ಬೆಂಗಳೂರಿನ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ರಾಜ್ಯೋತ್ಸವದವ ದಿನ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಅರಣ್ಯ ಅಧಿಕಾರಿಗಳು ಹೊಡೆದ ಗುಂಡು ಚಿರತೆಯ ಮರಣಕ್ಕೆ ಕಾರಣವಾಗಿದ್ದು ಸ್ವತಃ ಅರಣ್ಯ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ.
ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ನ.02): ಬೆಂಗಳೂರಿನ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ರಾಜ್ಯೋತ್ಸವದವ ದಿನ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಅರಣ್ಯ ಅಧಿಕಾರಿಗಳು ಹೊಡೆದ ಗುಂಡು ಚಿರತೆಯ ಮರಣಕ್ಕೆ ಕಾರಣವಾಗಿದ್ದು ಸ್ವತಃ ಅರಣ್ಯ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ. ಚಿರತೆ ಸಾವಿಗೀಡಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನ ಚಿರತೆಗಾಗಿ ನೋವಿನಿಂದ ಬರೆದುಕೊಳ್ಳುತ್ತಿದ್ದಾರೆ. ಕೆಲವರಂತೂ ಅರಣ್ಯ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ..
ಇತ್ತೀಚೆಗೆ ಅರಣ್ಯ ಇಲಾಖೆ ಬಹಳಷ್ಟು ಸುದ್ದಿಯಲ್ಲಿದೆ. ಹುಲಿಯುಗುರಿನ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅನ್ನು ಏಕಾಏಕಿ ವಶಕ್ಕೆ ಪಡೆದಿದ್ದ ಇಲಾಖೆ ಸಿಬ್ಬಂದಿಗಳು ಕೆಲವು ಸೆಲೆಬ್ರೆಟಿಗಳು, ಗಣ್ಯರ ಹತ್ತಿರವೂ ಸುಳಿಯದೆ ಸಾಕಷ್ಟು ಜನರ ಮಾತಿನ ಬಾಣಕ್ಕೆ ಗುರಿಯಾಗಿತ್ತು. ಇದರ ಮೂಲಕ ಪ್ರಾಣಿಗಳ ಅಂಗಾಗಳನ್ನು ಧರಿಸುವುದು ಅಪರಾಧವೆಂದು ರಾಜ್ಯದ ಜನರಿಗೆ ಸ್ಪಷ್ಟವಾಗಿ ಒಂದು ಸಂದೇಶ ಹೋಗಿದ್ದಂತೂ ನಿಜ. ಆದರೆ ಬೆಂಗಳೂರಿನ ಚಿರತೆ ವಿಚಾರದಲ್ಲಿ ಕೊಲ್ಲುವ ನಿರ್ಧಾರಕ್ಕೆ ಬಂದಿದ್ದು ಎಷ್ಟು ಸರಿ? ಚಿರತೆ ಕೊಂದಿದ್ದಕ್ಕೆ ವೈಲ್ಡ್ ಲೈಫ್ ಆ್ಯಕ್ಟ್ ಏನೂ ಕ್ರಮ ತೆಗೆದುಕೊಳ್ಳಲ್ವಾ ಅನ್ನೋದು ಅನೇಕರ ಪ್ರಶ್ನೆ.
ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?
