ನಾವು ಬಂದೇವ, ಸಮ್ಮೇಳನ ನೋಡಲಿಕ್ಕ: ನಾಡಿನ ಬರಹಗಾರರ ಸಂತಸದ ನುಡಿಗಳು!

By Kannadaprabha News  |  First Published Dec 20, 2024, 7:52 AM IST

ನಾವು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿದರೂ ಗುರುತಿಸಿದವರಿಲ್ಲ’, ‘ನಾವು ಮಂಡ್ಯದವರೇ ಆದರೂ ನಮಗೆ ಆಮಂತ್ರಣ ಇಲ್ಲ’, ‘ಸಾಹಿತ್ಯ ಪರಿಷತ್ತಿನಿಂದ ನಮಗೆ ಸಮ್ಮೇಳನದ ಬಗ್ಗೆ ಯಾವುದೇ ಮಾಹಿತಿ ಇಲ್ಲ’, ‘ಸಮ್ಮೇಳನದಿಂದ ಸಾಹಿತ್ಯಕ್ಕೇನೂ ಪ್ರಯೋಜನ ಇಲ್ಲ’ ಎಂದೂ ಪ್ರತಿಕ್ರಿಯೆ ನೀಡಿದವರಿದ್ದಾರೆ. ‘ನಾನು ಸಮ್ಮೇಳನಕ್ಕೆ ಹೋಗುವುದೂ ಇಲ್ಲ, ನನಗೇನೂ ಅನಿಸಿಕೆಯೂ ಇಲ್ಲ’ ಎಂದೇ ಪ್ರಕಟಿಸಿ ಎಂದು ಕೆಲ ಹಿರಿಯ ಸಾಹಿತಿಗಳೂ ಪ್ರತಿಕ್ರಿಯೆ ನೀಡಿದ್ದಾರೆ. 


ಕೃಷ್ಣಮೋಹನ ತಲೆಂಗಳ

ಮಂಡ್ಯ(ಡಿ.20): ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ(ಡಿ.20) ಮೂರು ದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಭ್ರಮ. ಸಮ್ಮೇಳನವೆಂದರೆ ಭಾಷಾಭಿಮಾನ, ಪುಸ್ತಕ ಪ್ರೀತಿ, ಸಾಹಿತಿ-ಓದುಗ-ಪ್ರಕಾಶರ ಭೇಟಿ, ಗೋಷ್ಠಿ, ಮನರಂಜನೆ, ಊಟ, ಓಡಾಟ... ಹೀಗೆ ಹತ್ತಾರು ಆಯಾಮಗಳು. ಸಮ್ಮೇಳನವೆಂದರೆ ಜಾತ್ರೆಯೆಂದೂ, ಸಮ್ಮೇಳನವೆಂದರೆ ತಾಕಲಾಟಗಳೆಂದೂ, ಸಮ್ಮೇಳನವೆಂದರೆ ಪ್ರಚಾರವೆಂದೂ ಅವರವರ ಗ್ರಹಿಕೆಗೆ ತಕ್ಕುದಾದ ಹಾಗೆ ವಿಧ ವಿಧದ ವ್ಯಾಖ್ಯೆಗಳಿವೆ. ಈ ನಡುವೆ ಸಮ್ಮೇಳನದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಲು ಹೊರಟ ನಾಡಿನ ಹಿರಿಯ, ಕಿರಿಯ ಬರಹಗಾರರನ್ನು ‘ಕನ್ನಡಪ್ರಭ’ ಮಾತನಾಡಿಸಿದಾಗ ಸಿಕ್ಕಿದ ಖುಷಿಯ ತುಣುಕುಗಳು ಹಲವು.

Tap to resize

Latest Videos

undefined

ಈ ಅಭಿಪ್ರಾಯಗಳಲ್ಲದೆ, ‘ನಾವು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿದರೂ ಗುರುತಿಸಿದವರಿಲ್ಲ’, ‘ನಾವು ಮಂಡ್ಯದವರೇ ಆದರೂ ನಮಗೆ ಆಮಂತ್ರಣ ಇಲ್ಲ’, ‘ಸಾಹಿತ್ಯ ಪರಿಷತ್ತಿನಿಂದ ನಮಗೆ ಸಮ್ಮೇಳನದ ಬಗ್ಗೆ ಯಾವುದೇ ಮಾಹಿತಿ ಇಲ್ಲ’, ‘ಸಮ್ಮೇಳನದಿಂದ ಸಾಹಿತ್ಯಕ್ಕೇನೂ ಪ್ರಯೋಜನ ಇಲ್ಲ’ ಎಂದೂ ಪ್ರತಿಕ್ರಿಯೆ ನೀಡಿದವರಿದ್ದಾರೆ. ‘ನಾನು ಸಮ್ಮೇಳನಕ್ಕೆ ಹೋಗುವುದೂ ಇಲ್ಲ, ನನಗೇನೂ ಅನಿಸಿಕೆಯೂ ಇಲ್ಲ’ ಎಂದೇ ಪ್ರಕಟಿಸಿ ಎಂದು ಕೆಲ ಹಿರಿಯ ಸಾಹಿತಿಗಳೂ ಪ್ರತಿಕ್ರಿಯೆ ನೀಡಿದ್ದಾರೆ. ಇವೆಲ್ಲದರ ಹೊರತಾಗಿ ಸಾಹಿತ್ಯ ಜಾತ್ರೆಗೆ ಹೊರಟವರ ಪೈಕಿ ಹತ್ತು ಮಂದಿಯ ಮಾತುಗಳ ತೋರಣ ಇಲ್ಲಿದೆ.

