ಸ್ಮಶಾನಕ್ಕೆ ಜಾಗ ಕೊಡದ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಬಿಸಿ..!

By Kannadaprabha NewsFirst Published Jun 24, 2022, 10:14 AM IST
Highlights

*   ಕಂದಾಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಜೂ.30ಕ್ಕೆ ಆರೋಪ ನಿಗದಿ
*  ಹೈಕೋರ್ಟ್‌ ಮೌನವಾಗಿದ್ದರೆ ಸರ್ಕಾರ 20 ವರ್ಷ ಸಮಯ ಕೇಳುತ್ತದೆ
*  ಹೈಕೋರ್ಟ್‌ ಆದೇಶವನ್ನು ಈವರೆಗೂ ಪಾಲಿಸಿಲ್ಲ
 

ಬೆಂಗಳೂರು(ಜೂ.24):  ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ಸೂಚಿಸಿರುವ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲು ಹೈಕೋರ್ಟ್‌ ನಿರ್ಧರಿಸಿದೆ.

ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಜೂ.30ರಂದು ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿತು.

ಪ್ರಧಾನಿ ಆಗಾಗ ಬೆಂಗ್ಳೂರಿಗೆ ಬಂದರೆ ಅಭಿವೃದ್ಧಿ: ಹೈಕೋರ್ಟ್‌ ಜಡ್ಜ್‌

ಅರ್ಜಿಯನ್ನು ಜೂ.9ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಸೂಚಿಸಿ 2019ರ ಆ.20ರಂದು ಹೈಕೋರ್ಟ್‌ ಏಕ ಸದಸ್ಯ ಪೀಠ ಆದೇಶಿಸಿದೆ. ಆ ಆದೇಶವನ್ನು 15 ದಿನಗಳ ಒಳಗೆ ಪಾಲಿಸಬೇಕು. ತಪ್ಪಿದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿತ್ತು.

ಗುರುವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 29,076 ಗ್ರಾಮಗಳಿವೆ. ಅದರಲ್ಲಿ ಒಟ್ಟು 27,648 ಗ್ರಾಮ ಮತ್ತು 299 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದೆ. ಇನ್ನೂ 1,428 ಗ್ರಾಮಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದೆ. ಅದಕ್ಕಾಗಿ ಬೃಹತ್‌ ಪ್ರಮಾಣದಲ್ಲಿ ಜಮೀನು ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಮಹಿಳೆಯರ ಜೀವನಾಂಶ ಅರ್ಜಿ 6 ತಿಂಗಳಲ್ಲಿ ಇತ್ಯರ್ಥಕ್ಕೆ ಆದೇಶ: ಹೈಕೋರ್ಟ್‌

ಅಲ್ಲದೆ, ಸರ್ಕಾರಿ ಜಮೀನು ಸಿಗುತ್ತಿಲ್ಲ. ಹಾಗಾಗಿ ಖಾಸಗಿಯವರ ಜಮೀನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಸ್ಮಶಾನಕ್ಕೆ ಭೂಮಿ ನೀಡಲು ಜನ ಮುಂದೆ ಬರುತ್ತಿಲ್ಲ. ಹಾಗೆಯೇ, ಪ್ರತಿ ಹಳ್ಳಿಯಲ್ಲೂ ವಿವಿಧ ಧರ್ಮ-ಜಾತಿಯ ಜನರು ತಮ್ಮದೇ ಆದ ವಿಭಿನ್ನ ಆಚರಣೆ ಮತ್ತು ಸಂಪ್ರದಾಯ ಹೊಂದಿದ್ದಾರೆ. ಇದರಿಂದ ಸ್ಮಶಾನಕ್ಕೆ ಜಾಗ ಒದಗಿಸಲು ಕಷ್ಟವಾಗಿದೆ. ಎರಡು ವರ್ಷ ಕಾಲಾವಕಾಶ ನೀಡಿದರೆ 1,428 ಗ್ರಾಮಗಳಿಗೆ ಮತ್ತು ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗುವುದು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು.

ಈ ಮನವಿಗೆ ಒಪ್ಪದ ನ್ಯಾಯಪೀಠ, ರಾಜ್ಯದ ಎಲ್ಲ ಗ್ರಾಮಗಳಿಗೂ ಸ್ಮಶಾನ ಒದಗಿಸಲು ಸರ್ಕಾರ ಈಗ ವರ್ಷ ಕಾಲಾವಕಾಶ ಕೋರಿದೆ. ಆದರೆ, ಏಕ ಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿಯೇ ಮೂರು ವರ್ಷ ಕಳೆದಿವೆ. ಆದರೂ ಹೈಕೋರ್ಟ್‌ ಆದೇಶವನ್ನು ಈವರೆಗೂ ಪಾಲಿಸಿಲ್ಲ. ಈ ವಿಚಾರದಲ್ಲಿ ಸರ್ಕಾರ ಈಗಲೂ ಕಣ್ತೆರೆದಿಲ್ಲ. ಹೈಕೋರ್ಟ್‌ ಮೌನವಾಗಿದ್ದರೆ ಸರ್ಕಾರ 20 ವರ್ಷ ಸಮಯ ಕೇಳುತ್ತದೆ. ಹಾಗಾಗಿ, ಮುಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿತು.
 

click me!