ನಾನು ಡಾಕ್ಟರ್ ಆಗಬೇಕಿತ್ತು, ಆದ್ರೆ ವೈದ್ಯೆಯ ಗಂಡನಾದೆ: ನಟ ಡಾಲಿ ಧನಂಜಯ ಮಾತಿನ ಮರ್ಮವೇನು?

Published : Nov 05, 2025, 10:55 PM IST
Daali Dhananjay

ಸಾರಾಂಶ

ನಾನು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಕನ್ನಡದಲ್ಲಿ 125ಕ್ಕೆ 123 ಅಂಕ ಗಳಿಸಿದ್ದು ನನ್ನ ಕನ್ನಡ ಪ್ರೀತಿಗೆ ಸಾಕ್ಷಿ. ಮುಂದೆ ವೈದ್ಯನಾಗಬೇಕೆನ್ನುವ ಮಹದಾಸೆ ಇತ್ತು ಎಂದರು ನಟ ಡಾಲಿ ಧನಂಜಯ.

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ನ.05): ನಾನು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಕನ್ನಡದಲ್ಲಿ 125ಕ್ಕೆ 123 ಅಂಕ ಗಳಿಸಿದ್ದು ನನ್ನ ಕನ್ನಡ ಪ್ರೀತಿಗೆ ಸಾಕ್ಷಿ. ಮುಂದೆ ವೈದ್ಯನಾಗಬೇಕೆನ್ನುವ ಮಹದಾಸೆ ಇತ್ತು. ನನ್ನ ಆಸೆ ಕೈಗೂಡಿದ್ದರೆ ಇಂದು ನಾನೂ ಕೂಡ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಭಾಗವಾಗಿರುತ್ತಿದ್ದೆ. ಆದರೆ ಸಿಇಟಿಯಲ್ಲಿ ಕಡಿಮೆ ರ್ಯಾಂಕಿಂಗ್ ಬಂದಿದ್ದಕ್ಕೆ, ಹಣ ಕೊಟ್ಟು ಓದುವ ಅವಕಾಶ ಇಲ್ಲದ್ದಕ್ಕೆ ಎಂಜಿನಿಯರಿಂಗ್ ಓದಿ ನಟನಾದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ನಟ ಡಾಲಿ ಧನಂಜಯ.

ಇದೀಗ ನನ್ನ ಅರ್ಧಾಂಗಿ ಡಾಕ್ಟರ್ ಆಗಿರುವುದು ಇದೇ ಕಾರಣಕ್ಕೆ ನನಗೆ ಹೆಮ್ಮೆ ವಿಷಯವಾಗಿದೆ. ಏಕೆಂದರೆ ವೈದ್ಯ ವೃತ್ತಿ ಬಹಳ ಶ್ರೇಷ್ಠವಾದ ವೃತ್ತಿ. ನಿಮ್ಮ ಜಾತಿ, ಧರ್ಮ, ಸಮುದಾಯ, ಊರು-ಕೇರಿ ಯಾವುದನ್ನೂ ನೋಡದೇ, ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ಎಲ್ಲರನ್ನೂ ಸಮಾನವಾಗಿ ಕಾಣುವ ಉದಾತ್ತ ಕ್ಷೇತ್ರ ವೈದ್ಯಕೀಯ ಕ್ಷೇತ್ರ. ಅದಕ್ಕಾಗಿ ನಿಮಗೆ ಸಮಾಜದಲ್ಲಿ ಬಹಳ ದೊಡ್ಡ ಸ್ಥಾನವಿದೆ. ಅದಕ್ಕೆ ಚ್ಯುತಿ ಬರದಂತೆ ನೀವೂ ನಡೆದುಕೊಳ್ಳುತ್ತಿದ್ದೀರಿ ಎಂದರು.

ಆದರೆ, ಇತ್ತೀಚೆಗೆ ಈ ಕ್ಷೇತ್ರದಲ್ಲಿಯೂ ಬದಲಾವಣೆಯ ಗಾಳಿ ಬೀಸಿದೆ. ಕಾರ್ಪೋರೇಟ್ ಸಂಸ್ಕೃತಿ ಮನೆ ಮಾಡಿದೆ. ರೋಗಿಗಳು ಕ್ಲಯಂಟ್ ಆಗಿ ಬದಲಾಗಿದ್ದಾರೆ. ಇದು ಬೇಸರದ ಸಂಗತಿ. ಜೀವ ಉಳಿಸುವ, ನೋವು ಶಮನಗೊಳಿಸುವ ಪವಿತ್ರ ವೃತ್ತಿಯಲ್ಲಿರುವ ನೀವು, ನಿಮ್ಮ ವೃತ್ತಿ ಧರ್ಮವನ್ನು ಉಳಿಸಿಕೊಳ್ಳಬೇಕು. ವೈದ್ಯಕೀಯ ವ್ಯವಸ್ಥೆ ಭ್ರಷ್ಟವಾಗಬಾರದು. ಅದನ್ನು ಕಾಪಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಡಾಲಿ ಧನಂಜಯ ಹೇಳಿದರು.