ಅನ್ನ ಬೇಕು ಅಂದ್ರೆ ಕನ್ನಡ ಕಲೀಬೇಕು ಎಂಬ ವಾತಾವರಣ ಉಂಟಾಗಬೇಕು: ಗೊ.ರು. ಚನ್ನಬಸಪ್ಪ

1) ಸಾಹಿತ್ಯಾಸಕ್ತ ಸಮಾನ ಮನಸ್ಕರ ಭೇಟಿಗೆ ಸುವರ್ಣಾವಕಾಶ
-ಪ್ರೊ.ಎಂ.ಪಿ.ರೇಖಾ, ಕನ್ನಡ ಪ್ರಾಧ್ಯಾಪಕರು, ಯುವರಾಜ ಕಾಲೇಜು, ಮೈಸೂರು

ಸಾಹಿತ್ಯ ಸಮ್ಮೇಳನವೆಂದರೆ ಅದು ನುಡಿಹಬ್ಬ-ನುಡಿಜಾತ್ರೆ. ‘ಕನ್ನಡ’ದ ಕೊಡೆಯೊಳಗೆ ನಡೆಯುತ್ತಿರುವ ಹಲವು ಕ್ಷೇತ್ರಗಳ ವಿದ್ಯಮಾನಗಳ, ವಿಚಾರಗಳ ಅರಿವಿನಂಗಳ. ‘ಜಾಗತಿಕ ಜಗತ್ತಿ’ನಲ್ಲಿ ನಾಡು-ನುಡಿಯ ಕುರಿತು ಅಭಿಮಾನವಿರಿಸಿಕೊಂಡು ನಾಡಿನ ಒಳ-ಹೊರಗೆ, ನುಡಿದೀವಿಗೆಯ ಬೆಳಗಿದವರ ಯಶೋಗಾಥೆ, ಅನುಭವ ಕಥನಗಳನ್ನು ಹಂಚಿಕೊಳ್ಳುವ ವೇದಿಕೆ ಇದು. ಒಂದರ್ಥದಲ್ಲಿ ಸಾಗಿ ಬಂದ ದಾರಿಯನ್ನು ಮೆಲುಕು ಹಾಕಿಕೊಳ್ಳುತ್ತಾ ಸಾಗಬೇಕಾಗಿರುವ ಹಾದಿಯನ್ನು ಹುಡುಕಿಕೊಳ್ಳುವ ‘ಅನುಭವ ಮಂಟಪ’. ಪ್ರಾಧ್ಯಾಪಕಿಯಾಗಿ ಈ ಎಲ್ಲವನ್ನೂ ಹತ್ತಿರದಿಂದ ನೋಡಿ, ಕೇಳಿ ಗ್ರಹಿಸಿಕೊಳ್ಳುವ, ವಿದ್ಯಾರ್ಥಿಗಳಿಗೊಂದಿಷ್ಟು ಅಸ್ಮಿತೆಗಳನ್ನು ಜಾಗೃತಗೊಳಿಸುವುದರೊಂದಿಗೆ ನನ್ನನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಉದ್ದೇಶವೂ ಇದೆ. ಜೊತೆಗೆ ಸಾಹಿತ್ಯಾಸಕ್ತ ಸಮಾನ ಮನಸ್ಕ ಸ್ನೇಹಿತರ ಭೇಟಿಗೂ ಕೂಡಾ ಇದೊಂದು ಸದಾವಕಾಶ. ಹಾಗೆಯೇ ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ನನ್ನೂರು ಕೊಡಗಿನಲ್ಲಿ ಹಲವು ದಶಕಗಳಿಂದ ಬಾನುಲಿಯ ಮೂಲಕ ‘ಪುರಾಣ ಯಾನ’ದೊಂದಿಗೆ ಕನ್ನಡ ನುಡಿಯನ್ನು ಜನಮಾನಸದಲ್ಲಿ ಆತ್ಮೀಯವಾಗಿಸಿ ಮನೆ ಮಾತಾಗಿಸಿದ ನಿಡುಗಾಲದ ಗೆಳೆಯ ಸುಬ್ರಾಯ ಸಂಪಾಜೆಯ ಸನ್ಮಾನದ ಗೌರವವನ್ನು ಕಣ್ತುಂಬಿಸಿ ಸಂಭ್ರಮಿಸುವ ಸ್ವಾರ್ಥವೂ ಇದೆ.

30 ವರ್ಷಗಳ ಹಿಂದಿನ ಮಂಡ್ಯ ಸಮ್ಮೇಳನದಲ್ಲಿ ಕವನ ಓದಿದ್ದೆ!
ಪ್ರೊ ಕೃಷ್ಣೇಗೌಡ, ಮಂಡ್ಯ

ಕನ್ನಡ ನನ್ನ ಶಕ್ತಿ. ನಾನು ಈಗ ಏನಾಗಿದ್ದೇನೋ ಅದನ್ನು ಮಾಡಿದ್ದು ಕನ್ನಡ. ನನಗೊಂದು ಬುದ್ಧಿ, ವಿವೇಕ ಅಂತ ಇದ್ದರೆ ಅದನ್ನು ಪ್ರಧಾನವಾಗಿ ಪ್ರಸಾದಿಸಿದ್ದು ಕನ್ನಡ. ಕನ್ನಡದ ಹೆಸರಿನಲ್ಲಿ ಯಾವುದೇ ದೊಡ್ಡ ಸಮಾರಂಭ, ಘಟನೆ ನಡೆದರೆ ಅಲ್ಲಿ ಇರಬೇಕೆಂಬ ಆಸೆ ಸಹಜವಾಗಿ ಇರುತ್ತದೆ. ಸಮ್ಮೇಳನದ ಅಂಗಳದಲ್ಲಿ ಏಕಕಾಲದಲ್ಲಿ ಕನ್ನಡದ ಹೆಸರು ಬಹಳ ಆಯಾಮದಲ್ಲಿ ಕೇಳುತ್ತೇವೆ. ಮೂರು ದಿನ ಕನ್ನಡ ಕನ್ನಡ, ಕನ್ನಡ ಅಂತ ಕೇಳುತ್ತಿರುತ್ತೇವೆ. ಅವೆಲ್ಲವನ್ನು ಕಣ್ತುಂಬಿಸಿಕೊಳ್ಳುವ, ಕಿವಿ ತುಂಬಿಸಿಕೊಳ್ಳುವ ಸಂಭ್ರಮ ಅದು.

ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರೆ ಅಷ್ಟೇ. ಅಲ್ಲೇನು ಚರ್ಚೆ ನಡೆಯುತ್ತದೆ, ಸಂವಾದಗಳ ವಿಚಾರಗಳನ್ನು ಜನ ಗಂಭೀರವಾಗಿ ಪಾಲಿಸ್ತಾರ, ಗಂಭೀರವಾಗಿ ಕೇಳ್ತಾರ, ಗಂಭೀರವಾಗಿ ಯೋಚಿಸುತ್ತಾರ ಅನ್ನುವುದಕ್ಕಿಂತಲೂ ಹೆಚ್ಚಾಗಿ ಮೂರು ದಿನ ಎಲ್ಲರೂ ಕನ್ನಡದ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಲಕ್ಷ ಸಂಖ್ಯೆಯ ಜನಗಳ ಮನಸ್ಸಿನಲ್ಲಿ ಪದೇ ಪದೇ ಕನ್ನಡ ಪ್ರತಿಧ್ವನಿಸುವುದು ಒಂದು ಕನ್ನಡ ಪ್ರಜ್ಞೆ, ಕನ್ನಡದ ಸಂವೇದನೆ ಮೂಡಿಸುತ್ತೆ. ಅಂಥದ್ದು ನಡೆಯುವಾಗ ನಾವೂ ಅಲ್ಲಿರಬೇಕು. ಯಾಕೆಂದರೆ ನಮ್ಮಲ್ಲಿ ಇರುವುದೂ ಕನ್ನಡದ ಸಂವೇದನೆ. ಕನ್ನಡಕ್ಕೆ ಅಗಾಧ ಶಕ್ತಿ ಇದೆ. ಇಂತಹ ಅವಕಾಶ ಸಿಕ್ಕಾಗ ನಾನು ಅದರಲ್ಲಿ ಭಾಗವಹಿಸುತ್ತೇನೆ. ಇಂತಹ ಸಮ್ಮೇಳನ ಊರಿನಲ್ಲೇ ಆಗುವಾಗ ನಾನು ಹೆಚ್ಚೇ ಭಾಗವಹಿಸುತ್ತೇನೆ. ಮೂವತ್ತು ವರ್ಷಗಳ ಹಿಂದೆ 1994ರಲ್ಲಿ ಮಂಡ್ಯ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ನಾನು ಪದ್ಯ ಓದಿದ್ದೆ, ಆಗ ನಾನು ಮೂರೂ ದಿನ ಭಾಗವಹಿಸಿದ್ದೆ.

ನಮ್ಮೂರಿನ ಮೂರನೇ ಸಮ್ಮೇಳನ ಅವಲೋಕಿಸುವ ಕಾತರ ಇದೆ
-ಜಿ.ಟಿ.ವೀರಪ್ಪ, ಹಿರಿಯ ಸಾಹಿತಿ, ಮಂಡ್ಯ

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯಾಗಿ, ಸಾಹಿತ್ಯದ ದೃಷ್ಟಿಯಿಂದ ಹೋಗುತ್ತಿದ್ದೇನೆ. ಸಾಹಿತ್ಯದ ಚರ್ಚೆಗಳ ಅವಲೋಕನಕ್ಕೆ ಹೋಗುತ್ತಿದ್ದೇನೆ. ಈ ಸಲದ ಸರ್ವಾಧ್ಯಕ್ಷರಾಗಿರುವ ಗೊ.ರು.ಚ. ಅವರು 63ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಂದರ್ಭ ರಾಜ್ಯ ಕ.ಸಾ.ಪ. ಅಧ್ಯಕ್ಷರಾಗಿದ್ದರು, ನಾನು ಮಂಡ್ಯ ಜಿಲ್ಲಾಧ್ಯಕ್ಷನಾಗಿದ್ದೆ. ಈ ಹಿಂದೆ 50 ವರ್ಷಗಳ ಅವಧಿಯಲ್ಲಿ 1974 ಹಾಗೂ 1994ರಲ್ಲಿ ಎರಡು ಬಾರಿ ಮಂಡ್ಯದಲ್ಲಿ ಚೆನ್ನಾಗಿ ಸಾಹಿತ್ಯ ಸಮ್ಮೇಳನ ನಡೆದಿದೆ. ಮೂರನೇ ಸಾರಿ ಹೇಗಾಗ್ತಾ ಇದೆ ಅಂತ ಅವಲೋಕನ ಮಾಡೋಣ ಅಂತ ಹೋಗುತ್ತಿದ್ದೇನೆ.

