ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮ ಹಾಗೂ 68ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ್ಯಾ. ವಿ.ಗೋಪಾಲಗೌಡ, ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್, ನಿಜಗುಣಾನಂದ ಸ್ವಾಮೀಜಿ ಸೇರಿ ವಿವಿಧ ಕ್ಷೇತ್ರಗಳ 68 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಬೆಂಗಳೂರು (ನ.02): ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮ ಹಾಗೂ 68ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ್ಯಾ. ವಿ.ಗೋಪಾಲಗೌಡ, ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್, ನಿಜಗುಣಾನಂದ ಸ್ವಾಮೀಜಿ ಸೇರಿ ವಿವಿಧ ಕ್ಷೇತ್ರಗಳ 68 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಾಡಿನ ಹಿರಿಮೆಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಹಿರಿಯರು, ತಜ್ಞರು, ಸಾಧಕಿಯರು, ಹೊರನಾಡಲ್ಲಿ ಕನ್ನಡ ಸೇವೆಯಲ್ಲಿ ತೊಡಗಿರುವವರು, ಎಲೆಮರೆ ಕಾಯಿಯಂತಿರುವವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ವಿಜ್ಞಾನಿ ಪ್ರೊ. ಗೋಪಾಲನ್ ಜಗದೀಶ್, ಡಮಾಮಿ ನೃತ್ಯ ಕಲಾವಿದೆ ಹುಸೇನಾಬಿ ಬುಡೇನ್ ಸಾಬ್ ಸಿದ್ದಿ, ಬಂಜಾರ ಸಮುದಾಯದ ಒಳಿತಿಗಾಗಿ ದುಡಿದ ಶತಾಯುಷಿ ಕೆ.ರೂಪ್ಲಾನಾಯಕ್, ಮಂಗಳಮುಖಿ ನರಸಪ್ಪ, ಕಲಾವಿದರಾದ ಬ್ಯಾಂಕ್ ಜನಾರ್ದನ, ಡಿಂಗ್ರಿ ನಾಗರಾಜ್, ರಂಗಭೂಮಿ, ಶಿಕ್ಷಣ ತಜ್ಞ ಚಿದಂಬರ್ ರಾವ್ ಜಂಬೆ, ಪಿ.ಗಂಗಾಧರ ಸ್ವಾಮಿ, ಎಚ್.ಬಿ.ಸರೋಜಮ್ಮ, ಡಾ. ವಿಶ್ವನಾಥ್, ಪಿ.ತಿಪ್ಪೇಸ್ವಾಮಿ, ಶಿಲ್ಪಕಲಾವಿದ ಟಿ.ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಕರಕುಶಲ ಕಲಾವಿದ ಪಿ.ಗೌರಯ್ಯ, ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಸೇರಿದಂತೆ 68 ಸಾಧಕರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಎಂ.ಸಿ.ಸುಧಾಕರ್
ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡ ₹ 5 ಲಕ್ಷ ನಗದು, 25ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ ನೀಡಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಿಧಾನಸೌಧದ ಎದುರು ಗೃಹ ಇಲಾಖೆಯಿಂದ ಪೊಲೀಸ್ ಬ್ಯಾಂಡ್ ಮೂಲಕ ಸಾಧಕರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂದೆ ಮನಸ್ಸಿಗೆ ಬಂದಂತೆ ಕೊಡಲಾಗುತ್ತಿತ್ತು. ಕೊನೆಯ ದಿನ ಹೆಸರನ್ನು ಸೇರ್ಪಡೆ ಮಾಡುವ ಪರಿಪಾಠವಿತ್ತು. 100-120 ಜನರಿಗೆ ಮನಸ್ಸಿಗೆ ಬಂದಂತೆ ಕೊಡುತ್ತಿದ್ದರು. ನಾವು ಶಿಸ್ತುಬದ್ಧವಾಗಿ ಆಚರಿಸಲು ತೀರ್ಮಾನ ಕೈಗೊಂಡು ಅದನ್ನು ಅನುಷ್ಠಾನ ಮಾಡಿದ್ದೇವೆ. ಮುಖ್ಯಮಂತ್ರಿಯಾಗಿ ಒಂದು ಹೆಸರನ್ನು ಸೇರಿಸಿದ್ದು ಬಿಟ್ಟರೆ ಉಳಿದ ಯಾರನ್ನೂನಾನು ಹೆಸರಿಸಿಲ್ಲ.
ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದ ಶೇ.95 ರಷ್ಟು ಸಾಧಕರು ಪುರಸ್ಕೃತರಾಗಿದ್ದಾರೆ. ಅರ್ಹರಿದ್ದೂ ಸಿಗದವರಿಗೆ ಮುಂದಿನ ವರ್ಷ ಪರಿಗಣಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ ಉಪಸ್ಥಿತರಿದ್ದರು.
ಸ್ವಪಕ್ಷೀಯರಿಂದಲೇ ಕಾಂಗ್ರೆಸ್ ಸರ್ಕಾರ ಬೀಳಲಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್
ಸುವರ್ಣ ಸಂಭ್ರಮಕ್ಕಾಗಿ ಕನ್ನಡಭವನ ನಿರ್ಮಾಣ: ಕರ್ನಾಟಕ ಮರುನಾಮಕರಣದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ " ಕನ್ನಡಭವನ " ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ನಾಡ ದೇವತೆ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಭವನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.