ಈ ವರ್ಷದಲ್ಲಿ ಈವರೆಗೆ ತಮಿಳುನಾಡಿಗೆ 69 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, 170 ಟಿಎಂಸಿ ನೀರು ಹರಿದು ಹೋಗಿದ್ದು, ನಿಗದಿಗಿಂತ ಹೆಚ್ಚು ನೀರು ಹರಿದು ಹೋಗಿದೆ. ಹೀಗಾಗಿ, ನಾವು ಸಮಾನಾಂತರ ಜಲಾಶಯವನ್ನು ನಿರ್ಮಿಸಿದ್ದರೆ ಆ ನೀರು ನಮ್ಮ ಬಳಕೆಗೆ ಸಿಗುತ್ತಿತ್ತು. ಕುಡಿಯುವ ನೀರಿಗೆ ಅನುಕೂಲ ಆಗುತ್ತಿತ್ತು ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಆ.23): ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ವಿಧಾನಸೌಧ ಆವರಣದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಯುನೈಟೆಡ್ ನೇಷನ್ಸ್ ಇನ್ನೋವೇಷನ್ಸ್ ಪ್ರಾಜಕ್ಟ್ಸ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು’ ಮಳೆ ನೀರು ಕೊಯ್ಲು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷದಲ್ಲಿ ಈವರೆಗೆ ತಮಿಳುನಾಡಿಗೆ 69 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, 170 ಟಿಎಂಸಿ ನೀರು ಹರಿದು ಹೋಗಿದ್ದು, ನಿಗದಿಗಿಂತ ಹೆಚ್ಚು ನೀರು ಹರಿದು ಹೋಗಿದೆ. ಹೀಗಾಗಿ, ನಾವು ಸಮಾನಾಂತರ ಜಲಾಶಯವನ್ನು ನಿರ್ಮಿಸಿದ್ದರೆ ಆ ನೀರು ನಮ್ಮ ಬಳಕೆಗೆ ಸಿಗುತ್ತಿತ್ತು. ಕುಡಿಯುವ ನೀರಿಗೆ ಅನುಕೂಲ ಆಗುತ್ತಿತ್ತು ಎಂದರು.
ಮೇಕೆದಾಟು ವಿವಾದ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಮೋದಿ ನಕಾರ: ಡಿಕೆಶಿ
ವಿದ್ಯುತ್ ಅನ್ನು ಎಲ್ಲಿ ಬೇಕಾದರೂ ಜನರೇಟ್ ಮಾಡಬಹುದು. ಆದರೆ, ನೀರು ಹಾಗಲ್ಲ. ನೀರಿನ ಸಮಸ್ಯೆಗೆ ಪರಿಹಾರವಾಗಿ ಕೆಆರ್‌ಎಸ್‌ನಿಂದ ನೇರವಾಗಿ ನಗರಕ್ಕೆ ನೀರು ತರುವ ಐಡಿಯಾವನ್ನು ಕೆಲವರು ಕೊಟ್ಟಿದ್ದಾರೆ. ಶರಾವತಿ ನೀರು ತರುವ ಆಲೋಚನೆಯು ಇದ್ದು, ಅದಕ್ಕೆ ಸ್ವಾಭಾವಿಕವಾಗಿ ವಿರೋಧವಿದೆ. ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದೆ. ಬೆಂಗಳೂರಿನ ಕುಡಿಯುವ ನೀರಿನ ದಾಹ ತೀರಿಸಲು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಇದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೇಸಿಗೆಯಲ್ಲಿ 7,000 ಕೊಳವೆಬಾವಿ ಬತ್ತಿ ನೀರಿನ ಸಮಸ್ಯೆಯಾದಾಗ, ಜಲಮಂಡಳಿ ಅಧಿಕಾರಿಗಳು ಚಾಕಚಕ್ಯತೆಯಿಂದ ಸಮಸ್ಯೆ ಪರಿಹರಿಸಿ ಸರ್ಕಾರದ ಗೌರವ ಉಳಿಸಿರುವುದು ಶ್ಲಾಘನೀಯ. ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ಲಾನ್ ತೆಗೆದುಕೊಂಡು ಬಂದರೆ ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಯೋಜನೆ ರೂಪಿಸಬಹುದು ಎಂದು ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಸಾರ್ವಜನಿಕರಿಗೆ ಮಳೆ ನೀರು ಕೊಯ್ಲು ಮಾಡುವ ಕುರಿತು ಮಾಹಿತಿ, ಜಾಗೃತಿ ಮೂಡಿಸಲು ಯುನೈಟೆಡ್ ನೇಷನ್ಸ್ ಯೋಜನೆಯಡಿ 1 ಸಾವಿರ ಸ್ವಯಂಸೇವಕರಿಗೆ ಮಳೆ ನೀರು ಕೊಯ್ಲು ಮತ್ತು ವರುಣ ಮಿತ್ರ ತರಬೇತಿಯನ್ನು ನೀಡಲಾಗುತ್ತದೆ. ನಗರದ ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರದ ಜೊತೆ ಜಲಮಂಡಳಿ ಕೈಜೋಡಿಸುವ ಆಲೋಚನೆ ಇದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.