
ಬೆಳ್ತಂಗಡಿ/ಬೆಂಗಳೂರು: ನೂರಾರು ಶವ ಹೂತಿದ್ದೇನೆ ಎಂದು ಆರೋಪಿಸಿದ್ದ ಅನಾಮಿಕ ದೂರುದಾರ ಮತ್ತಷ್ಟು ಕಡೆ ಅಗೆತಕ್ಕೆ ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಆತ ತೋರಿಸಿದ ಕಡೆ 13 ಪಾಯಿಂಟ್ ಗುರುತಿಸಿ, ಉತ್ಖನನ ನಡೆಸಲಾಗಿತ್ತು. ಬಳಿಕ 14, 15, 16, 16ಎ ಪಾಯಿಂಟ್ ಗುರುತಿಸಲಾಯಿತು. 13ನೇ ಪಾಯಿಂಟ್‌ನಲ್ಲಿ ರಾಡಾರ್ ಬಳಸಿ ಹುಡುಕಿದರೂ ಏನೂ ಸಿಕ್ಕಿಲ್ಲ. ಆದರೂ, ಆತ ಇನ್ನಷ್ಟು ಕಡೆ ಅಗೆಯುವಂತೆ ಎಸ್‌ಐಟಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅಸಹಜವಾಗಿ ಸಾವನ್ನಪ್ಪಿದ ನೂರಾರು ಶವಗಳನ್ನು ನಾನೇ ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ದೂರಿನ ಮೇಲೆ ಧರ್ಮಸ್ಥಳ ಗ್ರಾಮದಲ್ಲಿ ಬಹುನಿರೀಕ್ಷಿತ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಉತ್ಖನನ ನಡೆಸಲಾಯಿತು. ಇದೇ ಮೊದಲ ಬಾರಿಗೆ ಕಾರ್ಯಾಚರಣೆ ವೇಳೆ ಡ್ರೋನ್-ಮೌಂಟೆಡ್ ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ತಂತ್ರಜ್ಞಾನ ಬಳಸಿ, ಶೋಧ ಕಾರ್ಯ ನಡೆಸಲಾಯಿತು. ಉಳಿದ ಕಡೆಯಂತೆ ಇಲ್ಲಿಯೂ ಸಾಕ್ಷಿದಾರನ ಮುಂದೆಯೇ 20 ಅಡಿಗಳವರೆಗೆ ಅಗೆಯಲಾಯಿತಾದರೂ, ಯಾವುದೇ ಕುರುಹು ಪತ್ತೆಯಾಗಲಿಲ್ಲ.
ದೂರುದಾರ ನೀಡಿದ ಹೇಳಿಕೆಯಂತೆ ಪ್ರಥಮ ಹಂತದಲ್ಲಿ 13 ಸ್ಥಳಗಳನ್ನು ಗುರುತಿಸಲಾಗಿತ್ತು. ಈ ಪೈಕಿ, 13ನೇ ಪಾಯಿಂಟ್ ಬಿಟ್ಟು, ಉಳಿದ ಕಡೆ ಉತ್ಖನನ ನಡೆಸಲಾಗಿತ್ತು ಧರ್ಮಸ್ಥಳ ಗ್ರಾಮದ ನೇತ್ರಾವತಿ-ಅಜೆಕೂರಿ ರಸ್ತೆಯ ಬದಿ ನೇತ್ರಾವತಿ ನದಿ, ಕಿಂಡಿ ಅಣೆಕಟ್ಟಿನ ಸಮೀಪ ಈ 13ನೇ ಪಾಯಿಂಟ್ ಬರುತ್ತದೆ. ಈ ಸ್ಥಳ ಹೆಚ್ಚು ವಿಸ್ತಾರವಾಗಿದ್ದು, ಸವಾಲಿನದ್ದಾಗಿದೆ. ಇಲ್ಲಿ ಕಾರ್ಯಾಚರಣೆ ನಡೆಸಲು ಹಲವು ಅಡಚಣೆಗಳಿದ್ದವು. ಒಂದೆಡೆ ನದಿ, ಕಿಂಡಿ ಅಣೆಕಟ್ಟು ಇದ್ದರೆ ಸ್ಥಳದಲ್ಲಿ ವಿದ್ಯುತ್ ಲೈನ್ ಬೇರೆ ಇದೆ. ಬದಿಯಲ್ಲೇ ರಸ್ತೆ ಕೂಡ ಇದೆ.