1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಅಧ್ಯಾಯ ಮೂರರ ಅನ್ವಯ ಕಾಡುಪ್ರಾಣಿಗಳನ್ನು ಕೆಲವು ಅನಿವಾರ್ಯ ಸಂದರ್ಭದಲ್ಲಿ ಹತ್ಯೆ ಮಾಡಬಹುದಾಗಿದೆ. ಯಾವುದೇ ಪ್ರಾಣಿ ಜನರಿಗೆ ತೊಂದರೆ ಉಂಟು ಮಾಡಿದ್ದಾಗ ಚೀಫ್ ವೈಲ್ಡ್ ಲೈಫ್ ವಾರ್ಡನ್ ಅವರ ಆದೇಶದ ಮೇರೆಗೆ ಒಂದು ಪ್ರಾಣಿಯನ್ನು ಹತ್ಯೆ ಮಾಡಬಹುದಾಗಿದೆ. ಬೆಂಗಳೂರಿನ ಚಿರತೆ ಮೃತಪಟ್ಟ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿರುವ ಸಿಸಿಎಫ್ ನಾವು ಚಿರತೆ ಎರಡು ಬಾರಿ ನಮ್ಮ ಅಧಿಕಾರಿಗಳಿಗೆ ದಾಳಿ ಮಾಡಿದ್ದ ವೇಳೆ ನಾವು ಪರ್ಮಿಷನ್ ತೆಗೆದುಕೊಂಡಿದ್ದೆವು ಎಂದು ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಅಲ್ಲದೇ ಚಿರತೆ ಸಾವಿಗೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ವೇಳೆ ನಡೆಸಿದ ಗುಂಡಿನ ದಾಳಿಯೇ ಕಾರಣ ಎಂದು ಸ್ಪಷ್ಟ ಪಡಿಸಿದ್ದರು.
ಈ ಸುದ್ದಿ ಹೊರ ಬಿಳುತ್ತುದ್ದಂತೆ ಅನೇಕರು ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ಮೂಲಕ ಈ ಕೃತ್ಯವನ್ನು ವಿರೋಧಿಸಿದ್ದಾರೆ. ಉಗ್ರ ಅಜ್ಮಲ್ ಕಸಬ್ 3-4 ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಮೇಲೂ ಅವನನ್ನು ಜೀವಂತವಾಗಿ ಹಿಡಿಯಲಾಯ್ತು. ಚಿರತೆ ಯಾರದ್ದೂ ಪ್ರಾಣ ತೆಗೆದಿರಲಿಲ್ಲ. ಸಹಜವಾಗಿ ಅದನ್ನು ಹಿಡಿಯಲು ಹೋದಾಗ ಆತ್ಮರಕ್ಷಣೆಯಿಂದ ಹೆದರಿ ಅಟ್ಯಾಕ್ ಮಾಡಿದೆ. ಇದಕ್ಕೆ ಪರ್ಮಿಷನ್ ಕೊಟ್ಟವರ ವಿರುದ್ದ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ಚಿರತೆ ಕಳೆದ ನಾಲ್ಕೈದು ದಿನಗಳಿಂದ ಏನೂ ತಿಂದಿರಲಿಲ್ಲ. ನಿತ್ರಾಣಗೊಂಡಿದ್ದ ಚಿರತೆ ಹಿಡಿಯುವುದೂ ಕಷ್ಟವಾಯ್ತಾ?
ಇವರಿಗೆ ಸರಿಯಾದ ಟ್ರೈನಿಂಗ್ ಕೊಡಬೇಕೆಂದೂ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಚಿರತೆ ಕೊಲ್ಲುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ವಾ? ನಾವೇ ಮನುಷ್ಯರು ಮರಗಳನ್ನು ಕತ್ತರಿಸಿ ಕಾಡುಪ್ರಾಣಿಗಳ ವ್ಯಾಪ್ತಿಗೆ ನುಗ್ಗಿ ಅಪಾರ್ಟ್ಮೆಂಟ್ ಕಟ್ಟಿ ಹೀಗೆ ಮಾಡೋದು ಸರಿನಾ? ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ ಅಂತ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯ ಫೇಲ್ಯೂರ್ ಅನ್ನು ಒಪ್ಪಿಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.. ಇನ್ನು ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಈ ಬಗ್ಗೆ ಸೂಕ್ತ ಟ್ರೈನಿಂಗ್ ನ ಅವಶ್ಯಕತೆ ಇದೆ. ಕೇವಲ ಪರೀಕ್ಷೆ ಬರೆದು ಪುಸ್ತಕದ ಸೆಕ್ಷನ್ ಗಳನ್ನು ತುಂಬಿಸಿ ಅರಣ್ಯ ಅಧಿಕಾರಿಗಳನ್ನು ನೇಮಕ ಮಾಡುತ್ತಿರುವುದೂ ಒಂದು ಮಾರಕ ಬೆಳವಣಿಗೆಯಾಗಿದೆ.
