ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!

Published : Mar 13, 2026, 02:11 PM IST
Kalyana Karnataka Ballari New Airport

ಸಾರಾಂಶ

ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವಂತೆ, ಹಂಪಿಯಂತಹ ಪ್ರವಾಸಿ ತಾಣಗಳಿಗೆ ಹತ್ತಿರವಿರುವ ಹೊಸ ಆಯಕಟ್ಟಿನ ಸ್ಥಳವನ್ನು ಸರ್ಕಾರ ಗುರುತಿಸಿದೆ.

ಬೆಂಗಳೂರು/ಬಳ್ಳಾರಿ (ಮಾ.13): ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಈಗ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ ನಗರ ಮಾತ್ರವಲ್ಲದೆ, ನೆರೆಯ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೂ ಅನುಕೂಲವಾಗುವಂತೆ ವಿಮಾನ ನಿಲ್ದಾಣವನ್ನು ಅತ್ಯಂತ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಪ್ರಶ್ನೆಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಸುದೀರ್ಘವಾಗಿ ಉತ್ತರಿಸಿದ್ದಾರೆ.

ಬಳ್ಳಾರಿಯಿಂದ 19 ಕಿ.ಮೀ ದೂರದಲ್ಲಿ ಹೊಸ ತಾಣ!

ಸರಕಾರದ ಉದ್ದೇಶದಂತೆ ಬಳ್ಳಾರಿ, ಹೊಸಪೇಟೆ, ಯುನೆಸ್ಕೋ ಪರಂಪರೆಯ ತಾಣವಾದ ಹಂಪಿ, ಆನೆಗೊಂದಿ, ಸಂಡೂರು ಹಾಗೂ ಸಿರಗುಪ್ಪ ಭಾಗದ ಜನರಿಗೆ ವಿಮಾನಯಾನ ಸೌಲಭ್ಯ ಹತ್ತಿರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಸುಮಾರು 19 ಕಿ.ಮೀ ದೂರದಲ್ಲಿ ಹೊಸ ಜಾಗವನ್ನು ಗುರುತಿಸಲಾಗಿದೆ. ಕೆಐಎಡಿಬಿ (KIADB) ವತಿಯಿಂದ 800 ಮತ್ತು 1,200 ಎಕರೆ ಇರುವ ಎರಡು ಪ್ರತ್ಯೇಕ ತಾಣಗಳನ್ನು ಪರಿಶೀಲಿಸಲಾಗುತ್ತಿದೆ. ಈ ಜಾಗದ ಕಾರ್ಯಸಾಧ್ಯತೆಯ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.

ದೂರದೃಷ್ಟಿಯ ಕೊರತೆಯಿಂದ ಹಿಂದಿನ ತಪ್ಪುಗಳೇ ಪಾಠ:

ವಿಮಾನ ನಿಲ್ದಾಣಗಳನ್ನು ನಿರ್ಮಿಸುವಾಗ ದೂರದೃಷ್ಟಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿ, ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳನ್ನು ಎಂ ಬಿ ಪಾಟೀಲ ಉದಾಹರಣೆಯಾಗಿ ನೀಡಿದರು. "ಬೆಳಗಾವಿ ಮತ್ತು ಹುಬ್ಬಳ್ಳಿ ಏರ್‌ಪೋರ್ಟ್‌ಗಳ ಮಧ್ಯೆ ಕೇವಲ 70 ಕಿ.ಮೀ ಅಂತರವಿದೆ. ಎರಡೂ ಜಿಲ್ಲೆಗಳ ಮಧ್ಯಭಾಗದಲ್ಲಿ ಒಂದು ದೊಡ್ಡ ನಿಲ್ದಾಣ ನಿರ್ಮಿಸಿದ್ದರೆ, ಇಂದು ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬೆಳೆಯುತ್ತಿತ್ತು," ಎಂದು ಅವರು ಅಭಿಪ್ರಾಯಪಟ್ಟರು. ಇದೇ ತಪ್ಪು ಬಳ್ಳಾರಿಯಲ್ಲಿ ಆಗಬಾರದು ಎಂಬುದು ಸರ್ಕಾರದ ಆಶಯವಾಗಿದೆ.