1994ರ ಸಮ್ಮೇಳನದಲ್ಲಿ 8000 ಮಂದಿ ಅಧಿಕೃತವಾಗಿ ನೋಂದಾಯಿಸಿದ ಪ್ರತಿನಿಧಿಗಳಿದ್ದರು. ಆಗ ಪೂರ್ಣವಾಗಿ ಸಾಹಿತ್ಯಮಯವಾಗಿ ಚೆನ್ನಾಗಿ ನಡೆಯಿತು. ಈಗ ಕೇಂದ್ರ ಅಧ್ಯಕ್ಷರ ಕೆಲವು ಧೋರಣೆಗಳು ಕೆಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡಿವೆ. ಸಾಹಿತ್ಯೇತರ ಅಧ್ಯಕ್ಷರ ಆಯ್ಕೆ ವಿಚಾರ ಬಂತು, ವಿರೋಧಿಸಿದೆವು. ಸ್ಟಾಲ್ ಗಳಲ್ಲಿ ಮದ್ಯ, ಮಾಂಸ ಮಾರಾಟ ಮಾಡಬಾರದು ಅಂದ್ರು. ಈ ಮಾತು ಬರದೇ ಇದ್ದರೆ ಚೆನ್ನಾಗಿತ್ತು. ಸಾಹಿತ್ಯಕ್ಕಿಂತ ಹೆಚ್ಚಾಗಿ ಆಹಾರದ್ದೇ ಚರ್ಚೆಗೆ ಹೋಯ್ತು. ಇದು ಬೇಸರ ಆಯ್ತು.

ಸಮ್ಮೇಳನಗಳ ಕುರಿತು ಮುಗಿಯದ ಮೋಹ, ಆತ್ಮದ ಕರೆ
- -ನಂದಿನಿ ಹೆದ್ದುರ್ಗ, ಕೃಷಿಕರು ಮತ್ತು ಸಾಹಿತಿ

ಸಾಹಿತ್ಯ ಪ್ರೀತಿ ಇರುವ ಯಾರಿಗೇ ಆದರೂ ಸಮ್ಮೇಳನಗಳ ಕುರಿತು ಮುಗಿಯದ ಮೋಹ. ಸಾಹಿತ್ಯದ ಗಂಧಗಾಳಿಯೂ ಇರದ ಕೃಷಿ ಕುಟುಂಬದವಳು ನಾನು. ನಡುವಯಸ್ಸಿನಲ್ಲಿ ಸಾಹಿತ್ಯದ ಆಸಕ್ತಿ ಹುಟ್ಟಿ ಒಂದು ಅಸ್ಮಿತೆಯನ್ನು ಅಕ್ಷರಗಳು ಕೊಟ್ಟಿವೆ ಎಂದಾಗ ಸಮ್ಮೇಳನದಲ್ಲಿ ಭಾಗವಹಿಸುವುದು ನನಗೆ ಆತ್ಮದ ಕರೆ. ತವರಿನ ಸೆರೆ. ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಘನ ಉದ್ದೇಶಗಳೇನೂ ಇರದಿದ್ದರೂ ಪ್ರೀತಿಯ ಬರಹಗಾರರನ್ನು ಭೇಟಿ ಮಾಡುವುದು, ಗೋಷ್ಠಿಗಳಿಗೆ ಕಿವಿಯಾಗುವುದು, ಪುಸ್ತಕ ಮಳಿಗೆಗಳನ್ನು ತಡಕಾಡುವುದು, ಪ್ರಕಾಶಕರನ್ನು ಮಾತಾಡಿಸುವುದು, ಹೊಸ ತಲೆಮಾರಿನವರ ಕುತೂಹಲವನ್ನು ಕಣ್ತುಂಬಿಕೊಳ್ಳುವುದು ನನ್ನ ಅತ್ಯಂತ ಪ್ರೀತಿಯ ಕೆಲಸ.

ಇದೆಲ್ಲದಕ್ಕಿಂತ ಹೆಚ್ಚಾಗಿ ಎರಡು ಗೋಷ್ಠಿಗಳ ನಡುವಿನ ಅಂತರದಲ್ಲಿ ಪ್ರಬುದ್ಧರ ನಡುವಿನ ಚರ್ಚೆಯನ್ನು ಆಲಿಸುವುದು ನನ್ನ ಮಟ್ಟಿಗೆ ವಿಶಿಷ್ಟ ಅನುಭವ. ಕವಿಗೋಷ್ಠಿಗಳು ಕೆಲವೊಮ್ಮೆ ‌ತಾಳ್ಮೆ ಪರೀಕ್ಷಿಸುತ್ತವೆ ಎನ್ನುವುದು ಸತ್ಯ. ಆದರೆ ಕಾವ್ಯವೇ ಜೀವದ್ರವ್ಯವಾಗಿದ್ದಾಗ ಹೊಸ ಕವಿತೆಗಳನ್ನು ಕೇಳಿಸಿಕೊಳ್ಳುವ ಮತ್ತು ಹೇಗೆ‌ ವಾಚಿಸಬಾರದು / ವಾಚಿಸಬೇಕು ಎನ್ನುವುದರ ಉದಾಹರಣೆಗಳೂ ಅಲ್ಲಿ ಸಿಕ್ಕಿ ಅದೊಂದು ಪಠ್ಯವೂ ಆದ ಸಂದರ್ಭಗಳಿವೆ. ನಮ್ಮ ಬರಹ ಮೆಚ್ಚಿಕೊಂಡವರು ಆಡುವ ಅಭಿಮಾನದ ಮಾತುಗಳು, ತೋರುವ ಪ್ರೀತಿಯನ್ನು ಅನುಭವಿಸಲು ಸಾಹಿತ್ಯ ಸಮ್ಮೇಳನ ಒಂದು ವೇದಿಕೆ. ಅಂತಹ ಮನ್ನಣೆಯ ಸಂಭ್ರಮ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದರ ಜೊತೆಗೆ ವ್ಯಕ್ತಿತ್ವಕ್ಕೆ ಇನ್ನಷ್ಟು ತಾಳ್ಮೆ ಕಲಿಸುತ್ತದೆ.

