
ಆನಂದ್ ಎಂ. ಸೌದಿ
ಯಾದಗಿರಿ (ಏ.19): 'ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ನೀಡಿದರೆ ಎಕರೆಗೆ ಆರೇಳು ಲಕ್ಷ ರು.ಗಳ ಪರಿಹಾರ ಸಿಗ್ತದೆ. ಲಕ್ಷಾನುಗಟ್ಟಲೇ ರೊಕ್ಕಾ ಬಂತಂದ್ರೆ ಸಾವ್ಕಾರ್ ಆಗ್ಬಹುದು ಅನ್ನೋ ಗುಂಗಿನ್ಯಾಗ ಭೂಮಿ ಎಲ್ಲಾ ಮಾರಿ ಕೂತಾರ. ಆದ್ರ, ಭೂಮಿ ಕೊಟ್ಟವರಿಗೀಗ ಬೇಡ್ಕೊಂಡು ತಿನ್ನೋ ಪರಿಸ್ಥಿತಿ ಬಂದದ..! ಸಾವ್ಕಾರ ಅಗ್ತೀವಿ ಅಂದ್ಕೊಡವ್ರಿಗೆ ಭಿಕ್ಷೆ ಬೇಡೋ ಸ್ಥಿತಿ ಆಗೇತಿ. ಮನೀಗೊಬ್ರಿಗೆ ನೌಕರಿ ಸಿಗೋದಿರ್ಲಿ, ಮನ್ಯಾಗಿನ ಮಂದೀ ಜೀವಾನೇ ಹೊಂಟದಲ್ರೀ..!' ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದ ಅಂತರದಲ್ಲಿರುವ ಸಂಗ್ವಾರ ಗ್ರಾಮದ ಮರೆಪ್ಪ ಮೇಲಿನಂತೆ ಹೀಗೆ ಹೇಳುವಾಗ, ಭೂಮಿ ಕಳೆದುಕೊಂಡವರ ಬಗೆಗಿನ ಅವರ ಕಣ್ಣಾಲಿಗಳಲ್ಲಿ ಕೊರಗು ವ್ಯಕ್ತವಾಗುತ್ತಿತ್ತು.
ಮೊದಲ ಹಂತದ ಭೂಸ್ವಾಧೀನದಲ್ಲಿ ಸಂಗ್ವಾರ ಗ್ರಾಮದ ಜಮೀನುಗಳು ಸ್ವಾಧೀನವಾಗಿಲ್ಲವಾದರೂ, ಎರಡನೇ ಹಂತದ 3269 ಎಕರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಇಲ್ಲಿನ ಜಮೀನುಗಳನ್ನು ಗುರುತಿಸಲಾಗಿದೆ. ಆದರೆ, ದುರ್ನಾತ- ತ್ಯಾಜ್ಯ ಮಾತ್ರ ಇವರ ಜೀವ ಹಿಂಡುತ್ತಿದೆ. ಎಕರೆಗೆ 6-7 ಲಕ್ಷ ರು.ಗಳು ಸಿಕ್ತವೆ, ನಮಗೆ ಕೆಲಸಾ ಕೊಡ್ತಾರೆ ಅಂತ ಕಂಪನಿ ಮಂದಿ ಹೇಳಿದಾಗ, ಈ ಭಾಗದ ಮಂದಿ ನಾ ಮುಂದ ನೀ ಮುಂದ ಅಂತ ಗುದ್ದಾಡಿ ಭೂಮಿ ಕೊಟ್ಟರು. ಲಕ್ಷಗಟ್ಟಲೇ ರೊಕ್ಕಾ ಬರ್ತದ, ಸಾವ್ಕಾರ ಆಗ್ತೀವಿ ಅಂತ ಅಂದುಕೊಂಡವರೀಗ ಬೇಡಿಕೊಂಡು ತಿನ್ನೋ ಪರಿಸ್ಥಿತಿ ಬಂದದ.. ಎಲ್ಲಿ ಭೂಮಿ, ಎಲ್ಲಿ ರೊಕ್ಕಾ..? ಈಗ ನೋಡಿದ್ರ ಆಗಿನ ಭೂಮಿ ಮಾಲೀಕರೇ ಈಗ ಇನ್ನೊಬ್ರ ಹೊಲದಾಗ ದುಡೀಲಿಕ್ಕಿ ಹೊಂಟಾರ, ಮಂದಿ ಊರು ಬಿಟ್ಟು ಬೆಂಗಳೂರು, ಹೈದ್ರಾಬಾದ್ ಸೇರ್ಲಿಕತ್ತಾರ..' ಎಂದು ಮರೆಪ್ಪ ಅಲ್ಲಿನ ಬದಲಾದ ಸನ್ನಿವೇಶ ವಿವರಿಸಿದರು.
