ಡಿಕೆಶಿ 54 ದಿನ ಜೈಲಿಗೆ ಹೋಗಿದ್ದ ಇ.ಡಿ. ಕೇಸೇ ಸುಪ್ರೀಂಕೋರ್ಟ್‌ನಲ್ಲಿ ರದ್ದು!
ಐವತ್ತನಾಲ್ಕು ದಿನಗಳ ಸೆರೆವಾಸ ಅನುಭವಿಸಲು ಕಾರಣವಾಗಿದ್ದ ಜಾರಿ ನಿರ್ದೇಶನಾಲಯ(ಇ.ಡಿ)ವು 2018ರಲ್ಲಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಹತ್ವದ ಗೆಲುವು ಸಿಕ್ಕಿದೆ.
ನವದೆಹಲಿ (ಮಾ.06): ಐವತ್ತನಾಲ್ಕು ದಿನಗಳ ಸೆರೆವಾಸ ಅನುಭವಿಸಲು ಕಾರಣವಾಗಿದ್ದ ಜಾರಿ ನಿರ್ದೇಶನಾಲಯ(ಇ.ಡಿ)ವು 2018ರಲ್ಲಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಹತ್ವದ ಗೆಲುವು ಸಿಕ್ಕಿದೆ. ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿ ವಿರುದ್ಧ ಇ.ಡಿ.ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಡಿ.ಕೆ.ಶಿವಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್, ನ್ಯಾ.ಕೆ.ವಿ.ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು, ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ಪಿತೂರಿ ಸೆಕ್ಷನ್ ಅಡಿ ಇ.ಡಿ.ಕೇಸ್ ದಾಖಲಿಸಿದ್ದು, ಸಮನ್ಸ್ ನೀಡಿದ್ದು, ವಿಚಾರಣೆ ಮಾಡಿ ಬಂಧಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ಇ.ಡಿ.ಗೆ ಭಾರೀ ಹಿನ್ನಡೆಯಾದಂತಾಗಿದೆ.
ಏನಿದು ಕೇಸ್?: ಡಿ.ಕೆ.ಶಿವಕುಮಾರ್, ಉದ್ಯಮಿಗಳಾದ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಎ.ಹನುಮಂತಯ್ಯ ಮತ್ತು ಮಾಜಿ ಸರ್ಕಾರಿ ಅಧಿಕಾರಿ ರಾಜೇಂದ್ರ ಎನ್. ಅವರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ವಿವಿಧೆಡೆ 2017ರಲ್ಲಿ ದಾಳಿ ನಡೆಸಿದ್ದರು. ಈ ವೇಳೆ 8.59 ಕೋಟಿ ರು. ವಶಕ್ಕೆ ಪಡೆದಿದ್ದರು. ಈ ಸಂಬಂಧ ತೆರಿಗೆ ಇಲಾಖೆಯು ತೆರಿಗೆ ವಂಚನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಐಟಿ ಕಾಯ್ದೆ ಹಾಗೂ ಪಿತೂರಿ ಆರೋಪ 120 ಬಿ ಅಡಿ ಪ್ರಕರಣ ದಾಖಲಿಸಿ, ಬೆಂಗಳೂರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿತ್ತು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ನಿಜ: ಸಚಿವ ಪರಮೇಶ್ವರ್
ನಂತರ ಇ.ಡಿ.ಗೂ ಈ ಕುರಿತು ಮಾಹಿತಿ ನೀಡಿತ್ತು. ಇದರ ಆಧಾರದ ಮೇಲೆ 2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಅಡಿ ಇ.ಡಿ.ಯು ECIR (Enforcement Case Information Report) ದಾಖಲಿಸಿ, ಡಿ.ಕೆ.ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್, ಆದಾಯ ತೆರಿಗೆ ಪ್ರಕರಣದಲ್ಲಿ ಇ.ಡಿ. ಪ್ರವೇಶ ಮಾಡಿ ಸಮನ್ಸ್ ನೀಡಿದೆ. ಇದು ಕಾನೂನು ಬಾಹಿರ ಎಂದು ಹೇಳಿ ಹೈಕೋರ್ಟ್ ಮೊರೆ ಹೋಗಿದ್ದರು. ಡಿ.ಕೆ.ಶಿವಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ನ್ಯಾ.ಅರವಿಂದ್ ಕುಮಾರ್ ನೇತೃತ್ವದ ಪೀಠ ವಿಚಾರಣೆ ನಡೆಸಿ, ಇ.ಡಿ. ಕ್ರಮ ಸರಿಯಾಗಿದೆ ಎಂದು ತೀರ್ಪು ನೀಡಿತ್ತು. ಆ ಬಳಿಕ ಶಿವಕುಮಾರ್ ಮತ್ತಿತರ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಮಧ್ಯೆ, ಹೈಕೋರ್ಟ್ ಡಿ.ಕೆ.ಶಿವಕುಮಾರ್ ಅವರ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ನೀಡಿ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚಿಸಿತ್ತು. ದೆಹಲಿಯಲ್ಲಿ ಮೂರು ದಿನಗಳ ಕಾಲ ವಿಚಾರಣೆ ಮಾಡಿದ ಬಳಿಕ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿತ್ತು. ಆ ಬಳಿಕ 54 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಕಳೆದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇತ್ತ ಪ್ರಕರಣದ ತನಿಖೆ ನಡೆಸಿದ್ದ ಇ.ಡಿ. ದೆಹಲಿಯ ರೋಜ್ ಅವೆನ್ಯೂ ಕೋರ್ಟ್‌ಗೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿತ್ತು. ಇನ್ನೊಂದು ಕಡೆ ಇ.ಡಿ.ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಸುದೀರ್ಘ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ ಇದೀಗ ತೀರ್ಪು ನೀಡಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನ್ಯಾ.ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ.ಪಂಕಜ್ ಮಿಥಲ್ ಅವರ ಪೀಠವು, ನಿಗದಿತ ಅಪರಾಧ ಇಲ್ಲದೆ ಪ್ರಕರಣದಲ್ಲಿ ಇ.ಡಿ.ಯು ಸಂಚು ಅಥವಾ ಪಿತೂರಿ ಸೆಕ್ಷನ್(120b) ಸೇರ್ಪಡೆ ಮಾಡುವಂತಿಲ್ಲ ಎಂದು ಹೇಳಿ ಬೆಂಗಳೂರಿನ ಪವನ್ ದಿಬ್ಬೂರ್ ಎಂಬುವವರ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರ ಪರ ವಕೀಲರು ವಾದ ಮಂಡಿಸಿದ್ದರು. ಸುಪ್ರೀಂಕೋರ್ಟ್‌ನ ಈಗಿನ ತೀರ್ಪಿನ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾತ್ರವಲ್ಲದೆ ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ, ಸುನಿಲ್ ಶರ್ಮಾ, ರಾಜೇಂದ್ರ ಹಾಗೂ ಸಚಿನ್ ನಾರಾಯಣ್ ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ಮೇಲ್ಮನವಿ ಸಲ್ಲಿಕೆ: ಪವನ್ ದಿಬ್ಬೂರ್ ಪ್ರಕರಣದ ತೀರ್ಪುನ್ನು ಈಗಾಗಲೇ ಇ.ಡಿ. ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ಅದರ ತೀರ್ಪು ಹೊರಬಿದ್ದ ಬಳಿಕ ಈತನಕ ಬಂದಿರುವ ತೀರ್ಪುಗಳ ಮೇಲೆ ಅದು ಪರಿಣಾಮ ಬೀರಲಿದೆ.
ದೇಶದ್ರೋಹಿಗಳ ಪರ ಸಚಿವರೇ ನಿಂತಿದ್ದು ದುರ್ದೈವ: ಮಾಜಿ ಸಿಎಂ ಬೊಮ್ಮಾಯಿ
ಇ.ಡಿ.ಕೇಸಿಂದ ನಿರಾಳರಾದವರು: ಡಿಸಿಎಂ ಡಿ.ಕೆ.ಶಿವಕುಮಾರ್, ಎ.ಹನುಮಂತಯ್ಯ, ಸುನಿಲ್ ಶರ್ಮಾ, ರಾಜೇಂದ್ರ ಹಾಗೂ ಸಚಿನ್ ನಾರಾಯಣ್