ಕನ್ನಡ ರಾಜ್ಯೋತ್ಸವ: ಇಂದು 'HMT ಕನ್ನಡಿಗ’ ಸರಣಿಯಲ್ಲಿ 4 ಹೊಸ ವಾಚ್‌ ಬಿಡುಗಡೆ! ಬೆಲೆ ಎಷ್ಟು, ಖರೀಸೋದು ಹೇಗೆ?

Kannadaprabha News   | Kannada Prabha
Published : Nov 01, 2026, 05:36 AM IST
HMT Kannadiga watch

ಸಾರಾಂಶ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಚ್‌ಎಂಟಿ ಕಂಪನಿಯು 'ಎಚ್‌ಎಂಟಿ ಕನ್ನಡಿಗ' ಎಂಬ ನೂತನ ಸರಣಿಯ ವಿಶಿಷ್ಟ ಕೈಗಡಿಯಾರಗಳನ್ನು ತಯಾರಿಸಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇವುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ನವದೆಹಲಿ (ನ.1): ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಕಂಪನಿಯು ‘ಎಚ್‌ಎಂಟಿ ಕನ್ನಡಿಗ’ ನೂತನ ಸರಣಿಯ ವಿಶಿಷ್ಟವಾದ ಕೈ ಗಡಿಯಾರಗಳನ್ನು ತಯಾರಿಸಿದ್ದು, ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಕೈಗಡಿಯಾರಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇಂದು ಎಚ್‌ಎಂಟಿ ಕನ್ನಡಿಗ ವಾಚ್ ಬಿಡುಗಡೆ

ಭಾನುವಾರ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಆಟದ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರ ಸಮ್ಮುಖದಲ್ಲಿ ಕೇಂದ್ರ ಸಚಿವರು ವಾಚ್‌ಗಳನ್ನು ಬಿಡುಗಡೆ ಮಾಡಲಿದ್ದಾರೆ.

ಅತ್ಯುತ್ತಮ ಗುಣಮಟ್ಟದ ಎಚ್ಎಂಟಿ ಕೈಗಡಿಯಾರಗಳು

ನವದೆಹಲಿಯಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ, ಸಚಿವ ಕುಮಾರಸ್ವಾಮಿ, ಕರ್ನಾಟಕ 71ನೇ ರಾಜ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಕೇಂದ್ರ ಸರ್ಕಾರದ ಕಾರ್ಖಾನೆಯಾದರೂ ಮೊದಲಿನಿಂದಲೂ ಎಚ್ಎಂಟಿ ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಈ ರಾಜ್ಯೋತ್ಸವಕ್ಕೆ ನೂತನ ಸರಣಿಯ 4 ಅತ್ಯುತ್ತಮ ಗುಣಮಟ್ಟದ ಕೈಗಡಿಯಾರಗಳನ್ನು ಕರ್ನಾಟಕಕ್ಕೆ ನೀಡುತ್ತಿದೆ ಎಂದು ಹೇಳಿದರು.

