ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದ ಬಗ್ಗೆ ಕನ್ನಡಪ್ರಭ 2022ರ ಜನವರಿಯಲ್ಲಿ ತನಿಖಾ ವರದಿಗಳ ಆರಂಭಿಸಿತ್ತು. ಓಎಂಆರ್ ಶೀಟ್ ತಿರುಚಿರುವುದು, ಬ್ಲೂಟೂತ್ ಉಪಕರಣ ಬಳಸಿ ಅಕ್ರಮ ಎಸಗಿರುವುದು ಸೇರಿ ನಾನಾ ವಿಧದ ಅಕ್ರಮಗಳು ನಡೆದ ಬಗ್ಗೆ ಪತ್ರಿಕೆ ಸತತವಾಗಿ ವರದಿ ಮಾಡಿತ್ತು.
ಆನಂದ್ ಎಂ. ಸೌದಿ
ಯಾದಗಿರಿ(ನ.11): 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿಗೆ ಮರುಪರೀಕ್ಷೆ ನಡೆಸುವಂತೆ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಶುಕ್ರವಾರ ತೀರ್ಪು ನೀಡುವುದರೊಂದಿಗೆ "ಕನ್ನಡಪ್ರಭ" ಬಯಲಿಗೆಳೆದ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.
undefined
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದ ಬಗ್ಗೆ ಕನ್ನಡಪ್ರಭ 2022ರ ಜನವರಿಯಲ್ಲಿ ತನಿಖಾ ವರದಿಗಳ ಆರಂಭಿಸಿತ್ತು. ಓಎಂಆರ್ ಶೀಟ್ ತಿರುಚಿರುವುದು, ಬ್ಲೂಟೂತ್ ಉಪಕರಣ ಬಳಸಿ ಅಕ್ರಮ ಎಸಗಿರುವುದು ಸೇರಿ ನಾನಾ ವಿಧದ ಅಕ್ರಮಗಳು ನಡೆದ ಬಗ್ಗೆ ಪತ್ರಿಕೆ ಸತತವಾಗಿ ವರದಿ ಮಾಡಿತ್ತು.
ಪಿಎಸ್‌ಐ ಅಕ್ರಮ: ಕಳಂಕಿತರ ಬಿಟ್ಟು ಇತರರಿಗೆ ಮರು ಪರೀಕ್ಷೆ ಇಲ್ಲ
ಅಕ್ರಮ ಬೆಳಕಿಗೆ ಬಂದ ಮೇಲೆ ಇದಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಲ್ಲಿ 1000ಕ್ಕೂ ಹೆಚ್ಚು ವರದಿಗಳನ್ನು "ಕನ್ನಡಪ್ರಭ" ಎಳೆಎಳೆಯಾಗಿ ಪ್ರಕಟಿಸಿದ್ದು, ಇದೀಗ ನೇಮಕಾತಿಗೆ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶಿಸುವುದರೊಂದಿಗೆ ಅವಕಾಶವಂಚಿತ ಅಭ್ಯರ್ಥಿಗಳಿಗೆ ನ್ಯಾಯ ದೊರೆದಂತಾಗಿದೆ.
ಭಾರೀ ಸಂಚಲನ:
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಪಿಎಸೈ ಅಕ್ರಮದ ಬಗೆಗಿನ "ಕನ್ನಡಪ್ರಭ"ದ ವರದಿಗಳು ಹಾಗೂ ಸರ್ಕಾರಕ್ಕೆ ಚುರುಕು ಮುಟ್ಟಿಸಿದ ಸಂಪಾದಕೀಯಗಳು ಅಂದಿನ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಅಕ್ರಮವನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿಟ್ಟುಕೊಂಡಿತ್ತು.
ಆರಂಭದಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ, ಪತ್ರಿಕಾ ವರದಿಗಳನ್ನು ಗಂಭೀರವಾಗಿ ಪರಿಗಣಿಸಲಾಗದು ಎಂದಿದ್ದರು. ಅಧಿವೇಶನದಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ ಖರ್ಗೆ ಸೇರಿದಂತೆ, ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿ. ಕೆ. ಹರಿಪ್ರಸಾದ್, ಎಂಎಲ್ಸಿ ಅರವಿಂದ ಅರಳಿ ಮುಂತಾದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನು ಮನಗಂಡ ನಂತರ ಕೊನೆಗೆ ಸಿಐಡಿ ತನಿಖೆಗೆ ನೀಡಿತ್ತು.
