ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸುವಂತಿಲ್ಲ ಹಾಗೂ ನ್ಯಾಯದಾನದ ಹೆಸರಿನಲ್ಲಿ ಕಾನೂನು ವ್ಯಾಪ್ತಿ ಮೀರುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರು (ಜೂ.12): ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸುವಂತಿಲ್ಲ ಹಾಗೂ ನ್ಯಾಯದಾನದ ಹೆಸರಿನಲ್ಲಿ ಕಾನೂನು ವ್ಯಾಪ್ತಿ ಮೀರುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂಗವಿಕರೊಬ್ಬರಿಗೆ ಶಾಂಪಿಂಗ್ ಕಾಂಪ್ಲೆಕ್ಸ್‌ನ ಮಳಿಗೆಯ ಗುತ್ತಿಗೆಯನ್ನು 20 ವರ್ಷ ವಿಸ್ತರಿಸುವಂತೆ ಸೂಚಿಸಿದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ನಿರ್ದೇಶನ ಪ್ರಶ್ನಿಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಸಲ್ಲಿಸಿದ್ದ ತಕರಾರು ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅಲ್ಲದೆ, ಕಾನೂನು ಅಡಿಯಲ್ಲಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ 20 ವರ್ಷ ವಿಸ್ತರಿಸಲು ನಗರಸಭೆಗೆ ಸೂಚಿಸಿದ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿದೆ. ಇದೇ ವೇಳೆ ಮಳಿಗೆಯನ್ನು ಗುತ್ತಿಗೆ ಪಡೆದಿದ್ದ ಅಂಗವಿಕಲ ವ್ಯಕ್ತಿ ಸಾವನ್ನಪ್ಪಿದ್ದು ಪತ್ನಿ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಗುತ್ತಿಗೆಯನ್ನು ಅನುವಂಶೀಯವಾಗಿ ನೀಡಲು ಅವಕಾಶವಿಲ್ಲ. ಹಾಗಾಗಿ, ವ್ಯಾಪಾರ ಚಟುವಟಿಕೆಯನ್ನು ಬೇರಡೆಗೆ ಸ್ಥಳಾಂತರಿಸಲು ಆಕೆಗೆ ಸೂಚಿಸಬೇಕು ಎಂದು ನಗರಸಭೆ ಕೋರಿದೆ. ಆದರೆ, ತಕ್ಷಣದಿಂದಲೇ ವ್ಯಾಪಾರ ಚಟುವಟಿಕೆ ಸ್ಥಳಾಂತರಿಸಲು ಸೂಚಿಸಿದರೆ ವಿಧವಾ ಮಹಿಳೆಗೆ ತೊಂದರೆಯಾಗುತ್ತದೆ. ಆದ್ದರಿಂದ ಅವರು 2024ರ ಡಿ.31ರವರೆಗೆ ಮಳಿಗೆಯಲ್ಲಿ ವ್ಯಾಪಾರ ನಡೆಸಬಹುದು. ನಂತರ ಮಳಿಗೆ ಬಿಟ್ಟುಕೊಡಬೇಕು. ತಪ್ಪಿದರೆ ನಗರಸಭೆ ಪೊಲೀಸರ ನೆರವು ಪಡೆದು ಮಳಿಗೆಯನ್ನು ಸುಪರ್ದಿಗೆ ಪಡೆಯಬಹುದು ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.
ಅಶೋಕ್ ‘ಗ್ಯಾರಂಟಿ’ ಏಟಿಗೆ ಸಿದ್ದರಾಮಯ್ಯ ಎದಿರೇಟು: ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ!
ಪ್ರಕರಣದ ವಿವರ: ನಗರಸಭೆಯ ಶಾಂಪಿಂಗ್ ಕಾಪ್ಲೆಂಕ್ಸ್ ಮಳಿಗೆಯನ್ನು ಗುತ್ತಿಗೆ ಆಧಾರದಲ್ಲಿ ಹರಾಜಿ ಮೂಲಕ ಹಂಚಿಕೆ ಮಾಡಲು ಸರ್ಕಾರ 2007ರಲ್ಲಿ ಆದೇಶಿಸಿತ್ತು. ಈ ವೇಳೆ ಶೇ.80ರಷ್ಟು ಅಂಗವೈಕಲ್ಯ ಹೊಂದಿದ್ದ ಸಿದ್ದರಾಮು ಅವರಿಗೆ ಮಳಿಗೆ ನೀಡಲು ನಗರಸಭೆಗೆ ಅಂಗವಿಕಲರ ಇಲಾಖೆ ಆಯುಕ್ತರು ಸೂಚಿಸಿದ್ದರು. ಅದನ್ನು ನಗರಸಭೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅಂತಿಮವಾಗಿ ಸುಪ್ರಿಂ ಕೋರ್ಟ್ ಸೂಚನೆಗೆ ಮೇರೆಗೆ 2010ರಲ್ಲಿ ಸಿದ್ದರಾಮುಗೆ 12 ವರ್ಷ ಗುತ್ತಿಗೆಗೆ ನೀಡಲಾಗಿತ್ತು. ಮಳಿಗೆಗೆ ನೀಡಲು ಮಾಸಿಕ 1,500 ಮತ್ತು ಠೇವಣಿ ಪಾವತಿಸಲು ಸೂಚಿಸಿತ್ತು.
ಸೆಕ್ಸ್ ಪೆನ್‌ಡ್ರೈವ್ ಹಂಚಿಕೆ ಮಹಾಪಾಪ: ಹೈಕೋರ್ಟ್ ಬೇಸರ
2015ರಲ್ಲಿ ನಗರಸಭೆಯು ನೋಟಿಸ್ ಜಾರಿಗೊಳಿಸಿ ಗುತ್ತಿಗೆಯನ್ನು ನೋಂದಣಿ ಮಾಡಬೇಕು. ಇಲ್ಲವಾದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿತ್ತು. ಈ ನೋಟಿಸ್ ಪ್ರಶ್ನಿಸಿ 2015ರಲ್ಲಿ ಸಿದ್ದರಾಮು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಮಳಿಗೆಯ ಗುತ್ತಿಗೆ ಅವಧಿಯನ್ನು 20 ವರ್ಷ ವಿಸ್ತರಿಸಲು ನಗರಸಭೆಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ನಗರಸಭೆಯು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಕಾನೂನಿನಲ್ಲಿ 12 ವರ್ಷ ನಿಗದಿಯಾಗಿದ್ದರೂ 20 ವರ್ಷ ಗುತ್ತಿಗೆ ನೀಡಲು ನಗರಸಭೆಗೆ ನಿರ್ದೇಶಿಸಿದ ಏಕ ಸದಸ್ಯ ಪೀಠದ ಕ್ರಮವನ್ನು ಆಕ್ಷೇಪಿಸಿದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.