
ದೊಡ್ಡಬಳ್ಳಾಪುರ (ಜುಲೈ.30): ಜಸ್ಟೀಸ್ ಫಾರ್ ಸೌಜನ್ಯ ಅಭಿಯಾನ ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲೂ ಪ್ರತಿಧ್ವನಿಸಿದೆ. ಸೌಜನ್ಯಗೆ ನ್ಯಾಯ ಸಿಗಲಿ, ನ್ಯಾಯ ಬೆಳಕಿಗೆ ಬರಲೇ ಬೇಕು, ಸೌಜನ್ಯ ಹೆಣ್ಣಲ್ಲ; ಒಂದು ಶಕ್ತಿ ಇತ್ಯಾದಿ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಬಾನಂಗಳಕ್ಕೆ ಲಗ್ಗೆ ಇಟ್ಟು ನ್ಯಾಯದ ಬೇಡಿಕೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದವು.
ಇಲ್ಲಿನ ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿಯ 9ನೇ ವಾರ್ಷಿಕೋತ್ಸವದ ಅಂಗವಾಗಿ ಭುವನೇಶ್ವರಿ ನಗರದ ಬಳಿ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ತರಾವರಿ ಚಿತ್ತಾರದ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಗಮನ ಸೆಳೆದವು.
ಅಪರೇಷನ್ ಸಿಂದೂರದ ಗರಿಮೆ, ಕಾರ್ಗಿಲ್ ವಿಜಯೋತ್ಸವ, ಇಮ್ಮಡಿ ಪುಲಕೇಶಿಯ ಹಿರಿಮೆ, ಪರಿಸರ ಸಂರಕ್ಷಣೆ, ಕನ್ನಡ ಜಾಗೃತಿ ಮೊದಲಾದ ಸಂದೇಶ ಹೊತ್ತ ಪಟಗಳೊಂದಿಗೆ ಆಂಜನೇಯ ಪಟ, ಗಣೇಶ ಪಟ, ಕೃಷ್ಣಪಟ, ಯಕ್ಷಗಾನ, ನರಸಿಂಹಸ್ವಾಮಿ, ಡಮರುಗ, ಕಾಮಾಕ್ಷಿ, ಅಮ್ಮಾರು, ಮತ್ಸ ಕನ್ಯ, ಗಂಡಬೇರುಂಡ, ಮಿಕ್ಕಿಮೌಸ್, ಬುಗುರಿ ಪಟ, ಎಲೆ ಪಟ, ಅಪ್ಪು ಪಟ, ಮೀನಿನ ಪಟ, ಜೀವ ಜಲ ಪಟ, ತ್ರಿಶೂಲ, ಸೈನ್ಯದ ಪಟ, ತಿರುಮಲ ಪಟ, ತೇರಿನ ಪಟ, ಸೂರ ಪಟ, ಕೊರಗಜ್ಜ, ಹೃದಯ, ಓಂ ಪಟ, ಬಜರಂಗ ಬಲಿ, ವೃತ್ತ ಪಟ, ಮಿಲಿಟರಿ ಆರ್.ಸಿ.ಬಿ, ಆಟೋ, ಚೇಳು ಮೊದಲಾದ ಚಿತ್ತಾಕರ್ಷಕ ಪಟಗಳು ಮೈದಾನದಲ್ಲಿ ನೆರೆದಿದ್ದ ನಾಗರಿಕರಿಗೆ ಮನರಂಜನೆಯ ಜೊತೆಗೆ ಸಂಭ್ರಮ, ಮುದ ನೀಡಿದವು.
ಗಾಳಿಪಟ ಸ್ಪರ್ಧೆಯಲ್ಲಿ ಪುರುಷರು, ಮಕ್ಕಳು, ತಂಡಗಳು ಭಾಗವಹಿಸಿ, ಹಾರಿಬಿಟ್ಟಿದ್ದ ವಿವಿಧ ನಮೂನೆಯ ಚಿತ್ತಾಕರ್ಷಕ ಪಟಗಳು ಬಾನಂಗಳದಲ್ಲಿ ಹಾರಾಡಿ ಗಮನ ಸೆಳೆದವು. ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಗಾಳಿಪಟಗಳನ್ನು ವೀಕ್ಷಿಸುವುದರೊಂದಿಗೆ ತಾವು ತಂದಿದ್ದ ಸಣ್ಣಪಟಗಳನ್ನು ಹಾರಿಸಿ ಖುಷಿಪಟ್ಟರು.
ಗಾಳಿಪಟ ಕಲೆಗೆ ಉತ್ತೇಜನ ಅಗತ್ಯ:
ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆ ಉದ್ಘಾಟಿಸಿದ ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್ ಮಾತನಾಡಿ, ದೊಡ್ಡಬಳ್ಳಾಪುರ ಗಾಳಿಪಟ ಕಲೆಗೆ ಹೆಸರಾಗಿದೆ. ಇಲ್ಲಿನ ಗಾಳಿಪಟ ಕಲಾವಿದರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ, ಊರಿಗೆ ಕೀರ್ತಿ ತಂದಿದ್ದಾರೆ. ನಗರೀಕರಣದಿಂದಾಗಿ ಗಾಳಿಪಟ ಹಾರಿಸುವ ಜಾನಪದ ಕಲೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಇಂದಿನ ಯುವ ಪೀಳಿಗೆ ನಶಿಸಿ ಹೋಗುತ್ತಿರುವ ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ನಗರಸಭೆ ನಾಮಿನಿ ಸದಸ್ಯ ಎಚ್ ವಿ.ಅಖಿಲೇಶ್, ನಟರಾದ ರಾಕೇಶ್, ಸುಷ್ಮಾ, ನಿರ್ಮಾಪಕ ಲಕ್ಷ್ಮೀಪತಿ, ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಎಸ್.ರಾಮದಾಸ್, ಕಾರ್ಯದರ್ಶಿ ಶಿವಶಂಕರ್, ಕನ್ನಡ ಕಟ್ಟಾಳು ಮಂಜುನಾಥ್ ಭಾಗವಹಿಸಿದ್ದರು.
ಬಹುಮಾನ ವಿತರಣೆ:
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಗಾಳಿಪಟ ಸ್ಪರ್ಧಿಗಳಿಗೆ ಬಹುಮಾಗಳನ್ನು ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಸದಸ್ಯೆ ಪ್ರಭಾ ನಾಗರಾಜ್, ಮುಖಂಡರಾದ ನಾಗಣ್ಣ, ಅಶ್ವತ್ಥ್, ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