ಅರ್ಹ ಕವಿಯನ್ನು ‘ರಾಷ್ಟ್ರಕವಿ’ ಎಂದು ಘೋಷಿಸಿ

By Kannadaprabha NewsFirst Published Sep 2, 2020, 9:56 AM IST
Highlights

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಬರೆದಿರುವ ಪತ್ರದಲ್ಲಿ, ಹೊಸದಾಗಿ ಆಯ್ಕೆ ಸಮಿತಿ ರಚಿಸಿ ರಾಷ್ಟ್ರಕವಿ ಗೌರವಕ್ಕೆ ಅರ್ಹ ಸಾಹಿತಿ, ಕವಿಗಳ ಹೆಸರನ್ನು ಸೂಚಿಸಬೇಕೆಂದು ಮನವಿ ಮಾಡಲಾಗಿದೆ.

ಬೆಂಗಳೂರು (ಸೆ.01):  ‘ರಾಷ್ಟ್ರಕವಿ’ ಪುರಸ್ಕಾರಕ್ಕೆ ಅರ್ಹರನ್ನು ಸೂಚಿಸಲು ನೂತನ ಆಯ್ಕೆ ಸಮಿತಿ ರಚಿಸಿ ಕವಿ, ಸಾಹಿತಿಯೊಬ್ಬರ ಹೆಸರನ್ನು ಘೋಷಿಸಬೇಕು. ಇದಕ್ಕೆ ಅರ್ಹರು ಬೇಕಾದಷ್ಟುಇದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಬರೆದಿರುವ ಪತ್ರದಲ್ಲಿ, ಹೊಸದಾಗಿ ಆಯ್ಕೆ ಸಮಿತಿ ರಚಿಸಿ ರಾಷ್ಟ್ರಕವಿ ಗೌರವಕ್ಕೆ ಅರ್ಹ ಸಾಹಿತಿ, ಕವಿಗಳ ಹೆಸರನ್ನು ಸೂಚಿಸಬೇಕೆಂದು ಮನವಿ ಮಾಡಲಾಗಿದೆ.

‘ಈ ಹಿಂದೆ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಅವರ ನೇತೃತ್ವದಲ್ಲಿ ‘ರಾಷ್ಟ್ರಕವಿ ಗೌರವಕ್ಕೆ ಅರ್ಹರಾದವರ ಹೆಸರನ್ನು ಸೂಚಿಸಬೇಕು’ ಎಂದು ಸಮಿತಿ ರಚಿಸಲಾಗಿತ್ತು. ಆ ಸಮಿತಿ ಯಾರ ಹೆಸರನ್ನೂ ಸೂಚಿಸಲಿಲ್ಲ. ಮಾತ್ರವಲ್ಲದೆ, ರಾಷ್ಟ್ರಕವಿ ಗೌರವಕ್ಕೆ ಸೂಕ್ತರಾದವರು ಯಾರೂ ಇಲ್ಲ ಎಂದು ವರದಿ ನೀಡಿತು. ಇದು ಆ ಸಮಿತಿಗೆ ಕೊಟ್ಟಿದ್ದ ಕಾರ್ಯಷರತ್ತಿನ ಸಂಪೂರ್ಣ ಉಲ್ಲಂಘನೆಯಾಗಿದ್ದರಿಂದ, ಆ ವರದಿಯನ್ನು ಆಗಿನ ಸರ್ಕಾರ ತಿರಸ್ಕರಿಸಬೇಕಿತ್ತು. ಈ ವರದಿ ಬಗ್ಗೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು ಎಂಬುದು ನಿಮ್ಮ ಗಮನದಲ್ಲಿ ಇರಬಹುದು’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!...

‘ಕರ್ನಾಟಕದಲ್ಲಿ ರಾಷ್ಟ್ರಕವಿ ಗೌರವಕ್ಕೆ ಯೋಗ್ಯರಾದವರು ಯಾರೂ ಇಲ್ಲ’ ಎಂದು ಸಮಿತಿ ವರದಿ ಕೊಟ್ಟಿರುವುದಾಗಿ ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಷ್ಟ್ರಕವಿ ಗೌರವವನ್ನು ಯಾರಿಗೆ ಕೊಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟವಿಚಾರ. ಕನ್ನಡದಲ್ಲಿ ಈ ಗೌರವಕ್ಕೆ ಅರ್ಹರಾದವರು ಇಲ್ಲ ಎಂದು ಭಾವಿಸುವುದು ಒಂದೂವರೆ ಸಾವಿರ ವರ್ಷಗಳ ಸಾಹಿತ್ಯ ಪರಂಪರೆಯ ಇತಿಹಾಸವುಳ್ಳ ಕನ್ನಡ ಭಾಷೆಗೆ ಮಾಡಿದ ಅವಮಾನ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪರಿಷತ್ತು ರಾಷ್ಟ್ರಕವಿ ಗೌರವ ಪದ ಇರಬೇಕು ಎನ್ನುವುದರ ಪರವಾಗಿ ಇದೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಕವಿ ಪುರಸ್ಕಾರ ಕೊಡುವ ಪದ್ಧತಿಯನ್ನು ಮುಂದುವರಿಸಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಈ ಗೌರವವು ಕನ್ನಡ ಭಾಷೆಗೆ ವಿಶೇಷವಾದುದು. ತಮಗೆ ತಿಳಿದಂತೆ ಗೋವಿಂದ ಪೈ, ಕುವೆಂಪು, ಜಿ.ಎಸ್‌. ಶಿವರುದ್ರಪ್ಪನವರು ಈ ಗೌರವಕ್ಕೆ ಪಾತ್ರರಾದ ಕವಿಗಳಾಗಿದ್ದಾರೆ’ ಎಂದಿದ್ದಾರೆ.

‘ಈ ಗೌರವಕ್ಕೆ ಯೋಗ್ಯರಾದವರು ಕನ್ನಡದಲ್ಲಿ ಬೇಕಾದಷ್ಟುಸಾಹಿತಿಗಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಈ ಪದವಿಗೆ ಯೋಗ್ಯರಾದವರನ್ನು ಕಳೆದುಕೊಂಡಿದ್ದೇವೆ. ಈ ಗೌರವ ಕೇವಲ ಕಾವ್ಯ ಬರೆದವರಿಗೆ ಸಲ್ಲಬೇಕೆಂಬ ನಿಯಮವಿಲ್ಲ. ಕನ್ನಡದ ಕವಿ, ಸಾಹಿತಿಯೊಬ್ಬರಿಗೆ ಸಲ್ಲಬೇಕಾದ ಈ ಗೌರವಕ್ಕೆ ಅರ್ಹರಾದ ಹೆಸರನ್ನು ಸರ್ಕಾರ ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.

click me!