ಸದ್ಯ ಇಡೀ ರಾಜ್ಯದಲ್ಲಿ ಚಿರತೆ ಕಾರ್ಯಾಚರಣೆಗೆಂದು ಮೈಸೂರಿನಲ್ಲಿ ವಿಶೇಷ ಕಾರ್ಯಾಚರಣೆ ತಂಡವಿದ್ದು ವಿಶೇಷ ತರಬೇತಿ ಪಡೆದ ಲಿಯೋಪಾರ್ಡ್ ಟಾಸ್ಕ್ ಫೋರ್ಸ್ ಇದಾಗಿದೆ. ರಾಜ್ಯದ ಎಲ್ಲೇ ಚಿರತೆ ಕಾರ್ಯಾಚರಣೆ ನಡೆದರೂ ಇದೇ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗಳಿಯುತ್ತದೆ. ಬೆಂಗಳೂರಿನ ಚಿರತೆ ಕಾರ್ಯಾಚರಣೆಗೂ ಇದೇ ತಂಡ ಬಂದಿತ್ತು. ಹೀಗಿದ್ದರೂ ಕಾರ್ಯಾಚರಣೆ ವಿಫಲವಾಯ್ತು. ಯಾಕಂದ್ರೆ ಸ್ಥಳೀಯ ಫಾರೆಸ್ಟ್ ಆಫಿಸರ್ ಗಳಿಗೆ ಚಿರತೆ ಕಾರ್ಯಾಚರಣೆ ಇದೇ ಮೊದಲ ಅನುಭವವಾಗಿತ್ತು! ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳೊಬ್ಬರು ಹೇಳುವಂತೆ ಅರಣ್ಯ ಅಧಿಕಾರಿಗಳಾಗಿ ಆಯ್ಕೆಯಾಗುವ ಯುವ ಅಧಿಕಾರಿಗಳಿಗೆ ಸೂಕ್ತವಾದ ತರಬೇತಿ ಆಗಬೇಕಾಗಿದೆ.
ಈಶ್ವರಪ್ಪ ಸೇರಿ 3 ಒಬಿಸಿ ನಾಯಕರಿಗೆ ದಿಲ್ಲಿ ಬುಲಾವ್: ಕಾರಣವೇನು?
ಆನೆಗಳನ್ನು ಪಳಗಿಸುವುದು, ಚಿರತೆ, ಹುಲಿ ಹಿಡಿಯುವುದು. ಬೋನು ಹೇಗೆ ಕೆಲಸ ಮಾಡಬಲ್ಲದು ಇವೆಲ್ಲಾ ಪ್ರಾಯೋಗಿಕ ತರಬೇತಿಗಳ ಅವಶ್ಯಕತೆಯಿದೆ. ನಮ್ಮ ಅನೇಕ ಅಧಿಕಾರಿಗಳಿಗೆ ಮರ ಹತ್ತುವುದಕ್ಕೂ ಬರೋಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಾರೆ. ಸಣ್ಣಪುಟ್ಟ ವಿಚಾರಕ್ಕೆ ಗುಂಡು ಹೊಡೆದು ಕೊಲ್ಲುವುದಾದರೆ ರಕ್ಷಕರಿಗೂ ಭಕ್ಷಕರಿಗೂ ಏನು ವ್ಯತ್ಯಾಸ ಅಲ್ವಾ? ಸರಿಯಾದ ತರಬೇತಿಯೊಂದಿಗೆ ಇನ್ನಷ್ಟು ಸಲಕರಣೆಗಳೊಂದಿಗೆ ಮುಂದಿನ ದಿನದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿಯಬೇಕಾಗಿದೆ. ಈ ಮೂಲಕ ಅಮೂಲ್ಯ ವನ್ಯಜೀವಿ ಸಂಪತ್ತು ನಾಶಕ್ಕೆ ತಾನೇ ಕಾರಣವಾಗದೆ ಅದನ್ನು ಉಳಿಸುವುದರತ್ತ ಗಮನ ಹರಿಸಬೇಕಾಗಿದೆ.