Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

By Govindaraj S  |  First Published Jan 2, 2023, 11:11 PM IST

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದ್ದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. 


ವಿಜಯಪುರ (ಜ.02): ಕಳೆದೊಂದು ತಿಂಗಳಿಂದ ಸ್ವಾಮೀಜಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಡಿ.10ರಂದು ಸ್ವಾಮೀಜಿಗೆ ಅನಾರೋಗ್ಯ ಉಂಟಾಗಿದ್ದರಿಂದ ಭಕ್ತರ ದಂಡು ಮಠದತ್ತ ಹರಿದುಬರುತ್ತಿತ್ತು. ಆದರೆ, ಈ ವೇಳೆ ಕೇವಲ ನೆಗಡಿ ಮತ್ತು ಜ್ವರ ಮಾತ್ರ ಬಂದಿದ್ದು, ಗಂಭೀರ ಅನಾರೋಗ್ಯ ಇಲ್ಲ ಎಂದು ಮಠದ ಸಿಬ್ಬಂದಿ ತಿಳಿಸಿದ್ದರು. ಇದಾದ ನಂತರ ಸಂಜೆ ವೇಳೆಗೆ ಮಠದ ಭಕ್ತರು, ಆತ್ಮೀಯರು ಹಾಗೂ ಕೆಲವು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದರು. ಆದರೆ, ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದರೂ ಇದಕ್ಕೆ ಸ್ವಾಮೀಜಿ ಒಪ್ಪಿರಲಿಲ್ಲ. ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯ ಉಂಟಾಗಿದ್ದು, ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿತ್ತು. ಆದರೆ, ಇಂದು ಬೆಳಗ್ಗೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಳೆದೊಂದು ವಾರದಿಂದ ಅನಾರೋಗ್ಯ: ಇನ್ನು ಸಿದ್ದೇಶ್ವರ ಸ್ವಾಮೀಜಿಗೆ ಕಳೆದೊಂದು ವಾರದಿಂದ ಅನಾರೋಗ್ಯ ಕಾಡುತ್ತಿದ್ದಂತೆಯೇ ಭಕ್ತರ ದಂಡು ಸಾವಿರಾರು ಸಂಖ್ಯೆಯಲ್ಲಿ ವಿಜಯಪುರ ಜ್ಞಾನಯೋಗಾಶ್ರಮ ಮಠಕ್ಕೆ ಹರದುಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸ್ವಾಮೀಜಿಗಳು ಅಧಿಕೃತವಾಗಿ ಮಠದ ಆವರಣಕ್ಕೆ ಬಂದು ದರ್ಶನ ನೀಡಿದ್ದರು. ಆದರೆ, ಭಕ್ತರನ್ನು ಹತ್ತಿರಕ್ಕೆ ಸೇರಿಸದೇ ಮೊದಲನೆ ಮಹಡಿಯಿಂದ ಎಲ್ಲರಿಗೂ ದರ್ಶನ ನೀಡಿ ಕೆಲವು ಮಾತುಗಳನ್ನಾಡಿದ್ದರು. ಅಂದಿನಿಂದ ಆರೋಗ್ಯ ಹದಗೆಡುತ್ತಲೇ ಸಾಗಿದ್ದು, ತಜ್ಞ ವೈದ್ಯರ ತಂಡವು ಮಠಕ್ಕೆ ಬಂದು ಚಿಕಿತ್ಸೆ ನೀಡಲಾಗುತ್ತಿತ್ತು. ಹಾಸಿಗೆ ಬಿಟ್ಟು ಎದ್ದೇಳುವ ಸ್ಥಿತಿ ಇರಲಿಲ್ಲ. ಆದರೆ, ಇಂದು ತೀವ್ರ ಅನಾರೋಗ್ಯದಿಂದಲೇ ಇಹಲೋಕ ತ್ಯಜಿಸಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.

Tap to resize

Latest Videos

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಒಂದು ವರ್ಷದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ: ಕಳೆದ ವರ್ಷದ ಆರಂಭದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ 'ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ'ಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೆಂದು ಬಂದಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ಜ.10ರಂದು ತಮಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಭಕ್ತರೊಬ್ಬರ ತೋಟದ ಮನೆಯಲ್ಲಿ ಜಾರಿ ಬಿದ್ದಿದ್ದರು. ಈ ವೇಳೆ ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿತವಾಗಿತ್ತು. ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದಾದ ನಂತರ ಎರಡು ತಿಂಗಳವರೆಗೂ ದೀರ್ಘಾವಧಿವರೆಗೆ ವಿಶ್ರಾಂತಿ ಪಡೆದಿದ್ದ ಸ್ವಾಮೀಜಿ ಮಾರ್ಚ್‌ ತಿಂಗಳ ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ವಿರುಪಾಕ್ಷಲಿಂಗ ಸಮಾಧಿ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಪ್ರವಚನವನ್ನು ಪುನಾರಂಭಿಸಿದ್ದರು.

