ಎಲ್ಲಿ ನೋಡಿದ್ದಲ್ಲಿ ಕನ್ನಡ ಬಾವುಟಗಳು, ಕನ್ನಡ ಗೀತೆಗಳ ನಿನಾದ, ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು, ಮುಗಿಲು ಮುಟ್ಟಿದ ಕನ್ನಡಪರ ಘೋಷಣೆಗಳು, ಮೊಳಗಿದ ವಾದ್ಯಮೇಳ...!
ಬೆಳಗಾವಿ (ನ.02): ಎಲ್ಲಿ ನೋಡಿದ್ದಲ್ಲಿ ಕನ್ನಡ ಬಾವುಟಗಳು, ಕನ್ನಡ ಗೀತೆಗಳ ನಿನಾದ, ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು, ಮುಗಿಲು ಮುಟ್ಟಿದ ಕನ್ನಡಪರ ಘೋಷಣೆಗಳು, ಮೊಳಗಿದ ವಾದ್ಯಮೇಳ...! ಇದು ಗಡಿನಾಡು ಬೆಳಗಾವಿಯ ಕನ್ನಡ ರಾಜ್ಯೋತ್ಸವದ ಅದ್ಧೂರಿಯ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ. ದಿನವಿಡೀ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆ ನಡೆಯುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಿತು. ಮೆರವಣಿಗೆಯಲ್ಲಿ ರೂಪಕ ವಾಹನಗಳ ಎದುರು ಯುವಕರು ಗುಂಪು ಗುಂಪಾಗಿ ಕನ್ನಡ ಚಲನಚಿತ್ರ ಗೀತೆಗಳ ನಿನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ಕುಣಿದು ಕುಪ್ಪಳಿಸಿದರೂ ಕನ್ನಡಿಗರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಜನರಿದ್ದ ಮೆರವಣಿಗೆಯುದ್ದಕ್ಕೂ ಕನ್ನಡ ಕಂಪು ಸೂಸಿತು. ನಾಡಿಗೆ ಕೇಳಿಸುವಂತೆ ಕನ್ನಡ ಡಿಂಡಿಮ ಮೊಳಗಿತು. ಬಾಲಕರು ಸಹ ಕೈಯಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದರು. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಕನ್ನಡಾಭಿಮಾನಿಗಳು ಹುಚ್ಚೆದ್ದು ಕುಣಿದರು. ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಚಿಕ್ಕಮಕ್ಕಳಿಂದ ಆದಿಯಾಗಿ ಎಲ್ಲರೂ ಸೇರಿ ರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೆದ್ದರು.
undefined
ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬಲೂನ್ ಹಾರಿ ಬಿಡುವುದರ ಮೂಲಕ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಚಾಲನೆ ನೀಡಿದರು. ಬಳಿಕ ಸಚಿವರು ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕನ್ನಡಿಗರ ಮನದಲ್ಲಿ ಆನಂದದ ಪುಳಕ, ಕನ್ನಡ ಮಾತೆ ಜಯಘೋಷ ಮೊಳಗಿದವು. ರಾಜ್ಯೋತ್ಸವದ ಅದ್ಧೂರಿ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡು ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಚನ್ನಮ್ಮ ವೃತ್ತ, ಕಾಕತಿ ವೇಸ್, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಬೋಗಾರವೇಸ್, ಕಾಲೇಜು ರಸ್ತೆ ಮೂಲಕ ಹಾಯ್ದು ಸರ್ಕಾರಿ ಸರ್ದಾರ ಪ್ರೌಢಶಾಲೆಯ ಮೈದಾನ ತಲುಪಿತು.
ಮೆರವಣಿಗೆಯ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಭವ್ಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ನಾಡು ಮೆಟ್ಟಬೇಕು.. ಕರುನಾಡೇ ಕೈ ಚಾಚಿದೆ ನೋಡೇ... ಕನ್ನಡವೇ ನಮ್ಮಮ್ಮ.... ಬೆಳಗಾವಿ ಬೆಡಗಿ... ಹೀಗೆ ಅನೇಕ ಕನ್ನಡ ಚಲನಚಿತ್ರ ಗೀತೆಗಳು ಕನ್ನಡದ ಕಂಪನ್ನು ಬೀರಿದವು. ಕನ್ನಡ ಗೀತೆಗಳ ನಿನಾದಕ್ಕೆ ತಕ್ಕಂತೆ ಮೆರವಣಿಗೆಯಲ್ಲಿ ಯುವಕ, ಯುವತಿಯರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ರಾಜ್ಯೋತ್ಸವ ಮೆರವಣಿಗೆಗೆ ಕಳೆ ತಂದವು.
ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಪಂಪ, ರನ್ನ, ಭುವನೇಶ್ವರಿ ಭಾವಚಿತ್ರ ಹೊತ್ತ ಅಂಬಾರಿ, ಅಕ್ಕಮಹಾದೇವಿ ವೇಷಧಾರಿ ಮಕ್ಕಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಭಾವಚಿತ್ರಗಳು ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವ ಸೇನೆ, ಕರ್ನಾಟಕ ನವ ನಿರ್ಮಾಣ ಪಡೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳು, ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೂಪಕಗಳು ಗಮನ ಸೆಳೆದವು.
ಕನ್ನಡಾಭಿಮಾನ ಮೆರೆದರು: ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹಳದಿ, ಕೆಂಪು ಬಣ್ಣದಿಂದ ಕರ್ನಾಟಕ ರಾಜ್ಯದ ಚಿತ್ತವನ್ನು ತಮ್ಮ ಕೆನ್ನೆ, ಕೈ ಮೇಲೆ ಚಿತ್ರಿಸಿಕೊಂಡು ಕನ್ನಡಾಭಿಮಾನ ಮೆರೆದರು. ಮೆರವಣಿಗೆ ಮಾರ್ಗದುದ್ದಕ್ಕೂ ಬಣ್ಣ ಹಚ್ಚುವವರು, ಕನ್ನಡ ಬಾವುಟ, ಶಾಲು ಮಾರಾಟ ಮಾಡುವವರು ಭರ್ಜರಿ ವ್ಯಾಪಾರ, ವಹಿವಾಟು ನಡೆಸಿದರು. ಜ್ಯೂನಿಯರ್ ರಾಜಕುಮಾರ್ ಸೇರಿದಂತೆ ವಿವಿಧ ಕಲಾವಿದರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಜನರಲ್ಲಿ ಉತ್ಸಾಹ ತುಂಬಿದರು. ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಿದ್ದುಗೆ ನೋವಾದಾಗ ಖುಷಿಪಡುವುದು, ಡಿಕೆಶಿ ಸಮಸ್ಯೆ ಸಿಕ್ಕಾಗ ಸಂತಸಪಡುವುದು ಸರಿಯಲ್ಲ: ಖರ್ಗೆ ಎಚ್ಚರಿಕೆ
ಮಧ್ಯರಾತ್ರಿಯೇ ರಾಜ್ಯೋತ್ಸವಕ್ಕೆ ಚಾಲನೆ: ಗುರುವಾರ ಮಧ್ಯರಾತ್ರಿ 12 ಗಂಟೆಗೆ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡ ಬಣ)ದ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಕನ್ನಡಪರ ಘೋಷಣೆಗಳು ಮೊಳಗಿದವು. ಯುವಕ, ಯುವತಿಯರು ಕೈಯಲ್ಲಿ ಕನ್ನಡ ಬಾವುಟ ಹಾರಿಸುತ್ತ ಕುಣಿದು ಕುಪ್ಪಳಿಸಿದರು.