100ಕ್ಕೂ ಹೆಚ್ಚು ಬಂಧನ:
ರಾಜಕೀಯ ಪ್ರಭಾವಿಗಳು, ಹಿರಿಯ ಐಪಿಎಸ್ ಅಧಿಕಾರಿ, ಡಿವೈಎಸ್ಪಿ, ಸಿಪಿಐ, ಪಿಎಸೈ ದರ್ಜೆ ಅಧಿಕಾರಿಗಳು ಸೇರಿ 107 ಜನರ ಬಂಧನಕ್ಕೆ ಕಾರಣವಾಗಿದ್ದ ಈ ಅಕ್ರಮದ ತನಿಖೆಯನ್ನು ನಡೆಸಿದ ಸಿಐಡಿ, ರಾಜ್ಯದ ವಿವಿಧೆಡೆ ಸುಮಾರು 24ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, ಮೂವತ್ತು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಅಕ್ರಮವನ್ನು ಕಟುವಾಗಿ ಟೀಕಿಸಿದ್ದ ಹೈಕೋರ್ಟ್ ಇದೊಂದು ಕೊಲೆಗಿಂತಲೂ ಭೀಕರ ಹಾಗೂ ಭಯೋತ್ಪಾದನೆಗೆ ಸಮ ಎಂದು ಕಿಡಿ ಕಾರಿತ್ತು.
PSI Scam ಆರೋಪಿಗಳನ್ನು ಬಿಟ್ಟು ನೇಮಕಾತಿ ಮುಂದುವರೆಸಲು ಸಾಧ್ಯವೇ? ಹೈಕೋರ್ಟ್ ಪ್ರಶ್ನೆ
ಕೋರ್ಟ್ ಅಂಗಳಕ್ಕೆ:
ನೇಮಕಾತಿ ಪರೀಕ್ಷೆಯಲ್ಲಿ ಶೇ.75 ರಷ್ಟು ಅಕ್ರಮ ಆಗಿದೆ ಎಂಬ ಕಾರಣಗಳಿಂದಾಗಿ ಜ.19, 2022 ರಂದು ಪ್ರಕಟಗೊಂಡಿದ್ದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಗೊಳಿಸಿದ್ದ ಅಂದಿನ ಬಿಜೆಪಿ ಸರ್ಕಾರ, ಏ.29, 2022 ರಂದು ಮರು ಪರೀಕ್ಷೆಗೆ ಆದೇಶಿಸಿತ್ತು. ಆದರೆ, ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ್ದ ಆಯ್ಕೆಯಾದ ಅಭ್ಯರ್ಥಿಗಳು ಕಳಂಕಿತರ ಪ್ರತ್ಯೇಕಿಸಿ, ಉಳಿದವರಿಗೆ ನೇಮಕಾತಿ ಆದೇಶ ಪ್ರತಿ ನೀಡುವಂತೆ ಕೋರಿ ಕೆಎಟಿ ಮೊರೆ ಹೋಗಿದ್ದರಾದರೂ, ಅಲ್ಲಿ ಸರ್ಕಾರದ ತೀರ್ಮಾನವನ್ನೇ ಕೆಎಟಿ ಎತ್ತಿಹಿಡಿದಿತ್ತು. ಹೀಗಾಗಿ, ಹೈಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗಳಿಗೆ ಶುಕ್ರವಾರ (ನ.10) ರಂದು ವಿಭಾಗೀಯ ಪೀಠ ನೀಡಿದ ತೀರ್ಪಿನಿಂದಾಗಿ ಮರುಪರೀಕ್ಷೆಗೆ ಸಜ್ಜಾಗಬೇಕಿದೆ. ಈ ಮಧ್ಯೆ, ಅಕ್ರಮದ ಕುರಿತು ನಿವೃತ್ತ ನ್ಯಾ. ಜಸ್ಟೀಸ್ ವೀರಪ್ಪ ನೇತೃತ್ವದ ಆಯೋಗದ ತನಿಖೆ ನಡೆಸುತ್ತಿದೆ.
ಪಿಎಸೈ ಅಕ್ರಮ ಬಯಲಿಗೆಳೆದ ಕನ್ನಡಪ್ರಭ ತನಿಖಾ ವರದಿಗಳು ನಿಜಕ್ಕೂ ಶ್ಲಾಘನೀಯ ಹಾಗೂ ಅಭಿನಂದನೆಗೆ ಅರ್ಹ. ನೊಂದ ಅಭ್ಯರ್ಥಿಗಳಿಗೆ ನ್ಯಾಯ ನೀಡಿಸುವಲ್ಲಿ ಈ ವರದಿಗಳು ಇಂದು ಸಾರ್ಥಕವಾದಂತಾಗಿವೆ ಎಂದು ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.