
ಭಟ್ಕಳ (ನ.02): ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಪಂ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಹಿಂದೇಟು ಹಾಕಿದರು. ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಧ್ವಜಾರೋಹಣ ನೆರವೇರಿಸಿದ ಬಳಿಕ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಕಸಾಪ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಪುಷ್ಪನಮನ ಸಲ್ಲಿಸಲು ಖಾಜೀಯಾ ಅಫ್ಸಾ ಹುಜೈಫಾ ಅವರನ್ನು ಕೇಳಿಕೊಂಡರು. ಆದರೆ ಅದನ್ನು ನಿರಾಕರಿಸಿದರು. ಪುನಃ ಡಾ. ನಯನಾ ಕೂಡ ಆಹ್ವಾನಿಸಿದ್ದರೂ ನಿರಾಕರಿಸಿ ದೂರ ಉಳಿದರು.
ಜಾಲಿ ಪಪಂ ಆಗಿ 10 ವರ್ಷ ಕಳೆದಿದ್ದು, ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿಯೊಬ್ಬರು ಪುಷ್ಪನಮನ ಸಲ್ಲಿಸಲು ನಿರಾಕರಿಸಿದ್ದು, ಖಾಜೀಯಾ ಅಫ್ಸಾ ಹುಜೈಫಾ ಮೂರು ತಿಂಗಳ ಹಿಂದೆಯಷ್ಟೇ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಭಟ್ಕಳ ತಾಲೂಕಿನ ಯಾವುದೇ ಸ್ಥಳೀಯ ಸಂಸ್ಥೆಯಾಗಿರಲಿ, ಜಾಲಿ ಪಟ್ಟಣ ಪಂಚಾಯಿತಿಯಾಗಿರಲಿ ಯಾವುದೇ ಧರ್ಮದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಪುಷ್ಪನಮನ ಸಲ್ಲಿಸುತ್ತಿದ್ದರು. ಈಗ ಜಾಲಿ ಪಪಂ ಅಧ್ಯಕ್ಷೆ ಪುಷ್ಪನಮನ ಸಲ್ಲಿಸಲು ನಿರಾಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಇತರೇ ಭಾಷೆಗಳಿಗೆ ಮಾದರಿ: ಕನ್ನಡ ಚೆಂದದ ಭಾಷೆಯಾಗಿದ್ದು, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಇತರ ಭಾಷೆಗಳಿಗೆ ಮಾದರಿ ಆಗಿದೆ ಎಂದು ಸಹಾಯಕ ಆಯುಕ್ತೆ ಡಾ. ನಯನಾ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕ ಏಕೀಕರಣವಾಗಲು ಅನೇಕರ ತ್ಯಾಗ, ಹೋರಾಟ, ಪರಿಶ್ರಮವಿದೆ.
ಮಧ್ಯರಾತ್ರಿ ಧ್ವಜ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದ ಬೆಳಗಾವಿ ಜನತೆ!
ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಭಟ್ಕಳದಲ್ಲೂ ಸಂಭ್ರಮದಿಂದ ಆಚರಿಸಲಾಗಿದೆ ಎಂದರು.ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಅವರು, ಕನ್ನಡಕ್ಕೆ ತನ್ನದೇ ಇತಿಹಾಸ ಇದೆ. ನಮ್ಮ ನಾಡಗೀತೆ ವೈಶಿಷ್ಟ್ಯತೆಯನ್ನು ಹೊಂದಿದ್ದು, ಸಂಸ್ಕೃತಿ ಮತ್ತು ವೈಚಾರಿಕತೆಯಿಂದ ಕೂಡಿದೆ. ಹಲವರು ಹೋರಾಟದಿಂದ ಕನ್ನಡ ಏಕೀಕರಣಗೊಂಡಿದೆ. ಕನ್ನಡ ಅಂದದ ಮತ್ತು ಚೆಂದದ ಭಾಷೆಯಾಗಿದ್ದು, ವಿದೇಶಿಗರಿಂದಲೂ ಮೆಚ್ಚುಗೆ ಪಡೆದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