ಇಲ್ಲಿ ಅಗೆತ ನಡೆಸುವುದು ಹಲವು ತೊಂದರೆಗಳಿಗೂ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಆರಂಭದಲ್ಲಿ ಜಿಪಿಆರ್ ತಂತ್ರಜ್ಞಾನದ ಮೊರೆ ಹೋಗಲಾಯಿತು. ಮಧ್ಯಾಹ್ನ ಡ್ರೋನ್-ಮೌಂಟೆಡ್ ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ತಂತ್ರಜ್ಞಾನ ಬಳಸಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ, ಯಾವುದೇ ಕುರುಹು ಸಿಕ್ಕಿಲ್ಲ ಎನ್ನಲಾಗಿದೆ. ಆದರೆ, ಜಿಪಿಆರ್ ಸಿಗ್ನಲ್ ಗಳು ಅಗತ್ಯ ಇದ್ದಷ್ಟು ಆಳಕ್ಕೆ ತಲುಪಲಿಲ್ಲ, ಅಲ್ಲದೆ ನೀರಿನ ಅಂಶ ಕಂಡು ಬಂದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಹೇಳಲಾಗುತ್ತಿದೆ.
ಈ ಕಾರಣದಿಂದ ದೂರುದಾರ ಸೂಚಿಸಿದಂತೆ 13ನೇ ಸ್ಥಳದ ಕಿಂಡಿ ಅಣೆಕಟ್ಟಿನ ಸಮೀಪ ಮಧ್ಯಾಹ್ನದ ಬಳಿಕ ಸಂಜೆ 7ಗಂಟೆ ವರೆಗೂ ಹಿಟಾಚಿ ಬಳಸಿ ಶೋಧ ಕಾರ್ಯ ನಡೆಸಲಾಯಿತು. ಸುಮಾರು 20 ಅಡಿ ಆಳ, 20 ಅಡಿ ಅಗಲ, 30 ಅಡಿ ಉದ್ದದ ಹೊಂಡ ತೋಡಿ ಶೋಧ ಕಾರ್ಯ ನಡೆಸಲಾಯಿತು. ಶೋಧ ಕಾರ್ಯದ ವೇಳೆ ಹೊಂಡದಲ್ಲಿ ನೀರು ತುಂಬುತ್ತಿದ್ದ ಕಾರಣ ಪಂಪು ಬಳಸಿ ನೀರನ್ನು ಮೇಲಕ್ಕೆ ಎತ್ತಲಾಯಿತು.
ಈ ಮಧ್ಯೆ, ದೂರುದಾರ ಗುರುತಿಸಿದ್ದ ಸ್ಥಳ ಸುಮಾರು 60 ಅಡಿ ಉದ್ದ, 30 ಅಡಿ ಅಗಲವಿದ್ದು, ಜಿಪಿಆರ್ ಮೂಲಕ ಗುರುತಿಸಿದ ಜಾಗದ ಹೊರಭಾಗದಲ್ಲೂ ಶೋಧ ನಡೆದಿದೆ. ಬಳಿಕ, ಗುಂಡಿ ಮುಚ್ಚಲಾಗಿದೆ.
ಈವರೆಗೆ ಉತ್ಖನನ ಕಾರ್ಯಾಚರಣೆ ಹೊರಭಾಗಕ್ಕೆ ಕಾಣದಂತೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಮಂಗಳವಾರದ ಕಾರ್ಯಾಚರಣೆ ವೇಳೆ ಈ ರೀತಿಯ ವ್ಯವಸ್ಥೆಗಳಿಲ್ಲದೆ ಹೊರಭಾಗಕ್ಕೆ ಕಾಣುವಂತೆ ಕಾರ್ಯಾಚರಣೆ ನಡೆಸಲಾಯಿತು. ಈ ಮಧ್ಯೆ, ಮಂಗಳವಾರದ ಕಾರ್ಯಾಚರಣೆ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಎಸ್ಐಟಿ ತಂಡದಿಂದ ಅಗತ್ಯ ಮಾಹಿತಿ ಪಡೆದರು. ಸ್ಥಳದಲ್ಲಿ ಎಂದಿನಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