ಭಾರತದ ಸಮಯ ಪಾಲಕ, ಕರ್ನಾಟಕದ ಹೆಮ್ಮೆ ಎಚ್‌ಎಂಟಿ

‘ಭಾರತದ ಸಮಯಪಾಲಕ’ ಹಾಗೂ ‘ಕರ್ನಾಟಕದ ಹೆಮ್ಮೆ’ ಎಂದೇ ಪ್ರಖ್ಯಾತವಾಗಿರುವ ಎಚ್ಎಂಟಿ ತಯಾರಿಸಿರುವ ಅನೇಕ ವಿಶೇಷ ಕೈಗಡಿಯಾರಗಳಲ್ಲಿ ನೂತನ ಸರಣಿ ಗಡಿಯಾರಗಳು ಮತ್ತಷ್ಟು ವಿಶಿಷ್ಟವಾಗಿದೆ ಎಂದ ಸಚಿವರು, ಚೈನು ಮತ್ತು ಬೆಲ್ಟ್ (ಸ್ಟ್ರ್ಯಾಪ್) ನಮೂನೆಗಳಲ್ಲಿ ಇವು ಲಭ್ಯವಾಗಲಿವೆ. 4 ಮಾದರಿಯಲ್ಲಿರುವ ವಾಚುಗಳ, ಬೆಲೆ ₹1800ರಿಂದ ₹3,600 ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ರೇಡಿಯಮ್ ಹೊಳಪು ಇರುವಂತಹ ಈ ಕೈಗಡಿಯಾರಗಳು ಕನ್ನಡಿಗರಿಗೆ ಬಹಳ ಇಷ್ಟವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಒಂದು ಬೆಲ್ಟಿನ ಬೆಲೆಯೇ ₹450 ಇದೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಈ ಕಾರ್ಯಕ್ರಮದಲ್ಲಿ ಕೈಗಡಿಯಾರಗಳ ಕಲರವ ಒಂದಡೆಯಾದರೆ, ಕನ್ನಡಿಗರನ್ನು ಮನರಂಜಿಸಲು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಏರ್ಪಾಟು ಮಾಡಲಾಗಿದೆ. ಅಲ್ಲದೆ, ಈ ಸುಂದರ ಕಾರ್ಯಕ್ರಮದಲ್ಲಿ ಸುಮಾರು 25ರಿಂದ 30 ಪ್ರಮುಖ ಕನ್ನಡ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅವರೆಲ್ಲರೊಂದಿಗೆ ಶನಿವಾರ ನವದೆಹಲಿಯಿಂದಲೇ ಸಂವಾದ ನಡೆಸಿದ್ದೇನೆ. ಕನ್ನಡ ನಾಡುನುಡಿ ವಿಷಯದಲ್ಲಿ ಅವಿರತವಾಗಿ ಹೋರಾಟ ನಡೆಸುವ ಹೋರಾಟಗಾರರ ಸಹಕಾರವನ್ನು ಕೋರಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.

ಬಾಲ್ಯದಿಂದಲೂ ಎಚ್‌ಎಂಟಿ ಗಡಿಯಾರಗಳ ಅಭಿಮಾನಿ ನಾನು: ಹೆಚ್‌ಡಿಕೆ

ಬಾಲ್ಯದಿಂದಲೂ ನಾನು ಎಚ್ಎಂಟಿ ಗಡಿಯಾರಗಳ ಅಭಿಮಾನಿ. ಈ ಗಡಿಯಾರಗಳ ಬಗ್ಗೆ ಕನ್ನಡಿಗರಿಗೆ ಭಾವನಾತ್ಮಕ ಬಾಂಧವ್ಯ ಇದೆ. ಅಲ್ಲದೆ ಈಗಲೂ ಕೂಡ ಯುವಜನರು ಕಿಲೋಮೀಟರ್‌ ಗಟ್ಟಲೆ ಸಾಲಾಗಿ ನಿಂತು ಎಚ್ಎಂಟಿ ವಾಚುಗಳನ್ನು ಖರೀದಿ ಮಾಡಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅವಿರತವಾಗಿ ಪ್ರಯತ್ನ ಮಾಡುತ್ತಿದೆ. ಬೃಹತ್ ಕೈಗಾರಿಕೆ ಸಚಿವನಾಗಿ ನನ್ನ ಅಧೀನದಲ್ಲಿಯೇ ಈ ಕಾರ್ಖಾನೆ ಬರಲಿದ್ದು, ಇದನ್ನು ಉಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!
ಕರ್ನಾಟಕಕ್ಕೆ ಗೊತ್ತೇ ಆಗದೆ ಮಹಾರಾಷ್ಟ್ರದಿಂದ ₹19,000 ಕೋಟಿಯ ಕೃಷ್ಣಾ ನದಿ ತಿರುವು ಯೋಜನೆ; ಎಂ.ಬಿ. ಪಾಟೀಲ ಆಕ್ಷೇಪ