ಯಾವ ನಗರಗಳಿಗೆ ಎಷ್ಟು ದೂರ?

  • ಈಗ ಗುರುತಿಸಿರುವ ಹೊಸ ಸ್ಥಳವು ಪ್ರಮುಖ ಪ್ರವಾಸಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಹತ್ತಿರವಾಗಿದೆ:
  • ಬಳ್ಳಾರಿ: 19 ಕಿ.ಮೀ
  • ಹೊಸಪೇಟೆ: 33 ಕಿ.ಮೀ
  • ಹಂಪಿ: 26 ಕಿ.ಮೀ
  • ಸಂಡೂರು: 33 ಕಿ.ಮೀ
  • ತೋರಣಗಲ್ಲು: 13 ಕಿ.ಮೀ
  • ಸಿರಗುಪ್ಪ: 43 ಕಿ.ಮೀ
  • ಕೊಪ್ಪಳ: 75 ಕಿ.ಮೀ

ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ:

ಈ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ವಿಮಾನ ನಿಲ್ದಾಣದ ಅಂತಿಮ ತಾಣವನ್ನು ಫಿಕ್ಸ್ ಮಾಡಲಾಗುವುದು. ಹಿಂದೆ ಗುರುತಿಸಿದ್ದ ಸ್ಥಳದಲ್ಲಿ ಏರ್‌ಪೋರ್ಟ್ ಮಾಡಿದರೆ 8 ಪಥಗಳ ಹೆದ್ದಾರಿ ನಿರ್ಮಾಣ ಸೇರಿದಂತೆ ಭೂಸ್ವಾಧೀನಕ್ಕೆ ಭಾರಿ ಮೊತ್ತ ವ್ಯಯಿಸಬೇಕಾಗುತ್ತದೆ, ಇದು ಪ್ರಾಯೋಗಿಕವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಉಡಾನ್ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾಪ:

ಪ್ರಾದೇಶಿಕ ವಿಮಾನ ನಿಲ್ದಾಣಗಳ ಸುಸ್ಥಿರತೆಗಾಗಿ 'ಉಡಾನ್' ಯೋಜನೆಯನ್ನು 3 ರಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಮತ್ತು ನಂತರದ ಐದು ವರ್ಷ ಕೇಂದ್ರ-ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ನಿರ್ವಹಿಸಬೇಕು ಎಂದು ಕೇಂದ್ರ ಸಚಿವರಿಗೆ ಪ್ರಸ್ತಾಪ ಇಟ್ಟಿರುವುದಾಗಿ ಪಾಟೀಲ ತಿಳಿಸಿದರು. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಸ್ಥಿತಿಗತಿಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಒಟ್ಟಾರೆಯಾಗಿ, ಬಳ್ಳಾರಿ ವಿಮಾನ ನಿಲ್ದಾಣವು ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೆ, ಇಡೀ ಕಲ್ಯಾಣ ಕರ್ನಾಟಕ ಮತ್ತು ಪ್ರವಾಸಿ ತಾಣಗಳಿಗೆ ಹೆಬ್ಬಾಗಿಲಾಗುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಮಾರ ಪರ್ವತ ಚಾರಣಕ್ಕೆ ಹೋಗುವ ಪ್ಲಾನ್ ಇದೆಯಾ? ಸರ್ಕಾರದ ಹೊಸ ನಿಯಮಗಳು ತಿಳ್ಕೊಳ್ಳಿ!
ಕೈ ಶಾಸಕರಿಂದ ಸಿದ್ದು ಬಜೆಟ್ ಬಗ್ಗೆ ಅಸಮಾಧಾನ; ಅಭಿವೃದ್ಧಿಗೆ ಡಿಕೆಶಿ ಹಿಂದೆ ಬೀಳಬೇಕು ಎಂದ ಶಾಸಕ ಇಕ್ಬಾಲ್ ಹುಸೇನ್!