ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ, 31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ ಪೂಜಾರಿ (51)ಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮಧ್ಯಾಹ್ನ ಷರತ್ತುಬದ್ಧ ಜಾಮೀನು ನೀಡಿದೆ.
ಹುಬ್ಬಳ್ಳಿ (ಜ.6) : ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ, 31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ ಪೂಜಾರಿ (51)ಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮಧ್ಯಾಹ್ನ ಷರತ್ತುಬದ್ಧ ಜಾಮೀನು ನೀಡಿದೆ.
ಬಾಬರಿ ಮಸೀದಿ ನೆಲಸಮವಾಗುವ ಹಿಂದಿನ ದಿನ ಅಂದರೆ, 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯಲ್ಲಿ ಗಲಭೆ ನಡೆದಿತ್ತು. ಈ ಗಲಭೆಯ ಆರೋಪಿಗಳಲ್ಲಿ ಶ್ರೀಕಾಂತ ಪೂಜಾರಿ ಕೂಡ ಒಬ್ಬ. ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಡಿ.29ರಂದು ಶ್ರೀಕಾಂತ ಪೂಜಾರಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದರು. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿರುವಾಗ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗಿದೆ ಎಂದು ಆರೋಪಿಸಿ, ಬಿಡುಗಡೆಗಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.
undefined
ಹುಬ್ಬಳ್ಳಿಯ ಕರ ಸೇವಕನ ಬಂಧನ ಪ್ರಕರಣ ಇಂದು ಶ್ರೀಕಾಂತ್ ಗೆ ಬಿಡುಗಡೆ ಭಾಗ್ಯ?
ಈ ಮಧ್ಯೆ, ಶ್ರೀಕಾಂತ ಪರ ವಕೀಲರಾದ ಸಂಜಯ ಬಡಸ್ಕರ್ ಹಾಗೂ ಅಶೋಕ ಅಣ್ವೇಕರ್ ಜ.3ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರತಿಯಾಗಿ ಶಹರ ಠಾಣೆ ಪೊಲೀಸರು ತಕರಾರು ಸರ್ಜಿ ಸಲ್ಲಿಸಿ ಆರೋಪಿಗೆ ಜಾಮೀನು ನೀಡದಂತೆ ವಿನಂತಿಸಿದ್ದರು. ಸರ್ಕಾರದ ಪರ ಬಿ.ಎನ್. ಅಮರಾವತಿ ವಾದ ಮಂಡಿಸಿದ್ದರು. ಗುರುವಾರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ಎರಡೂ ಕಡೆಯ ವಾದ ಆಲಿಸಿ, ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು. ಶುಕ್ರವಾರ ಜಾಮೀನು ನೀಡಲಾಗಿದೆ.
ಶ್ರೀಕಾಂತ ಸದ್ಯ ಹುಬ್ಬಳ್ಳಿಯ ಉಪಕಾರಾಗೃಹದಲ್ಲಿದ್ದು, ನ್ಯಾಯಾಲಯದ ಆದೇಶ ಪ್ರತಿಯನ್ನು ಉಪಕಾರಾಗೃಹಕ್ಕೆ ಹಾಜರುಪಡಿಸಬೇಕಿದೆ. ಹೀಗಾಗಿ, ಶನಿವಾರ ಆತನ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಶ್ರೀಕಾಂತ ಪರ ವಕೀಲ ಸಂಜಯ ತಿಳಿಸಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಬೆನ್ನಲ್ಲೇ ದತ್ತಪೀಠ ಹಳೇ ಕೇಸ್‌ಗೂ ಮರುಜೀವ?: ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು?
ಇಬ್ಬರಿಂದ ಜಾಮೀನು, ತಲಾ ಒಂದೊಂದು ಲಕ್ಷದಂತೆ ಎರಡು ಬಾಂಡ್ ಸಲ್ಲಿಕೆ, ಸಾಕ್ಷ್ಯ ನಾಶ ಮಾಡಬಾರದು, ನ್ಯಾಯಾಲಯದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು, ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬೇಕೆಂದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತುಗಳನ್ನು ವಿಧಿಸಿ, ಜಾಮೀನು ನೀಡಲಾಗಿದೆ.