ಸಿದ್ದೇಶ್ವರ ಸ್ವಾಮೀಜಿ ಹಿನ್ನೆಲೆ: ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದ್ದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. 'ಬೆಳೆಯುವ ಪೈರು ಮೊಳಕೆಯಲ್ಲೇ' ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದ್ದರು. 

ಗದಗಿನ ಮಲ್ಲಿಕಾರ್ಜುನ ಸ್ವಾಮೀಜಿ ಶಿಷ್ಯ: ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಅಪರೂಪದ ಮತ್ತು ಅನನ್ಯ ಸಂತ. 14 ನೇ ವಯಸ್ಸಿನಲ್ಲಿ ಗದಗಿನ ಎಚ್.ಎಚ್. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಶಿಷ್ಯರಾಗಿ ಸೇರಿ ಆಧ್ಯಾತ್ಮಿಕತೆಯ ಕಡೆಗೆ ವಾಲಿದ್ದರು. ಗುರುಗಳ ಬಳಿಯೇ ಇದ್ದುಕೊಂಡು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದರು. ಮೃದು ಸ್ವಭಾವದ ಮತ್ತು ಸರಳವಾದ ನೋಟವನ್ನು ಹೊಂದಿರುವ ಸ್ವಾಮೀಜಿ ತುಂಬಾ ನಿಗರ್ವಿಯಾಗಿದ್ದರು. ದೈವಿಕತೆ ಮತ್ತು ದೈವಿಕ ಬುದ್ಧಿವಂತಿಕೆಯು ಅವರ ಮಾತುಗಳಲ್ಲಿ ಮತ್ತು ಜೀವನದಲ್ಲಿ ನಿರಂತರವಾಗಿ ಕಾಣುತ್ತಿತ್ತು. ಅವರ ಆಧ್ಯಾತ್ಮಿಕ ಗುರುಗಳಂತೆ, ಸಾಧಕರು ಮತ್ತು ಎಲ್ಲರಲ್ಲಿ ದೈವಿಕ ಬುದ್ಧಿವಂತಿಕೆಯನ್ನು ಸಾರುವ ಕಾರ್ಯವನ್ನು ಮಾಡುತ್ತಿದ್ದರು. ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಜಿಯು ದೈವಭಕ್ತಿ ಎಂಬ ನೈಜ ಮತ್ತು ನೇರ ನುಡಿಗಳಿಗೆ ಸಾಕ್ಷಿಯಾಗಿದ್ದರು.

ಜೀವನದ ಬಗೆಗಿನ ಉಪನ್ಯಾಸದಿಂದಲೇ ಪ್ರಸಿದ್ಧಿ: ಸಿದ್ದೇಶ್ವರ ಸ್ವಾಮೀಜಿ ಅವರ ಉಪನ್ಯಾಸ ಸರಣಿಯು ಸಾಮಾನ್ಯ ಮನುಷ್ಯರು 'ಬದುಕುವದು ಹೇಗೆ?' ನಾವು ಹೇಗೆ ಬದುಕಬೇಕು, ಜೀವನಕ್ಕೆ ಹೇಗೆ ದಾರಿ ಮಾಡಿಕೊಳ್ಳಬೇಕು ಎಂದು ಮಾಡುತ್ತಿದ್ದ ಉಪನ್ಯಾಸಗಳು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ಮೆಚ್ಚಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದಾರೆ. ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಎಸೆದಿದ್ದಾರೆ. ವಿಶ್ವದ ತತ್ವಜ್ಞಾನಿಗಳ ಹೋಲಿಕೆಯು ಒಂದು ನಿರ್ದಿಷ್ಟ ವಿಷಯದ ದೃಷ್ಟಿಕೋನಕ್ಕೆ ಒಳಪಡಿಸಿದಾಗ ಅವರ ಉಪನ್ಯಾಸದ ಅತ್ಯುತ್ತಮ ಹೊರಬಂದಿದೆ. ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದರು.

ಸ್ವಾಮೀಜಿ ಪಂಚ ಭಾಷಾ ನಿಪುಣರು: ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆದುಕೊಂಡಿತ್ತು.

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ವಿಧಿವಶ, ಶೋಕಸಾಗರದಲ್ಲಿ ಭಕ್ತವೃಂದ!

ಕಾಡ್ಗಿಚ್ಚಿನಂತೆ ಹಬ್ಬಿದ ಪ್ರವಚನ ಮಾತು: ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದರು.

click me!