ಮೊದಲ ಬಾರಿ ಸಮ್ಮೇಳನಕ್ಕೆ ಹೋಗುತ್ತಿರುವ ಸಂಭ್ರಮ
- ಶ್ರುತಿ ಬಿ ಆರ್‌, ಬೆಂಗಳೂರು

ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಖುಷಿ ನನ್ನದು. ಸಾಹಿತ್ಯ ಸಮ್ಮೇಳನ ಕನ್ನಡ ನಾಡು ನುಡಿಯ ದೊಡ್ಡ ಹಬ್ಬ. ಪ್ರಧಾನ ವೇದಿಕೆಯಲ್ಲಿ ಮಹಿಳಾ ವಿಶೇಷ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡುವ ಅವಕಾಶ ಸಿಕ್ಕಿದೆ. ಆಚಾರ, ವಿಚಾರ, ಆಹಾರ, ಪ್ರಾದೇಶಿಕ ಭಾಷೆ ಎಲ್ಲದರಲ್ಲೂ ವೈವಿಧ್ಯವಿರುವ ಕನ್ನಡ ನಾಡನ್ನು ಇಡಿಯಾಗಿ ಪ್ರತಿನಿಧಿಸುವ ಸಮ್ಮೇಳನವನ್ನು ಕಾಣಲು ಹೋಗುತ್ತಿದ್ದೇನೆ.
ಹಲವಾರು ಗೋಷ್ಠಿಗಳು, ಸಂವಾದಗಳು, ಸಮ್ಮೇಳನಾಧ್ಯಕ್ಷರ ನುಡಿಗಳು, ಸಾಹಿತ್ಯದ ಸಮಾನ ಮನಸ್ಕರ ಭೇಟಿ, ಪುಸ್ತಕ ಮೇಳ ನನಗೆ ಪ್ರಮುಖ ಆಕರ್ಷಣೆಗಳು. ಕನ್ನಡ ನಾಡು ನುಡಿಯ ಅಸ್ಮಿತೆ, ಕನ್ನಡ ಅನ್ನದ ಭಾಷೆಯಾಗಿ ಮತ್ತಷ್ಟು ಬಲಗೊಳಿಸಲು ಬೇಕಾದ ಪರಿಣಾಮಕಾರಿ ಕ್ರಮಗಳು, ಭಾಷೆಗೆ ಹೊಸ ಕಾಲ ಒಡ್ಡಿರುವ ಹೊಸ ಸವಾಲುಗಳನ್ನು ಎದುರುಗೊಳ್ಳುವ ಬಗೆ, ಕನ್ನಡಿಗರ ಸರ್ವತೋಮುಖ ಅಭಿವೃದ್ಧಿ ಮುಂತಾದ ಜ್ವಲಂತ ವಿಚಾರಗಳ ಕುರಿತು ಸಮ್ಮೇಳನದಲ್ಲಿ ಹೊಸ ಹೊಳಹುಗಳು ಕಾಣಲಿ ಎಂಬುದು ನನ್ನ ಅಪೇಕ್ಷೆ.
ವ್ಯವಸ್ಥೆಯ ಹಲವು ಮುಖಗಳ ಅನಾವರಣದ ಜಾಗ

