ಎಲೆಕ್ಟ್ರಾನಿಕ್ ಡಿವೈಸ್ ನಿಷೇಧ ಪರೀಕ್ಷೆ ನಡೆಯುವಾಗ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಇ-ಕ್ಯಾಮೆರಾ, ಲ್ಯಾಪ್‌ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಝೇರಾಕ್ಸ್ ಅಂಗಡಿಗಳನ್ನು ನಿಷೇಧಿತ ಪ್ರದೇಶದಲ್ಲಿ ಮುಚ್ಚುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟುನಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಭಯವಿಲ್ಲದೇ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬಹುದು. ಜಿಲ್ಲಾಡಳಿತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳು ನಡೆಯುವಂತೆ ಕಟ್ಟೆಚ್ಚರವಹಿಸಿದೆ ಎಂದು ಪದವಿ ಪೂರ್ವ ಶಿಕ್ಷಣ ಇಳಾಖೆಯ ಉಪನಿರ್ದೇಶಕ ನಿರಂಜನ ಜೆ.ಸಿ., ತಿಳಿಸಿದ್ದಾರೆ.