ಇದನ್ನೂ ಓದಿ: ಕಡೇಚೂರು ವಿಷಗಾಳಿ: 'ಮನುಷ್ಯರೇ ಸಾಯ್ಲಿಕತ್ತೀವಿ, ಪ್ರಾಣಿ ಪಕ್ಷಿಗಳು ಬದುಕ್ತಾವೇನ್?' ಗ್ರಾಮಸ್ಥರ ಆತಂಕದ ಮಾತು!
ಬೆಳೆಯದ ಬೆಳೆ, ರೈತರ ಗುಳೇ !: ಜನರ ಆರೋಗ್ಯ ಸದ್ದಿಲ್ಲದೆ ಹದಗೆಡುತ್ತಿರುವ ಜೊತೆಗೆ, ಕಡೇಚೂರ ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೃಷಿ-ಕೃಷಿಕರ ಬದುಕೂ ಸೊರಗುತ್ತಿದೆ. ಅದ್ಯಾಕೋ, ಏನು ಕಾರಣವೋ ಗೊತ್ತಿಲ್ಲ. ಅಳಿದುಳಿದ ಕೃಷಿ ಜಮೀನುಗಳಲ್ಲಿ ಬೆಳೆ ಇಳುವರಿಯೂ ಕುಂಠಿತವಾಗುತ್ತ ಸಾಗಿದೆ. ಕಳೆದ ಐದು ವರ್ಷಗಳ ಹಿಂದೆ ಹಾಗೂ ಐದು ವರ್ಷಗಳ ನಂತರದ ಇತ್ತೀಚಿನ ದಿನಗಳಲ್ಲಿ ಫಸಲು ಕಡಮೆಯಾಗುತ್ತ ಸಾಗುತ್ತಿರುವುದು ಆತಂಕ ಮೂಡಿಸಿದೆ ಎಂದೆನ್ನುವ ಸಂಗ್ವಾರ್ ಗ್ರಾಮದ ಸಿದ್ದಪ್ಪರನ್ನು "ಕನ್ನಡಪ್ರಭ " ಮಾತಿಗೆಳೆದಾಗ, ಮೊದಲಿಗೆ ಈಗ ಭಾಳ್ ವ್ಯತ್ಯಾಸಾಗೇದ್ರಿ.. ಬೆಳೀ ಮಾತ್ರ ಕಮ್ಮಿ ಬರ್ತಿದೆ ಎಂದರು.
ಕೈಗಾರಿಕೆಗಳಿಗೆಂದು ದಶಕದ ಹಿಂದೆ ಸುಮಾರು 3232 ಎಕರೆ ಭೂಮಿ ಸ್ವಾಧಿನಪಡಿಸಿಕೊಂಡು, ಕೈಗಾರಿಕೆಗಳು ಒಂದೊಂದಾಗಿ ತಲೆ ಎತ್ತಿದ ಮಧ್ಯೇ, ಮತ್ತೇ ನಾಲ್ಕು ವರ್ಷಗಳ ಹಿಂದೆ 3269 ಎಕರೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ನಂತರ ಕೃಷಿಯ ಇಲ್ಲಿನ ಚಿತ್ರಣವೇ ಬದಲಾಗಿದೆ. ಜಲ, ಜನ-ಜೀವನ, ಪ್ರಾಣಿ-ಪಕ್ಷಿ ಸಂಕುಲದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ವರ್ಷಗಳುರುಳಿದಂತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