ಕನ್ನಡ ಭಾಷೆ ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ಭಾಷೆಯಾಗಬೇಕು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕನ್ನಡಾಭಿಮಾನವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಆಚರಣೆಯಲ್ಲಿಯೂ ಪ್ರದರ್ಶಿಸುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಹೇಳಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಕನ್ನಡ ರಾಜ್ಯೋತ್ಸವ – 2025’ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಬಹುದೊಡ್ಡ ಆರೋಗ್ಯ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆ ಗಳಿಸಿರುವ ನಾವು, ಸಾಮಾಜಿಕ ಹಾಗೂ ಸಮುದಾಯ ಆರೋಗ್ಯ ರಕ್ಷಣೆಯ ಜೊತೆಗೆ, ಕನ್ನಡ ಭಾಷೆ, ನೆಲ, ಜಲ ಮತ್ತು ಪರಂಪರೆಯ ಬೇರನ್ನು ಗಟ್ಟಿಗೊಳಿಸುವ ಕೆಲಸದಲ್ಲೂ ಹಿಂದೆ ಬಿದ್ದಿಲ್ಲ. ಕನ್ನಡ ಭಾಷೆಯ ಪ್ರಚಾರ–ಪ್ರಸಾರ ನಮ್ಮ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಹೊಣೆಗಾರಿಕೆಯೂ, ನಮ್ಮ ಬೌದ್ಧಿಕ ಕರ್ತವ್ಯವೂ ಆಗಿದೆ. ಕನ್ನಡವನ್ನು ಕಟ್ಟಿ ಬೆಳೆಸುವ ನಮ್ಮ ಬದ್ಧತೆಯ ಭಾಗವಾಗಿ ವಿಶ್ವವಿದ್ಯಾಲಯದ ಬಹುತೇಕ ಆಡಳಿತಾತ್ಮಕ ವ್ಯವಹಾರಗಳನ್ನು ಸಹ ಕನ್ನಡದಲ್ಲಿಯೇ ನಡೆಸಲಾಗುತ್ತಿದೆ.

ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಮತ್ತು ವೈದ್ಯಕೀಯ ಕನ್ನಡ ಸಾಹಿತ್ಯವನ್ನು ವಿಸ್ತರಿಸಲು, ವಿಶ್ವವಿದ್ಯಾಲಯದ ಪ್ರಸಾರಂಗದ ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದರು. ಕನ್ನಡ ನಮ್ಮ ವ್ಯವಹಾರ ಭಾಷೆಯಾಗಬೇಕು ಎಂಬ ಸಂಕಲ್ಪದ ಫಲವಾಗಿ ವಿಶ್ವವಿದ್ಯಾಲಯದ ಬಹುತೇಕ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತವೆ. ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು, ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆಯನ್ನೂ ಕಡ್ಡಾಯಗೊಳಿಸಿದ್ದೇವೆ. ಇದರ ಜೊತೆಗೆ, ನಮ್ಮ ವಿಶ್ವವಿದ್ಯಾಲಯದ ಗುರುತಿನ ಚಿಹ್ನೆಯಾಗಿ ಮತ್ತು ಭಾಷಾ ಅಸ್ಮಿತೆಯ ಸಂಕೇತವಾಗಿ, ನಮ್ಮದೇ ಆದ ಕನ್ನಡ ಧ್ಯೇಯ ಗೀತೆಯನ್ನು ಪರಿಚಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ನಮ್ಮ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳು ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬಂದವರಾಗಿದ್ದಾರೆ. ಅವರಿಗೂ ಕನ್ನಡ ಕಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸಿದ್ಧ ಹಾಸ್ಯಲೇಖಕ ಎಂ. ಎಸ್. ನರಸಿಂಹಮೂರ್ತಿ, ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಮಾತನಾಡಿ, ವೈದ್ಯ ವಿದ್ಯಾರ್ಥಿಗಳನ್ನು, ಸಿಬ್ಬಂದಿಯನ್ನು ನಗೆಗಡಲಲ್ಲಿ ತೇಲಿದರು. ಕನ್ನಡ ಬಹಳ ದೊಡ್ಡ ಭಾಷೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ, ಪರಂಪರೆ ಇದೆ. ಇಂಗ್ಲಿಷ್ ನ ಮಹಾಸಾಹಿತಿಗಳು ಹುಟ್ಟುವ ಸಮಯಕ್ಕೆ ಕನ್ನಡದ ಪುರಂದರದಾಸರು, ರನ್ನ-ಪೊನ್ನರು ಕನ್ನಡದಲ್ಲಿ ಮುಂದಿನ 12 ಜನುಮಗಳಿಗೆ ಆಗುವಷ್ಟು ಸಮೃದ್ಧ ಸಾಹಿತ್ಯವನ್ನು ರಚಿಸಿ ಹೋಗಿದ್ದರು. ಅನಂತರ ಬಂದ ಇಂಗ್ಲಿಷ್ ಭಾಷೆಗೆ ನಾವೆಲ್ಲಾ ಸಮ್ಮೋಹನಗೊಂಡ ಬಗೆ ಬೇಸರ ಹುಟಿಸುವಂತಿದೆ ಎಂದು ಹೇಳಿದರು.

ರಂಗು ತುಂಬಿದ ಸಾಂಸ್ಕೃತಿಕ ಸೌರಭ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಮೂಡಿ ಬಂದ ಬಂಜಾರಾ ನೃತ್ಯ, ಯಕ್ಷ ಪ್ರಯೋಗ-ಶ್ರೀರಾಮ ಪಟ್ಟಾಭಿಶೇಕ ಮುಂತಾದ ಕಾರ್ಯಕ್ರಮಗಳು ಕಣ್ಮನ ಸೆಳೆದವು. ಕುಲಸಚಿವರಾದ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವರಾದ ಡಾ. ರಿಯಾಜ್ ಬಾಷಾ ಎಸ್., ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಮಾತನಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