26 ವರ್ಷದ ಬಳಿಕ ರಾಜ್ಯ ಹೈಕೋರ್ಟ್‌ಗೆ ಕನ್ನಡಿಗ ಸಿಜೆ!

By Kannadaprabha News  |  First Published Oct 18, 2022, 9:19 AM IST
  • 26 ವರ್ಷದ ಬಳಿಕ ರಾಜ್ಯ ಹೈಕೋರ್ಟ್‌ಗೆ ಕನ್ನಡಿಗ ಸಿಜೆ!
  • ಕನ್ನಡಿಗರು ಕರ್ನಾಟಕ ಹೈಕೋರ್ಟ್ ಸಿಜೆ ಆಗಿದ್ದು ಇತ್ತೀಚಿನ ದಶಕದಲ್ಲಿ ಅಪರೂಪ
  • ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಜನಿಸಿ ಮಹಾರಾಷ್ಟ್ರಕ್ಕೆ ವಲಸೆ ಹೋದ ನ್ಯಾ.ವರಾಳೆ

ಬೆಂಗಳೂರು (ಅ.18) : ರಾಜ್ಯ ಹೈಕೋರ್ಟ್‌ಗೆ  ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಬಾಂಬೆ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಮೂಲತಃ ಕರ್ನಾಟಕದ ಮೂಲದವರು. ಅವರ ನೇಮಕಾತಿಯೊಂದಿಗೆ ಎರಡೂವರೆ ದಶಕದ ನಂತರ ಕನ್ನಡಿಗರೊಬ್ಬರು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದಂತಾಗಿದೆ.

ಮುಂದಿನ ಸಿಜೆಐ ಬಗ್ಗೆ ನಿರ್ಧರಿಸಿ, ಮುಖ್ಯ ನ್ಯಾಯಮೂರ್ತಿಗೆ ಕೇಂದ್ರ ಸರ್ಕಾರದ ಪತ್ರ

Tap to resize

Latest Videos

ಹೌದು! ಬೆರಳೆಣಿಕೆಯಷ್ಟುಕನ್ನಡಿಗರು ಮಾತ್ರ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಮೊದಲಿಗರು ಆರ್‌.ವೆಂಕಟರಾಮಯ್ಯ. ಕೊನೆಯದಾಗಿ 26 ವರ್ಷಗಳ ಹಿಂದೆ ಅಂದರೆ 1996ರಲ್ಲಿ ಕನ್ನಡಿಗರಾದ ನ್ಯಾ.ಎಸ್‌.ಎ.ಹಕೀಮ್‌ ಅವರು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅದಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಹುಟ್ಟಿದ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರು ರಾಜ್ಯ ಹೈಕೋರ್ಟ್‌ಗೆ ನೇಮಕಗೊಂಡಿದ್ದಾರೆ. ಆದರೆ, ಅವರು ಕಾನೂನು ಪದವಿ ಶಿಕ್ಷಣ ಪೂರೈಸಿದ್ದು, ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದು ಮಹಾರಾಷ್ಟ್ರದಲ್ಲಿ.

26 ವರ್ಷದ ಹಿಂದೆ ಒಂದು ವಾರ:

ಈ ಹಿಂದೆ ಒಂದು ರಾಜ್ಯದ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಅದೇಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವ ಸಂಪ್ರದಾಯವಿತ್ತು. ಕಾಲ ನಂತರ ಅದು ಬದಲಾಯಿತು. ಹಾಲಿ ಸಂಪ್ರದಾಯದ ಪ್ರಕಾರ ಒಂದು ರಾಜ್ಯದ ಹೈಕೋರ್ಟ್‌ ನ್ಯಾಯಮೂರ್ತಿಗಳು ಅದೇ ಹೈಕೋರ್ಚ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವುದಿಲ್ಲ. ಕೇವಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಾರಷ್ಟೆ.

ಇತರೆ ರಾಜ್ಯದ ನ್ಯಾಯಮೂರ್ತಿಗಳನ್ನು ಮತ್ತೊಂದು ರಾಜ್ಯದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗುತ್ತದೆ. 1956ರಿಂದ ಈವರೆಗೂ ಕರ್ನಾಟಕಹೈಕೋರ್ಟ್‌ನಲ್ಲಿ 31 ಮುಖ್ಯ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸಿದ್ದಾರೆ. ಅದರಲ್ಲಿ ಸುಮಾರು 9 ಮುಖ್ಯ ನ್ಯಾಯಮೂರ್ತಿಗಳು ಮಾತ್ರ ಕನ್ನಡಿಗರಾಗಿದ್ದಾರೆ.

ಕೊನೆಯದಾಗಿ 26 ವರ್ಷಗಳ ಹಿಂದೆ ಎಸ್‌.ಎಂ.ಹಕೀಮ್‌ ಅವರು ಕೇವಲ ಏಳು ದಿನ ಮಾತ್ರ (1996ರ ಮೇ 3ರಿಂದ 9ರವೆರಗೆ) ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಲೋಕಾಯುಕ್ತರಾಗಿ ನೇಮಕಗೊಂಡಿದ್ದರು. ಎರಡೂವರೆ ದಶಕದ ನಂತರ ಇದೇ ಮೊದಲ ಬಾರಿಗೆ ಕನ್ನಡಿಗರಾದ ನ್ಯಾ.ವರಾಳೆ ಅವರು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.

