
ಬೆಂಗಳೂರು (ಆ.24): ಚಂದ್ರಯಾನ-3 ಯಶಸ್ವಿಯಾಗಿ ಪೂರೈಸಿ ಭಾರತದ ಬಗ್ಗೆ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ. ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಹಲವಾರು ಕನ್ನಡಿಗ ವಿಜ್ಞಾನಿಗಳು ಹಗಲಿರುಳು ಶ್ರಮಿಸಿದ್ದು, ಇದರಲ್ಲಿ ಉತ್ತರ ಕನ್ನಡದ ಪ್ರಮೋದಾ ಹೆಗಡೆ, ಬಾಳೆಹೊನ್ನೂರಿನ ಡಾ.ಕೆ. ನಂದಿನಿ, ವಿಜಯನಗರ ಜಿಲ್ಲೆ ಮೂಲದ ಡಾ.ಬಿ.ಎಚ್.ಎಂ. ದಾರುಕೇಶ್, ವಿಜಯಪುರ (ವಿಜಾಪುರ) ಮೂಲದ ಅಭಿಷೇಕ್ ದೇಶಪಾಂಡೆ ಸೇರಿದಂತೆ ಹಲವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
ಬಾಳೆಹೊನ್ನೂರು ಮೂಲದ ಡಾ.ಕೆ. ನಂದಿನಿ ಅವರು ಚಂದ್ರಯಾನ -2ನಲ್ಲಿ ಸೇವೆ ಸಲ್ಲಿಸಿದ್ದವರು. ಅದರ ಅನುಭವದ ಮೇರೆಗೆ ಚಂದ್ರಯಾನ-3 ನಲ್ಲೂ ಸ್ಥಾನ ಪಡೆದು ಚಂದ್ರಯಾನ-2ನಲ್ಲಿ ಆಗಿದ್ದ ಲೋಪಗಳನ್ನು ಸರಿಪಡಿಸಿಕೊಂಡು ಯಶಸ್ವಿಯಾಗಿ ಚಂದ್ರಯಾನ-3 ಯೋಜನೆ ಪೂರೈಸಲು ನೆರವಾದವರು. ಇನ್ನು ವಿಜಯನಗರ ಜಿಲ್ಲೆ ಕೊಟ್ಟೂರು ಮೂಲದ ಹೆಮ್ಮೆಯ ಕನ್ನಡಿಗ ಡಾ.ಬಿ.ಎಚ್. ದಾರುಕೇಶ್ ಲ್ಯಾಂಡರ್ ಹಾಗೂ ರೋವರ್‌ನ ಅತಿಮುಖ್ಯ ಭಾಗವಾದ ಆಂಪ್ಲಿಫೈಯರ್‌ನ್ನು ಅಭಿವೃದ್ಧಿಪಡಿಸಿದ್ದರು. ಅನ್ಯ ದೇಶಗಳು ನೀಡಲು ಹಿಂದೇಟು ಹಾಕುವ ತಂತ್ರಜ್ಞಾನವನ್ನು ಸ್ವತಃ ಅಭಿವೃದ್ಧಿ ಮಾಡಿಕೊಡುವ ಮೂಲಕ ನೆರವಾಗಿದ್ದಾರೆ.
ಯಾವುದೇ ದೇಶ ಹೋಗದ ಕಡೆ ಇಂದು ಭಾರತ ಹೋಗಿದೆ: ಚಂದ್ರಯಾನ ಯಶಸ್ಸಿಗೆ ಮೋದಿ ಹರ್ಷ
ಈ ಕ್ಷಣಕ್ಕೆ ಸಾಕ್ಷಿ ಆಗಿದ್ದಕ್ಕೆ ಖುಷಿ- ದೇಶಪಾಂಡೆ: ಚಂದ್ರಯಾನ-3 ಯಶಸ್ವಿ ಬಗ್ಗೆ ಸುದ್ದಿಗಾರರೊಂದಿಗೆ ಅಭಿಷೇಕ್ ದೇಶಪಾಂಡೆ ಮಾತನಾಡಿದ ಅವರು, ‘ಭಾರತವು ವಿಶ್ವದಲ್ಲೇ ಯಾವ ದೇಶವೂ ಮಾಡದ ಸಾಧನೆ ಮಾಡಿರುವ ಈ ಕ್ಷಣಕ್ಕೆ ಸಾಕ್ಷಿಯಾಗಿರುವುದಕ್ಕೆ ಖುಷಿಯಿದೆ. ಯೋಜನೆಯ ಬಗ್ಗೆ ಏನೇ ಅಪ್ಡೇಟ್ ಇದ್ದರೂ ಮೊದಲು ಸಂವಹನ ವಿಭಾಗಕ್ಕೆ ತಲುಪುತ್ತದೆ. ಅಂತಹ ತಂಡದಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ. ದಿನದ 24 ಗಂಟೆಯೂ ಕೆಲಸ ಮಾಡಿದ್ದೇವೆ. ಆದರೂ ಹೆಮ್ಮೆ ಇದೆ’ ಎಂದು ಹೇಳಿದರು. ಉತ್ತರ ಕನ್ನಡದ ಮೂರೂರಿನ ಕೋಣಾರೆಯ ಪ್ರೊಮೋದಾ ಹೆಗಡೆ ಅವರು ಹಲವು ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಂದ್ರಯಾನ-3 ಯೋಜನೆಯಲ್ಲೂ ವಿಜ್ಞಾನಿಯಾಗಿ ಕೆಲಸ ಮಾಡಿದ್ದರು.
ಈಗ ನಮ್ಮ ಕರ್ನಾಟಕಕ್ಕೂ ಚಂದ್ರನಿಗೂ ನೇರ ನಂಟು: ಪೀಣ್ಯದಿಂದ ಚಂದ್ರಯಾನ ನಿರ್ವಹಣೆ
ಬಾಹ್ಯಾಕಾಶ ವಿಜ್ಞಾನದಲ್ಲಿ ಒಬ್ಬ ಕನ್ನಡಿಗ ವಿಜ್ಞಾನಿಯಾಗಿ ಸಾಧನೆ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ಈ ವಿಭಾಗಕ್ಕೆ ಹೆಚ್ಚು ಹೆಚ್ಚು ಕನ್ನಡಿಗರಬೇಕು ಬರಬೇಕು. ವಿಫುಲ ಅವಕಾಶಗಳಿದ್ದು ಅವುಗಳನ್ನು ಕನ್ನಡಿಗರು ಸಮರ್ಥವಾಗಿ ಬಳಸಿಕೊಳ್ಳಬೇಕು.
- ಅಭಿಷೇಕ್ ದೇಶಪಾಂಡೆ, ಚಂದ್ರಯಾನ-3ರ ಕನ್ನಡಿಗ ವಿಜ್ಞಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