
ಬೆಂಗಳೂರು : ತಮ್ಮದೇ ಪಕ್ಷದ ಶಾಸಕ ಆನಂದ್ ಸಿಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಬುಧವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕರವಾಗಿದೆ.
ಅತ್ತ ದರಿ, ಇತ್ತ ಪುಲಿ ಎಂಬಂತೆ ಸದನಕ್ಕೆ ಹಾಜರಾದರೆ ಪೊಲೀಸರು ಬಂಧಿಸಬಹುದು, ಹಾಜರಾಗದಿದ್ದರೆ ಸದಸ್ಯತ್ವ ಅನರ್ಹಗೊಳ್ಳಬಹುದು ಎಂಬ ಪರಿಸ್ಥಿತಿ ಗಣೇಶ್ ಅವರಿಗೆ ಎದುರಾಗಿದೆ.
ಬುಧವಾರದಿಂದ ಅಧಿವೇಶನ ಮುಗಿಯುವವರೆಗಿನ ಕಾರ್ಯಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಈಗಾಗಲೇ ಗಣೇಶ್ ಸೇರಿದಂತೆ ಎಲ್ಲ ಕಾಂಗ್ರೆಸ್ ಶಾಸಕರಿಗೂ ಕಾಂಗ್ರೆಸ್ ವಿಪ್ ಜಾರಿಗೊಳಿಸಿದೆ. ಮತ್ತೊಂದೆಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪ ವೇಳೆಯೇ ಗಣೇಶ್ ಅವರನ್ನು ವಿಧಾನಸೌಧದಲ್ಲಿಯೇ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ರಾಮನಗರ ಪೊಲೀಸರು ಸ್ಪೀಕರ್ ಅನುಮತಿ ಕೋರಿದ್ದಾರೆ.
ಹಲ್ಲೆ ಘಟನೆ ನಡೆದ ಬಳಿಕ ಗಣೇಶ್ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸರು ಹಲವು ತಂಡಗಳಾಗಿ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಇದೀಗ ಅಧಿವೇಶನ ಆರಂಭವಾಗುವುದರಿಂದ ಗಣೇಶ್ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