- -ಸಂತೋಷ್ ಕುಮಾರ್ ಮೆಹಂದಳೆ, ಕೈಗಾ, ಉತ್ತರಕನ್ನಡ

ಸಾಹಿತ್ಯ ಸಮ್ಮೇಳನ ಇರೋದೇ ಲೇಖಕರಿಗೆ, ಪ್ರಕಾಶಕರಿಗೆ ಮತ್ತು ಓದುಗರಿಗೆ. ಒಬ್ಬ ಲೇಖಕನಾಗಿ ಕಾದಂಬರಿಕಾರನಾಗಿ ಅಂಕಣಕಾರನಾಗಿ ಮುಖ್ಯವಾಗಿ ಓದುಗರ ಭೇಟಿಗೆ ಹಾಗೂ ಅವರ ಜೊತೆಗೆ ನೇರ ಸಂವಹನ ಹಾಗೂ ಪುಸ್ತಕ ಲೋಕದ ವಿಭಿನ್ನ ಪರಿಸರ ಜೊತೆಗೆ ಪುಸ್ತಕಗಳ ಪರಿಚಯವೂ ಇಲ್ಲದವರ ಜೊತೆಗೆನೇ ಸಾಂಗತ್ಯ ಸಹಿತ ಸಿಕ್ಕುವುದಾದರೆ ಅದು ಕೇವಲ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ. ಅಲ್ಲದೆ ಹೊಸ ಹೊಸ ಪುಸ್ತಕಗಳ ಪರಿಚಯ ಮತ್ತು ಹೊಸ ಲೇಖಕರ ಜೊತೆಗಿನ ಒಡನಾಟ ಪ್ರಕಾಶಕರ ಜೊತೆಗೆ ನೇರ ಸಂವಹನ ಮಾತ್ರವಲ್ಲದೆ, ಸಾಹಿತ್ಯ ಜಗತ್ತಿಗೆ ಅಪರಿಚಿತ ಲೇಖಕ ಮತ್ತು ಓದುಗರಾಗಿ ಉಳಿದು ಹೋಗುತ್ತಿರುವವರಿಗೆ ಒಳಗೊಳ್ಳಲು ಬಹುದೊಡ್ಡ ಅವಕಾಶ ಇರುವುದು ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ. ಸಮ್ಮೇಳನ ಪುಸ್ತಕಗಳ ಜಾತ್ರೆ ಮಾತ್ರವಲ್ಲ ಮಾಹಿತಿಯ ಭಂಡಾರವೂ ಹೌದು. ಒಬ್ಬ ಸಂಶೋಧನಾತ್ಮಕ ಸಾಹಿತಿಗೆ ಹಲವು ರೀತಿಯ ಸಾಹಿತ್ಯದ ಪರಿಚಯಗಳನ್ನು, ಸಾಹಿತ್ಯಿಕ ವ್ಯವಸ್ಥೆಯ ವ್ಯವಸ್ಥೆಯ ವಿಭಿನ್ನ ರೂಪಗಳನ್ನು ತೋರಿಸುವಂತ ಕೇಂದ್ರವೂ ಹೌದು. ಇದರ ಹೊರತಾಗಿ ಸಾಹಿತ್ಯದ ಹೊಸ ಮಜಲು ಪ್ರಯೋಗ ಸಂಶೋಧನೆ ಮತ್ತು ಸಾಹಿತ್ಯ ರಂಗದ ವಿವಿಧ ಅವಕಾಶಗಳನ್ನು ಅರಸುವ ಹೊಸ ತಲೆಮಾರಿನ ಬರಹಗಾರರಿಗೂ ಇದೊಂದು ದೊಡ್ಡ ಅವಕಾಶ. ಹಾಗೆ ಅವರೊಂದಿಗೆ ಬೆರೆಯಲು ಇರುವ ಸೂಕ್ತ ಸಂದರ್ಭ ಕೂಡ. ಹಾಗಾಗಿ ಈ ಸಾಹಿತ್ಯಿಕ ಜಾತ್ರೆ ಕೇವಲ ಪುಸ್ತಕ‌ ಲೋಕ ಮಾತ್ರವಲ್ಲ, ಇತರ ವ್ಯವಸ್ಥೆಯ ಹಲವು ಮುಖಗಳನ್ನು ಅನಾವರಣಗೊಳಿಸುವುದೂ ಇದೆ.
ಸಮ್ಮೇಳನ ನೆಪದ ಪ್ರವಾಸ, ಓದುಗರ ಮುಖಾಮುಖಿಗೆ ಕಾತರ

- ಸಚಿನ್ ತೀರ್ಥಹಳ್ಳಿ, ಸಾಹಿತಿ, ಐಟಿ ಉದ್ಯೋಗಿ

ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ನನಗೆ ನಮ್ಮ ಊರಿನ ಹಬ್ಬದಲ್ಲೋ ಜಾತ್ರೆಯಲ್ಲೋ ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳುವ ಚಿತ್ರಗಳು ನೆನಪಾಗುತ್ತದೆ. ಆದರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಕನ್ನಡಿಗರೆಲ್ಲರೂ ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ವರ್ಷಕ್ಕೊಮ್ಮೆ ಒಟ್ಟಾಗಿ ಸೇರಿ ಸಂಭ್ರಮ ಪಡುವ ಜಾಗವಿದ್ದರೆ ಅದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ. ಸಮ್ಮೇಳನ ರಾಜ್ಯದ ಬೇರೆ ಬೇರೆ ಜಾಗದಲ್ಲಿ ನಡೆಯುವುದರಿಂದ, ಈ ನೆಪದಲ್ಲಿ ಒಂದು ಪ್ರವಾಸವನ್ನು ನಾನು ಎದುರು ನೋಡುತ್ತಿರುತ್ತೇನೆ.

ಸಮಾನ ಆಸಕ್ತಿಯಿರುವ ಹೊಸ ಗೆಳೆಯರು ಸಮ್ಮೇಳನದ ಆವರಣದಲ್ಲಿ ಪರಿಚಯವಾಗುತ್ತಾರೆ. ಕೆಲವು ಗೋಷ್ಠಿಗಳು ನಿಜಕ್ಕೂ ನಮ್ಮ ಅರಿವನ್ನು ವಿಸ್ತರಿಸುತ್ತವೆ. ಯಾವತ್ತೂ ನೇರವಾಗಿ ಸಿಗದ ಓದುಗರು ಬಂದು ಮಾತಾಡಿಸಿ ಮತ್ತಷ್ಟು ಬರೆಯುವ ಹುಮ್ಮಸ್ಸು ಒಬ್ಬ ಲೇಖಕನಾಗಿ ನನಗೆ ಸಿಗುತ್ತದೆ. ಈ ಎಲ್ಲ ಕಾರಣಗಳಿಗಾಗಿ ನಾನು ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಅವಕಾಶವನ್ನು ಮಿಸ್ ಮಾಡದೆ ಇರಲು ಪ್ರಯತ್ನಿಸುತ್ತೇನೆ.
ಸಮ್ಮೇಳನಕ್ಕೆ ಪ್ರೇಕ್ಷಕನಲ್ಲ, ಗೋಷ್ಠಿಯಲ್ಲಿ ಪಾಲುದಾರ

