
ಬೆಂಗಳೂರು (ಮಾ.9): ಅಪ್ಪನ ಮಹತ್ವ ತಿಳಿಸುವ ‘ಥ್ಯಾಂಕ್ಸ್ ಅಪ್ಪ’ ಕಾದಂಬರಿ ನಾಡಿನ ಪ್ರತಿ ಮನೆಯಲ್ಲೂ ಇರಬೇಕು. ಸಂಬಂಧಗಳ ಬಗ್ಗೆ ಕೃತಿಯು ಬೆಳಕು ಚೆಲ್ಲುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರ ನಿರ್ಮಾಪಕ, ನಿರ್ದೇಶಕ ವೀರೇಂದ್ರಬಾಬು ನಂಜೇಗೌಡ ರಚಿಸಿರುವ ‘ಥ್ಯಾಂಕ್ಸ್ ಅಪ್ಪ’ ಕಾದಂಬರಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಥ್ಯಾಂಕ್ಸ್ ಅಪ್ಪ ಕಾದಂಬರಿಯು ನಾಡಿನ ಪ್ರತಿ ಮನೆಯಲ್ಲೂ ಇರಬೇಕಾದ ಪುಸ್ತಕ ಎನ್ನುವುದು ನನ್ನ ಅನಿಸಿಕೆಯಾಗಿದೆ. ಮಗಳು ವಿವಾಹವಾಗಿ ಗಂಡನ ಮನೆಗೆ ತೆರಳುವಾಗ ‘ಥ್ಯಾಂಕ್ಸ್ ಅಪ್ಪ’ ಕಾದಂಬರಿಯನ್ನು ಉಡುಗೊರೆಯಾಗಿ ಪಡೆಯುವ ದೃಶ್ಯದ ಪ್ರೊಮೋ ಪ್ರದರ್ಶಿಸಲಾಯಿತು. ಅದೇ ರೀತಿ ಇಂದಿನ ಪೀಳಿಗೆಗೆ ಅಪ್ಪನ ಮಹತ್ವ ತಿಳಿಸಲು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೇಖಕ ಡಾ.ಸಂಗಮೇಶ ಉಪಾಸೆ ಮತನಾಡಿ, ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗ ಅಲ್ಲಿದ್ದ 19 ಸಾವಿರ ಹಳ್ಳಿಗರು ಕೆಆರ್‌ಎಸ್ ಅಣೆಕಟ್ಟೆಗಾಗಿ ಹಳ್ಳಿಯನ್ನು ತೊರೆದು, ತ್ಯಾಗ ಮಾಡುವ ಹಿನ್ನೆಲೆಯಲ್ಲಿ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಕೊನೆಯ ಅಧ್ಯಾಯ ಓದುವಾಗ ಅದು ಲೇಖಕರ ಮಾತಾಗದೆ ನಮ್ಮೆಲ್ಲರ ಭಾವೋದ್ರೇಕವನ್ನು ಉದ್ದೀಪನಗೊಳಿಸಿ ಕಣ್ಣು ತೇವಗೊಳಿಸುತ್ತದೆ ಎಂದು ತಿಳಿಸಿದರು.
ಸಾರ್ಥಕತೆ:
ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮಾತಾಡಿ, ಈ ಕಾದಂಬರಿಯ ಒಂದಷ್ಟು ಪುಟಗಳನ್ನು ಓದುವಾಗ ನನ್ನ ತಂದೆಯ ನೆನಪು ಕಾಡಲು ಶುರುವಾಯಿತು. ವೀರೇಂದ್ರಬಾಬುರವರ ‘ಥ್ಯಾಂಕ್ಸ್ ಅಪ್ಪ’ ನನ್ನ ಅಪ್ಪನನ್ನು ನೆನೆಯುವಂತೆ ಮಾಡಿತು. ಇದೇ ಈ ಪುಸ್ತಕದ ಸಾರ್ಥಕತೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಹಲವು ಗಣ್ಯರಿಗೆ ಬೆಂಗಳೂರು ಲಾ ಹೌಸ್‌ನ ಶ್ರೇಷ್ಠ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಥ್ಯಾಂಕ್ಸ್ ಅಪ್ಪ’ ಕಾದಂಬರಿಯನ್ನು ಬೆಂಗಳೂರು ಲಾ ಹೌಸ್ ಪಬ್ಲಿಕೇಷನ್ ಹೊರ ತರುತ್ತಿದ್ದು. ವಾಟ್ಸಪ್ ಸಂಖ್ಯೆ 8217215195 ಸಂಪರ್ಕಿಸಿ ಖರೀದಿಸಬಹುದು.
ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ, ಎಐಸಿಸಿ ಸದಸ್ಯ ಸುಜೇಂದ್ರ ಶೆಟ್ಟಿ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷೆ ಪವಿತ್ರಾ ಆರ್.ಪ್ರಭಾಕರ್ ರೆಡ್ಡಿ, ವಕೀಲರಾದ ಬಿ.ಎಸ್.ಸಂತೋಷ್, ಬಿ.ವಿ.ಮಾಧವಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಜಗದೀಶ್, ಲೇಖಕ ವೀರೇಂದ್ರಬಾಬು, ವೀರೇಂದ್ರಬಾಬು ಅವರ ತಂದೆ ನಂಜೇಗೌಡ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