ಅಭಿವೃದ್ಧಿ ಪತ್ರಿಕೋದ್ಯಮದಿಂದ ಸಮಾಜದಲ್ಲಿ ಬದಲಾವಣೆ: ರವಿ ಹೆಗಡೆ

Nirupama ks   | Kannada Prabha
Published : Aug 13, 2025, 07:28 AM IST
Ravi Hegde-Karnataka Union Of Working Journalists annual awards-New

ಸಾರಾಂಶ

ಬದಲಾದ ಕಾಲ ಘಟ್ಟದಲ್ಲಿ ಪತ್ರಿಕೋದ್ಯಮವೂ ಬದಲಾಗುತ್ತಿದೆ. ಈ ಬಗ್ಗೆ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿದ್ದಾರೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಕಾರಣ, ಅಪರಾಧ, ಎಡ, ಬಲ ಸಿದ್ಧಾಂತಗಳ ಕುರಿತಾಗಿಯೇ ಹೆಚ್ಚು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವು ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡಪ್ರಭ ಕೂಡ್ಲಿಗೆ ತಾಲೂಕು ವರದಿಗಾರ ಭೀಮಣ್ಣ ಗಜಾಪುರ ಅವರ ‘ಕೂಡ್ಲಿಗಿ ವಿಸ್ಮಯ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೇ ಗ್ರಾಮವಾಗಲಿ, ಸಣ್ಣ ಊರು ಆಗಿರಲಿ, ಅಭಿವೃದ್ಧಿ ಕುರಿತಾದ ಸುದ್ದಿ ಪ್ರಕಟವಾದರೆ ಅದು ಇಡೀ ಜಗತ್ತಿನ ಗಮನ ಸೆಳೆಯುತ್ತದೆ. ಸುದ್ದಿಗೆ ಸಂಬಂಧಿಸಿದ ವಿಷಯದಲ್ಲಿ ಸಂಶೋಧನೆ ಆಗಿದ್ದರೆ, ಅದು ಇನ್ನು ಹೆಚ್ಚು ಪ್ರಭಾವ ಬೀರುತ್ತದೆ ಎಂದರು.

ಪತ್ರಿಕೆಗಳ ಅಂದಿನ ಸುದ್ದಿ ಸಂಜೆ ವೇಳೆ ರದ್ದಿ ಎಂದು ಹೇಳಲಾಗುತ್ತದೆ. ಆದರೆ, ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆದ ವ್ಯಕ್ತಿಯೊಬ್ಬ ಮುಂದೊಂದು ದಿನ ತನ್ನ ಶ್ರಮ, ದುಡಿಮೆಯ ಮೂಲಕ ಅದ್ಭುತವಾದ ಜೀವನ ಕಟ್ಟಿಕೊಂಡಿರುವ ಸುದ್ದಿ ಪತ್ರಿಕೆಯಲ್ಲಿ ಬಂದರೆ ಎಲ್ಲರ ಗಮನ ಸೆಳೆಯುತ್ತದೆ. ಅದು ಲಕ್ಷಾಂತರ ಜನರಿಗೆ ಸ್ಫೂರ್ತಿ, ಜೀವನೋತ್ಸಾಹ ನೀಡುತ್ತದೆ. ತಾಲೂಕು ವರದಿಗಾರ ಭೀಮಣ್ಣ ಅವರು ಬರೆದಿರುವ ಇಂತಹ ವರದಿಗಳ ಸಂಗ್ರಹವಾಗಿರುವ ಕೂಡ್ಲಿಗಿ ವಿಸ್ಮಯ ಪುಸ್ತಕ ವಿಶೇಷ ಎನಿಸುತ್ತದೆ. ಇಂತಹ ಪುಸ್ತಕದ ಮೂಲಕ ಪತ್ರಿಕೆಯ ವರದಿ, ಸುದ್ದಿಗಳು ಎಲ್ಲಾ ಕಾಲಕ್ಕೂ ತಾಜಾ ಆಗಿರುತ್ತವೆ ಎಂದು ರವಿ ಹೆಗಡೆ ಹೇಳಿದರು.

ಈ ಪುಸ್ತಕವು ಕೊರೋನಾ ಕಾಲದಲ್ಲಿನ ಘಟನೆಗಳು, ಮಾನವೀಯ ವರದಿಗಳು, ಪ್ರಾಣಿ-ಪಕ್ಷಿಗಳು, ಐತಿಹಾಸಿಕ ತಾಣಗಳು ಸೇರಿದಂತೆ ವೈವಿಧ್ಯಮಯ, ಸ್ಫೂರ್ತಿದಾಯಕ ವರದಿಗಳನ್ನು ಒಳಗೊಂಡಿದೆ ಎಂದು ರವಿ ಹೆಗಡೆ ತಿಳಿಸಿದರು.

ಗಜಾಪುರ ಕಾರ್ಯವೈಖರಿ ಮಾದರಿ

ಕನ್ನಡಪ್ರಭ ಸಮನ್ವಯ ಮತ್ತು ವಿಶೇಷ ಯೋಜನೆ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ವರದಿಗಾರಿಕೆ ಜೊತೆಗೆ ಸಂಗೀತ, ಸಾಹಿತ್ಯ, ಜಾನಪದ, ಗ್ರಾಮೀಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪುಸ್ತಕಗಳನ್ನು ರಚಿಸಿರುವ ಭೀಮಣ್ಣ ಅವರ ಕಾರ್ಯವೈಖರಿ ಮಾದರಿಯಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಗ್ರಾಮಾಂತರ ಭಾಗ, ಸಣ್ಣ ಪಟ್ಟಣಗಳಲ್ಲಿನ ಸಮಸ್ಯೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಎಲ್ಲಾ ಆಯಾಮಗಳೊಂದಿಗೆ ಪರಿಶೀಲಿಸಿ ಪ್ರಕಟಿಸುವ ಬರಹಗಳು ಹೆಚ್ಚು ಪರಿಣಾಮ ಬೀರುತ್ತವೆ. ಭೀಮಣ್ಣ ಅವರು ಇಂತಹ ವರದಿಗಳಿಂದಲೇ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!