- -ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಕೊಡಗು

ಸಾಕಷ್ಟು ಬಾರಿ ಇಂತಹ ಸಮ್ಮೇಳನಗಳಲ್ಲಿ ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿದ್ದರಿಂದ ಸಮ್ಮೇಳನದ ಬಗ್ಗೆ ನಾನು ತುಂಬಾ ಉತ್ಸಾಹಿಯಲ್ಲ.‌ ನಾನು ಹೋಗುತ್ತಿರುವುದು ಶುದ್ಧ ಸಾಹಿತ್ಯಕ್ಕೆ ಹೊರತಾದ ಒಂದು ನಿರ್ದಿಷ್ಟ ಹೊಣೆ ನಿರ್ವಹಿಸುವುದಕ್ಕೆ. ಮೊದಲು ಮತ್ತು ಕೊನೆಯ ದಿನ ನಾನು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ. ಉಳಿದಂತೆ ನಾನು ಸಮ್ಮೇಳನದ ಪ್ರೇಕ್ಷಕನೂ ಅಲ್ಲ, ವೀಕ್ಷಕನೂ ಅಲ್ಲ. ರಾತ್ರಿಯಿಡೀ ಯಕ್ಷಗಾನ ನೋಡುವವನಿಗೂ ಅದರಲ್ಲೊಂದು ಪಾತ್ರ ನಿರ್ವಹಿಸುವವನಿಗೂ ವ್ಯತ್ಯಾಸ ಉಂಟಲ್ಲ? ಹಾಗೆ. ಡಿ.21ರಂದು ಸಮಾನಾಂತರ ವೇದಿಕೆ-2ರಲ್ಲಿ ನಾನು ‘ಭಾರತದ ಸಂವಿಧಾನ-75’ ಈ ಕುರಿತು ಮಾತನಾಡಬೇಕೆಂದು ಸಂಘಟಕರು ಅಪೇಕ್ಷಿಸಿದ್ದಾರೆ, ಒಪ್ಪಿದ್ದೇನೆ. ನಾನು ಕ.ಸಾ.ಪ.ದೊಂದಿಗೆ ‘ಲವ್-ಹೇಟ್’ ಸಂಬಂಧ ಬೆಳೆಸಿಕೊಂಡೇ ಬಂದವನು. ಅದೇನೂ ಬದಲಾಗುವುದಿಲ್ಲ. ವೇದಿಕೆಯೇ ಸಮಾನಾಂತರ! ಸಮಾನ ಅಂತರವನ್ನು ನಾನೂ ಕಸಾಪವೂ ಉಳಿಸಿಕೊಂಡಿದ್ದೇವೆಂದು ನಂಬಿದ್ದೇನೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಉಂಟಲ್ಲ. ಸಭ್ಯತೆ, ಸೌಜನ್ಯವನ್ನು ಮೀರದೆ ನನ್ನ ಅಭಿಪ್ರಾಯವನ್ನು ಸಮಯ ಮತ್ತು ವಸ್ತುವಿನ ಮಿತಿ ಹಾಗೂ ವ್ಯಾಪ್ತಿಯಲ್ಲಿ ಮಂಡಿಸಲು ಇಷ್ಟ. ಇದಕ್ಕೆ ಅವಕಾಶವಿದೆಯೆಂದು ಆಶಿಸುತ್ತೇನೆ. ಜೊತೆಗೆ ಒಂದಷ್ಟು ಗೆಳೆಯರು ಢಿಕ್ಕಿ ಹೊಡೆದಾರು ಎಂದು ಆಸೆ. ಇನ್ನು ಪುಸ್ತಕಗಳು... ಈ ಜನ್ಮದ ಉಳಿಕೆ ಅವಧಿಗೆ ಬೇಕಾದಷ್ಟು ಪುಸ್ತಕಗಳು ಮನೆಯಲ್ಲಿವೆ ಮತ್ತು ಮನೆ ಸೇರುತ್ತಲೇ ಇವೆ. ಸಮ್ಮೇಳನದಲ್ಲೂ ನೋಡೋಣ! ಪತ್ರಿಕೆಗಳಲ್ಲಿ ಬರುವ ಭೀಕರ ವಿಶೇಷಣಗಳ ಮನರಂಜನೆಗೂ ಮತ್ತು ವಾಸ್ತವ/ವಸ್ತುಸ್ಥಿತಿಗೂ ನಡುವಣ ವ್ಯತ್ಯಾಸವನ್ನು ಗಮನಿಸಿ‌ ಸಂತೋಷಿಸಲೂ ಇದೊಂದು ಸಂದರ್ಭ!

ಸಮಸ್ತ ಕನ್ನಡಿಗರ ಸನ್ಮಾನ ಸ್ವೀಕರಿಸುವ ಖುಷಿಯ ಜೊತೆ
- -ಡಾ. ಬಾಳಾಸಾಹೇಬ ಲೋಕಾಪುರ, ಬೆಳಗಾವಿ ಜಿಲ್ಲೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದೊಂದು ಸಾಮಾನ್ಯ ಕನ್ನಡಿಗರಿಂದ ಹಿಡಿದು ಕವಿ ಚಿಂತಕ ಸಾಹಿತಿಗಳವರೆಗೆ ಪ್ರತಿವರ್ಷ ಎದುರು ನೋಡುವ ಸಂಭ್ರಮದ ದಿನ ಎಂದು ನಾನು ಭಾವಿಸಿದ್ದೇನೆ. ಅಲ್ಲಿ ಕೂಡುವವರೆಲ್ಲಾ ಕನ್ನಡಿಗರೇ ಆಗಿರುವದು, ಎಲ್ಲೆಲ್ಲೂ ಕನ್ನಡ ಮಾತುಗಳೇ ಕೇಳಲಿಕ್ಕೆ ಸಿಗುವದು. ಅದೊಂದು ಕನ್ನಡ ಮನಸ್ಸುಗಳ ಭಾವ ಸಂಗಮದಂತಿರುತ್ತದೆ