ಸಿಜೆಯಾಗಿದ್ದ ಕನ್ನಡಿಗರು

ನ್ಯಾ.ಆರ್‌.ವೆಂಕಟರಾಮಯ್ಯ (1956ರ ನ.1ರಿಂದ 1957ರ ಜು.6), ನ್ಯಾ.ನಿಟ್ಟರೂ ಶ್ರೀನಿವಾಸ ರಾವ್‌ (1962ರ ನ.23ರಿಂದ 1963 ಆ.7), ನ್ಯಾ ಎ.ಆರ್‌. ಸೋಮನಾಥ ಅಯ್ಯರ್‌ (1969ರ ನ.23ರಿಂದ 1969ರ ಡಿ.29), ನ್ಯಾ.ಎಂ.ಸದಾಶಿವಯ್ಯ (1969ರ ಡಿ.30ರಿಂದ 1970ರ ಸೆ.16), ನ್ಯಾ.ಎ.ನಾರಾಯಣ ಪೈ (1970 ಸೆ.17ರಿಂದ 1973ರ ಜು.6), ನ್ಯಾ.ಜಿ.ಕೆ.ಗೋವಿಂದ ಭಟ್‌ (1973ರ ಜು.7ರಿಂದ 1977ರ ಡಿ.14), ನ್ಯಾ.ಡಿ.ಎಂ.ಚಂದ್ರಶೇಖರ್‌ (1978ರ ಮಾ.22ರಿಂದ 1982ರ ಸೆ.25), ನ್ಯಾ.ಕೆ.ಭೀಮಯ್ಯ (1982ರ .28ರಿಂದ 1983ರ ಏ.10), ನ್ಯಾ.ವಿ.ಎಸ್‌.ಮಳೀಮಠ (1984ರ ಫೆ.6ರಿಂದ 1985ರ ಅ.24), ನ್ಯಾ.ಎಸ್‌.ಮೋಹನ್‌ (1989ರ ಅ.26ರಿಂದ 1991ರ ಅ.7), ನ್ಯಾ.ಎಸ್‌.ಕೆ.ಹಕೀಮ್‌ (1996ರ ಮೇ 3ರಿಂದ 1996ರ ಮೇ 9).

ಮಹಾರಾಷ್ಟ್ರದಲ್ಲಿ ಕಾನೂನು ವೃತ್ತಿ

ನ್ಯಾ.ವರಾಳೆ ಅವರು 1962 ಜೂನ್‌ 23ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜನಿಸಿದರು. ಮಹಾರಾಷ್ಟ್ರದ ಔರಂಗಾಬಾದ್‌ನ ಡಾ ಬಾಬಾಸಾಹೇಬ್‌ ಅಂಬೇಡ್ಕರ್‌ ಮರಾಠವಾಡ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. 1985ರಲ್ಲಿ ವಕೀಲ ವೃತ್ತಿ ಆರಂಭಿಸಿದರು. 90ರ ದಶಕದಲ್ಲಿ ಡಾ ಬಾಬಾಸಾಹೇಬ್‌ ಅಂಬೇಡ್ಕರ್‌ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 2008ರ ಜುಲೈ 18ರಂದು ಬಾಂಬೆ ಹೈಕೋರ್ಚ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇದಕ್ಕೂ ಮೊದಲು ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠದಲ್ಲಿ ಸಹಾಯಕ ಸರ್ಕಾರಿ ಪ್ಲೀಡರ್‌, ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಮತ್ತು ಕೇಂದ್ರ ಸರ್ಕಾರದ ಹೆಚ್ಚುವರಿ ವಕೀಲರಾಗಿ ನ್ಯಾ.ವರಾಳೆ ಸೇವೆ ಸಲ್ಲಿಸಿದ್ದರು.

ಸಿಜೆಐ ರಮಣ ನಿವೃತ್ತಿ, ಕೋರ್ಟ್‌ ಹಾಲ್‌ನಲ್ಲೇ ಕಣ್ಣೀರಿಟ್ಟ ಹಿರಿಯ ವಕೀಲ ದುಷ್ಯಂತ್‌ ದಾವೆ!

ವರಾಳೆ ಅಜ್ಜ ಡಾ ಅಂಬೇಡ್ಕರ್‌ ಸಹವರ್ತಿ ಮುಖ್ಯ ನ್ಯಾಯಮೂರ್ತಿಗಳ ಅಜ್ಜ ಬಲವಂತ ವರಾಳೆ ಅವರು ಡಾ ಬಿ.ಆರ್‌.ಅಂಬೇಡ್ಕರ್‌ ಅವರ ಸಹವರ್ತಿಯಾಗಿದ್ದರು. ಅಂಬೇಡ್ಕರ್‌ ಅವರ ಇಚ್ಛೆಯಂತೆ ಬಲವಂತ ವರಾಳೆ ಅವರು ಬೆಳಗಾವಿಯ ನಿಪ್ಪಾಣಿಯಿಂದ ಮಹಾರಾಷ್ಟ್ರದ ಔರಂಗಬಾದ್‌ಗೆ ಸ್ಥಳಾಂತರವಾದರು. ಅವರಿಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಯಾದ ‘ಪೀಪಲ್ಸ್‌ ಎಜುಕೇಷನ್‌ ಸೊಸೈಟಿ’ ಮತ್ತು ಡಾ ಅಂಬೇಡ್ಕರ್‌ ಕಾನೂನು ಕಾಲೇಜಿನ ನಿರ್ವಹಣೆ ವಹಿಸಿಕೊಂಡಿದ್ದರು. ಮುಖ್ಯ ನ್ಯಾಯಮೂರ್ತಿಗಳ ತಂದೆ ಚಾಲಚಂದ್ರ ವರಾಳೆ ಅವರು ಸಹ ಅಂಬೇಡ್ಕರ್‌ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿದ್ದು, ವಕೀಲರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಕರ್ನಾಟಕದವರಾದ ಗೀತಾ ಅವರನ್ನು ನ್ಯಾ.ಪಿ.ಬಿ.ವರಾಳೆ ಅವರ ವಿವಾಹವಾಗಿದ್ದಾರೆ.

click me!