ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!| ರೈತರಿಗೆ ವಿಶೇಷ ಪ್ಯಾಕೇಜ್| ಹಣ್ಣು, ತರಕಾರಿ, ಹೂವು ಬೆಳೆದವರಿಗೆ ನೆರವಾಗಿ
ಬೆಂಗಳೂರು(ಏ.28): ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಹಣ್ಣು, ತರಕಾರಿ, ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಕೊರೋನಾ ಸೋಂಕು ತಡೆಯುವ ಸಂಬಂಧ ಲಾಕ್‌ಡೌನ್ ಜಾರಿ ಸೇರಿದಂತೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಗೆ ವೈಯಕ್ತಿಕವಾಗಿ ಮತ್ತು ನಮ್ಮ ಪಕ್ಷದಿಂದಲೂ ಸಹಕಾರ ಇದೆ. ಆರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗಿ ತಿಂಗಳು ಕಳೆದಿದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಸಾಕಷ್ಟುತೊಂದರೆಗೊಳಗಾಗಿದ್ದು, ತಮಗೆ ಗೊತ್ತಿದೆ. ಲಾಕ್‌ಡೌನ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿಯೂ ಹಣ್ಣು ತರಕಾರಿ, ಹೂವು ಬೆಳೆದವರು ಕಣ್ಣೀರಿಡುವಂತಾಗಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಮರ: ನ್ಯೂಯಾರ್ಕ್‌ನಲ್ಲಿ ಕನ್ನಡಿಗ ಪಿಂಚಿ ಶ್ರೀನಿವಾಸ್‌ಗೆ 'ಡ್ರೈವ್ ಆಫ್ ಹಾನರ್'!
ಇತ್ತ ಸ್ಥಳೀಯ ಮಾರುಕಟ್ಟೆಯೂ ಇಲ್ಲ, ಅತ್ತ ಬೇರೆ ರಾಜ್ಯ, ದೇಶಗಳಿಗೆ ರಫ್ತು ಸಾಧ್ಯವಾಗಿಲ್ಲ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು, ತರಕಾರಿ, ಹೂವು ಬೇಡಿಕೆ ಇಲ್ಲದೆ ಲಕ್ಷಾಂತರ ರು. ವೆಚ್ಚ ಮಾಡಿ ಬೆಳೆದ ರೈತರು ಸಾಲಗಾರರಾಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆದವರಂತೂ ಶೂನ್ಯ ಮಾರುಕಟ್ಟೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಶ್ರೇಷ್ಠ ಗುಣಮಟ್ಟದ ಹೂವು ಬೆಳೆದ ವಿದೇಶಗಳಿಗೆ ರಫ್ತು ಮಾಡುತ್ತಿದ್ದ ರಾಜ್ಯದ ಹೆಸರು ಜಗತ್ತಿನಲ್ಲಿ ಎತ್ತಿ ಹಿಡಿದಿದ್ದ ನಮ್ಮ ರೈತರು ಬೀದಿಗೆ ಬೀಳುವಂತಾಗಿದೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ತಾವು ಹಣ್ಣು, ತರಕಾರಿ, ಹುವು ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕೆಯಿಂದ ಕೊರೋನಾ ಬರುತ್ತೆಂದ ಮಹಾರಾಷ್ಟ್ರಕ್ಕೆ ಹೈಕೋರ್ಟ್ ತರಾಟೆ!
ಬಜೆಟ್‌ನಲ್ಲಿ ಘೋಷಿಸಿರುವ ಹಲವು ಯೋಜನೆಗಳನ್ನು ಕೈ ಬಿಟ್ಟರೂ ಸರಿಯೇ ಅನ್ನದಾತನ ಕೈ ಬಿಡಬೇಡಿ. ರೈತರ ಪರ ಕಾಳಜಿ ಹೊಂದಿರುವ ತಮ್ಮಿಂದ ಆ ವರ್ಗ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಈ ನಡುವೆ ಮಾವು ಕಠಾವಿಗೆ ಬಂದಿದ್ದು, ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡುವುದು ಮತ್ತು ರಫ್ತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರ ಮಾವು ಬೆಳೆಗಾರರು ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.