ಸಮ್ಮೇಳನದ ವೇದಿಕೆಗಳಲ್ಲಿ ಕನ್ನಡ ಅಸ್ಮಿತೆಯ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿರುತ್ತವೆ. ಹೊರಗೆ ಶ್ರೀಸಾಮಾನ್ಯ ಕನ್ನಡಿಗ, ಕುಟುಂಬ ಸಮೇತ ಅಲ್ಲಿಗೆ ಬಂದು ಸಂಭ್ರಮವನ್ನು ಕಣ್ಣು ತುಂಬಿಕೊಂಡು ಹೋಗುವ ಪ್ರಕ್ರಿಯೆಯೇ ಬಹಳ ಮುಖ್ಯವೆನಿಸುತ್ತದೆ ನನಗೆ. ಹಾಗಾಗಿ ನಾನು ತಪ್ಪದೇ ಸಾಮಾನ್ಯ ಪ್ರತಿನಿಧಿಯಾಗಿ ಭಾಗವಹಿಸುತ್ತಾ ಬಂದಿದ್ದೇನೆ.

ಈ ಸಲ ನನ್ನನ್ನು ಸನ್ಮಾನಕ್ಕೆ ಕರೆದಿದ್ದಾರೆ. ಕನ್ನಡಿಗರ ಎದುರು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕೊಡಮಾಡುವ ಈ ಸನ್ಮಾನ ನನಗೆ ಹರ್ಷ ತಂದಿದೆ. ಕಾರಣ ಇದು ಸಮಸ್ತ ಕನ್ನಡಿಗರು ಮಾಡುವ ಸನ್ಮಾನವಾಗಿದೆ. ಅದಕ್ಕಾಗಿ ನಾನು ಸಂತೋಷದಿಂದ ಭಾಗವಹಿಸುತ್ತಿದ್ದೇನೆ.

ಸಮ್ಮೇಳನಕ್ಕೆ ತೆರಳಲು ಸಾಲು ಸಾಲು ಕಾರಣಗಳು
- ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ

ಹೊಸದಾಗಿ ಬರೆಯುತ್ತಿರುವ ಲೇಖಕರ, ನನ್ನ ಸಹೃದಯ ಓದುಗರ ಹಾಗೂ ಆತ್ಮೀಯರ ಭೆಟ್ಟಿ- ಮಾತು- ಹರಟೆ -ಸಂತಸ ಹಂಚಿಕೊಳ್ಳುವ ಸಂಭ್ರಮಕ್ಕೆ. ಮಳಿಗೆಗಳಲ್ಲಿ ಕುಲು ಕುಲು ಎನ್ನುತ್ತಾ ಸಿಂಗಾರಗೊಂಡು ನಳನಳಿಸುವ ಹೊಚ್ಚ ಹೊಸ ಪುಸ್ತಕಗಳನ್ನು ನೋಡಿ ಮುಟ್ಟಿ ಆನಂದಿಸಲು, ಕೊಂಡು ಮುದಗೊಳ್ಳಲು. ಹಿರಿಯ ಸಾಹಿತಿಗಳನ್ನು ಕಂಡು ಆದರ ವ್ಯಕ್ತಪಡಿಸಿ, ಅವರು ಈಗಲೂ ಬರೆಯುತ್ತಿದ್ದರೆ- ಆ ವಿಚಾರ ಕೇಳಿ, ಇಂದಿನ ಹೊಸ ಪೀಳಿಗೆಯ ಬರವಣಿಗೆ ಬಗ್ಗೆ ನಾಲ್ಕು ಮಾತಾಡುವ ತುಡಿತಕ್ಕಾಗಿ. ಕನ್ನಡ ಉತ್ಸವದಲ್ಲಿ ನಾನೊಬ್ಬ ಸಾಮಾನ್ಯ ಕನ್ನಡಿಗಳಾಗಿ ಸೇರಿಕೊಳ್ಳಲು. ಚಿಕ್ಕಂದಿನಲ್ಲಿ ಜಾತ್ರೆಯ ಅಬ್ಬರದಲ್ಲಿ ಕಳೆದುಹೋಗುವ ಸುಖದ ನೆನಪಲ್ಲಿ ಮತ್ತೆ ತೇಲಲು.

87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಹೊಸತನಗಳು: ಸಚಿವ ಚಲುವರಾಯಸ್ವಾಮಿ

ಈ ಸಲದ ವಿಶೇಷವೆಂದರೆ, ‘ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಮಹಿಳಾ ಗೋಷ್ಠಿಯ ಆಶಯ ನುಡಿಯಲು ನನ್ನನ್ನು ಆಹ್ವಾನಿಸಿದ್ದು. ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ವಿಭಿನ್ನ ರೀತಿಯ ಮಹಿಳಾ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ನಾನು ಮುಖ್ಯ ವೇದಿಕೆಯಲ್ಲಿ ನನ್ನ ಅನುಭವ, ವಿಚಾರಗಳನ್ನು ಮಂಡಿಸುವ ಸಂದರ್ಭಕ್ಕಾಗಿ.

ಇಂಥ ಸಮ್ಮೇಳನಗಳ ವ್ಯವಸ್ಥೆಯಲ್ಲಿ ಅಡಚಣೆಗಳನ್ನು ಅನುಭವಿಸಿಯೂ, ಆಯೋಜಕರ ಕೆಲವು ಧೋರಣೆಗಳನ್ನು ಒಪ್ಪದೆಯೂ ಸಮ್ಮೇಳನಕ್ಕೆ ಹೋಗುವುದನ್ನು ತಪ್ಪಿಸಬಾರದು ಎನಿಸುತ್ತದೆ ನನಗೆ.

click me!