
ಗುಂಡ್ಲುಪೇಟೆ (ನ.6): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಐಸಿಯುನಲ್ಲಿಲ್ಲ, ಸತ್ತು ಹೋಗಿದೆ. ಸಿಎಂ ಹುದ್ದೆಗಾಗಿ ಕಾಂಗ್ರೆಸ್‌ನಲ್ಲೇ ಕಿತ್ತಾಟ ಶುರುವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಜಲಾಶಯದ ಬಳಿ ಮಂಡಲ ಬಿಜೆಪಿ ಆಯೋಜಿಸಿದ್ದ ‘ಕೆರೆ ನೀರಿಗಾಗಿ ಬಿಜೆಪಿ ಕಾಲ್ನಡಿಗೆ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮನೆಗೆ ಹೋಗೋಕೂ ಮುಂಚೆ ಕೆರೆಗೆ ನೀರನ್ನಾದರೂ ತುಂಬಿಸಿ ಹೋಗಲಿ ಎಂದು ವ್ಯಂಗವಾಡಿದರು.
ಇದನ್ನೂ ಓದಿ: Bengaluru: ಟನಲ್ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ತೇನೆ, ಅದಕ್ಕೂ ಮೊದ್ಲು ಕಸ,ಗುಂಡಿ ಸಮಸ್ಯೆ ಬಗೆಹರಿಸ್ತೀರಾ: ಅಶೋಕ್
ರೈತರು ಹಾಗೂ ಬಿಜೆಪಿಯ ಹೋರಾಟದ ಫಲದಿಂದಾಗಿಯೇ ಕೆರೆಗಳಿಗೆ ನೀರು ಬರುತ್ತಿದೆ. ಜಿಲ್ಲಾಡಳಿತ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ, ವಿಧಾನ ಸೌಧಕ್ಕೆ ಮುತ್ತಿಗೆ ಹಾಕೋಣ. ರೈತರು ಕೆರೆ ನೀರು ತುಂಬಿಸಿ ಎಂದು ಹೋರಾಟ ಮಾಡಬೇಕಾ? ಇದಕ್ಕಾ ಇರೋದು ಸರ್ಕಾರ ಎಂದು ಜಾಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 2 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ರಾಜ್ಯದಲ್ಲಿ ವೈನ್ ಶಾಪ್, ಬಾರ್‌ಗಳು ಹೆಚ್ಚಾಗುತ್ತಿವೆ. ಜೊತೆಗೆ ಇಂತಿಷ್ಟು ಅಂತ ಫಿಕ್ಸ್ ಆಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷಗಳಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳು, ರೈತರ ಗೋಳನ್ನು ಕೇಳೋರಿಲ್ಲ. ಖಜಾನೆ ಲೂಟಿ ಹೊಡೆದು ಬಿಹಾರ ಚುನಾವಣೆಗೆ ಹಣ ನೀಡಲಾಗುತ್ತಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಬರುವ ತಮಿಳುನಾಡು ಚುನಾವಣೆಗೂ ರಾಜ್ಯದಿಂದ ಹಣ ಹೋಗಲಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ : ಡಿಕೆಶಿ
ನವೆಂಬರ್ ಕ್ರಾಂತಿಯಾಗಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ನಾನು ಹೇಳಿದ್ದ ಭವಿಷ್ಯ ನಿಜವಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ಗಂಟು ಮೂಟೆ ಕಟ್ಟಲು ಸಿದ್ದರಾಗಿದ್ದಾರೆ ಎಂದು ಟೀಕಿಸಿದರು.
ಶಾಸಕ ಛಲವಾದಿ ನಾರಾಯಣ ಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರ ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