
ಬೆಂಗಳೂರು (ಜೂ.14): ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ ಸಿನಿಮಾದ ಪ್ರೀಕ್ವಲ್ ಕಾಂತಾರ-1 ಚಿತ್ರಕ್ಕೆ ವಿಘ್ನಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದೇ ತಿಂಗಳ ಅಂತರದಲ್ಲಿ ಸಿನಿಮಾದಲ್ಲಿ ಭಾಗಿಯಾಗಿದ್ದ ಮೂವರ ಸಾವಿನ ಬೆನ್ನಲ್ಲಿಯೇ ಶನಿವಾರ ಮತ್ತೊಂದು ವಿಘ್ನ ಸಿನಿಮಾ ತಂಡಕ್ಕೆ ಎದುರಾಗಿದೆ.
ಕಾಂತಾರ-1 ಶೂಟಿಂಗ್ ಸೆಟ್ ನಲ್ಲಿ ಮತ್ತೊಂದು ಮಹಾ ದುರಂತ ಸಂಭವಿಸಿದ್ದು, ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್ ದೋಣಿಯೇ ಮುಗಿಚಿಹೋಗಿದೆ. ಕ್ಯಾಮೆರಾಮ್ಯಾನ್, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ದೋಣಿ ಮುುಚಿದ ಬಳಿಕ ಕಲಾವಿದರು ಹಾಗೂ ತಂತ್ರಜ್ಞರು ಈಜುತ್ತಲೇ ದಡ ಸೇರಿಕೊಂಡಿದ್ದಾರೆ. ಕಳೆದ ವಾರ ವಿಜು ವಿ.ಕೆ. ನಿಧನದ ಬಳಿಕ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಮುಂದುವರಿದ್ದು, ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಕ್ಯಾಮೆರಾ ಸೇರಿದಂತೆ ಬೋಟ್ ನಲ್ಲಿದ್ದ ಎಲ್ಲಾ ಪ್ರಾಪರ್ಟೀಸ್ ನೀರು ಪಾಲಾಗಿದೆ. ಘಟನೆಯ ಪರಿಣಾಮ ಏನಾಗಿದೆ? ಸಾವು ನೋವುಗಳು ಉಂಟಾಗಿದೆಯೇ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ವರಾಹಿ ಹಿನ್ನಿರಿನ ಪ್ರದೇಶದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ದೋಣಿ ಮುಗುಚಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ವರಾಹಿ ಹಿನ್ನೀರು ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಮೇಲಿನ ಕೊಪ್ಪ ಎಂಬ ಮುಳುಗಡೆ ಗ್ರಾಮದ ಬಳಿ ನಡೆಯುತ್ತಿದ್ದ ಕಾಂತರ-1 ಶೂಟಿಗ್. ನಾಯಕ ನಟ ರಿಷಬ್ ಶೆಟ್ಟಿ ಇತರರು ಇದ್ದ ದೋಣಿ ನೀರಿಗೆ ಮಗುಚಿ ಕ್ಯಾಮರಕ್ಕೆ ಹಾನಿಯಾಗಿದ. ಬಳಿಕ ರಿಷಬ್ ಶೆಟ್ಟಿ ಹಾಗೂ ಇತರರು ಈಜಿ ದಡ ಸೇರಿದ್ದಾರೆ.
ಮುಳುಗಡೆ ಗ್ರಾಮವಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಇರಲಿಲ್ಲ. ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲರೂ ಪಾರಾಗಿದ್ದಾರೆ. ಚಿತ್ರನಟ ರಿಷಬ್ ಶೆಟ್ಟಿ ಸೇರಿದಂತೆ ಹಲವರು ದೋಣಿಯಲ್ಲಿ ಕುಳಿತಿದ್ದರು. ಘಟನೆಯ ನಂತರ ಚಿತ್ರೀಕರಣ ಮುಗಿಸಿ ಇದೀಗ ಯಡೂರು ಸಮೀಪದ ರೆಸಾರ್ಟ್ ಒಂದರಲ್ಲಿ ಚಿತ್ರತಂಡ ತಂಗಿದೆ.
ಮೊದಲು ಹಾಸನದಲ್ಲಿ (Hassan) ನಡೆದ ಶೂಟಿಂಗ್‌ನಲ್ಲಿ ಬೆಂಕಿ ಹಾಕಿದ್ದಕ್ಕೆ ಮರಗಳಿಗೆ ಹಾನಿಯಾಗಿತ್ತು. ಇದಾದ ಬಳಿಕ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಗವಿಗುಡ್ಡ ಪ್ರದೇಶದ ಅರಣ್ಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ಸ್ಥಳಿಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ಕಾಂತಾರ ಚಿತ್ರತಂಡದ (Kantara Film Team) ವಿರುದ್ಧ ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತು.
ಇದೆಲ್ಲದರ ಬಳಿಕ ಚಿತ್ರತಂಡದ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತವಾಗಿ, ಬಸ್‌ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಾಯಗೊಂಡಿದ್ದರು. ನಂತರ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಹ ಕಲಾವಿದ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವು ಕಂಡಿದ್ದರು. ಆದರೆ, ಸಿನಿಮಾದಲ್ಲಿ ರಾಕೇಶ್ ಅವರ ಚಿತ್ರೀಕರದ ಭಾಗ ಮುಗಿದಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ.
ಈಗ ವಾರದ ಹಿಂದೆ ಕೇರಳದ ಕಲಾವಿದ ವಿ.ಕೆ ವಿಜು ಹೃದಯಾಘಾತದಿಂದ ಸಾವನ್ನಪ್ಪಿರುವುದು ಚಿತ್ರತಂಡವನ್ನು ಚಿಂತೆಗೀಡಾಗುವಂತೆ ಮಾಡಿತ್ತು. ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ವಿಜು ಕೊನೆಯುಸಿರೆಳೆದಿದ್ದರು. ಈಗ ಇಡ ಸಿನಿಮಾ ತಂಡದ ಪ್ರಮುಖರು ಇದ್ದ ದೋಣಿ ಮುಗುಚಿ ಬಿದ್ದಿರುವ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