'ಈ ಮೊದಲು, ಎಕರೆಗೆ ನಾಲ್ಕರಿಂದ ಐದು ಕ್ವಿಂಟಾಲ್ ತೊಗರಿ ಬರುತ್ತಿತ್ತು. ಏಳರಿಂದ ಎಂಟು ಕ್ವಿಂಟಾಲ್ ಜೋಳ, 3-4 ಕ್ವಿಂಟಾಲ್ ಹೆಸರು, 9-10 ಕ್ವಿಂಟಾಲ್ ಹತ್ತಿ ಬೆಳೆ ಕೈಗೆ ಬರ್ತಿತ್ತು. ಆದ್ರೀಗ, ಈ ಐದು ವರ್ಷಗಳಲ್ಲಿ ಈ ಪ್ರಮಾಣ ಕುಸಿದಿದೆ ಎಂದ ಸಿದ್ದಪ್ಪ, ತೊಗರಿ 2-3 ಕ್ವಿಂಟಾಲ್ ಬರ್ತದೆ, ಹತ್ತಿ 5-6 ಕ್ವಿಂಟಾಲ್ ಬಂದ್ರ ಭಾರಿ ಆತು, ತೊಗರಿ 2-3 ಕ್ವಿಂಟಾಲ್- ಜೋಳ 4-5 ಕ್ವಿಂಟಾಲ್ ಬೆಳಿ ಬರುತ್ತಿದೆ ಎಂದ ಸಿದ್ದಪ್ಪ, ಈ ಹಿಂದೆ ಹಾಗೂ ಈಗಿನ ಹವಾಮಾನದಲ್ಲಿ ಅದೇನು ಬದಲಾವಣೆ ಆಯ್ತೋ ಗೊತ್ತಿಲ್ಲ, ಎಕರೆಗೆ ಪ್ರತಿ ಬೆಳೆಯ ಇಳುವರಿ ಕಡಮೆಯಾಗುತ್ತ ನಡೆದಿದೆ.
ಸಿದ್ದಪ್ಪ, ಸಂಗ್ವಾರ ಗ್ರಾಮಸ್ಥ
ಲಕ್ಷಗಟ್ಟಲೇ ರೊಕ್ಕಾ ಬರ್ತದ, ಸಾವ್ಕಾರ ಆಗ್ತೀವಿ ಅಂತ ಅಂದುಕೊಂಡವರೀಗ ಬೇಡಿಕೊಂಡು ತಿನ್ನೋ ಪರಿಸ್ಥಿತಿ ಬಂದದ.. ಎಲ್ಲಿ ಭೂಮಿ, ಎಲ್ಲಿ ರೊಕ್ಕಾ..? ಈಗ ನೋಡಿದ್ರ ಆಗಿನ ಭೂಮಿ ಮಾಲೀಕರೇ ಈಗ ಇನ್ನೊಬ್ರ ಹೊಲದಾಗ ದುಡೀಲಿಕ್ಕಿ ಹೊಂಟಾರ, ಮಂದಿ ಊರು ಬಿಟ್ಟು ಬೆಂಗಳೂರು, ಹೈದ್ರಾಬಾದ್ ಸೇರ್ಲಿಕತ್ತಾರ. : ಮರೆಪ್ಪ, ಸಂಗ್ವಾರ ಗ್ರಾಮಸ್ಥ.
ಇದನ್ನೂ ಓದಿ: ಕಡೇಚೂರು ವಿಷಗಾಳಿ: ಮಕ್ಕಳಿಗೆ ಉಸಿರಾಡಲೂ ಕಷ್ಟ! ಕ್ರಮ ಯಾವಾಗ?
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರ ಮೇಲೆ ಇಂತಹ ಅಡ್ಡ ಪರಿಣಾಮಗಳ ಕುರಿತು ಸರ್ಕಾರ ಅಧ್ಯಯನ ನಡೆಸಿ, ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಭವಿಷ್ಯದಲ್ಲಿ ಅನಾಹುತಗಳನ್ನು ತಪ್ಪಿಸಬೇಕಿದೆ. ಇದಕ್ಕೇನು ಕಾರಣ ಎಂದು ಅರಿಯದೇ ಹೋದರೆ ಮುಂದಿನ ದಿನಗಳಲ್ಲಿ ಬದುಕು ಹೀನಾಯವಾಗಲಿದೆ. : ವಿಶ್ವನಾಥ್, ಬಾಡಿಯಾಳ ಗ್ರಾಮಸ್ಥ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