ಶಾಸಕ ಯತ್ನಾಳರ ಉಚ್ಚಾಟನೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದ್ದಾರೆ. ಯತ್ನಾಳರ ಕೆಟ್ಟ ನಿರ್ಧಾರದಿಂದ ಉಚ್ಚಾಟನೆಗೊಂಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ನೀಡಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಟೀಕಿಸಿದ್ದಾರೆ.
ವಿಜಯಪುರ (ಏ.2): ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದ್ದು, ನನಗೆ ನೋವಿನ ಸಂಗತಿಯಾಗಿದೆ. ಆದರೆ ಅವರು ಮಾಡಿದ್ದ ಕೆಟ್ಟ ನಿರ್ಧಾರದಿಂದ ಉಚ್ಚಾಟನೆಗೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಯತ್ನಾಳ ಪಂಚಮಸಾಲಿ ನಾಯಕನಾಗಲು, ಬಣಜಿಗ ಸಮಾಜದ ಟಾರ್ಗೆಟ್ ಮಾಡಿದ್ದರು. ಪಂಚಮಸಾಲಿಗರು ಬಣಜಿಗರು ಪರಸ್ಪರ ಸಂಬಂಧಗಳು ಆಗಿವೆ. ರಾಜಕಾರಣ ಮಾಡುವವರು ಯಾವುದೇ ಜಾತಿಯನ್ನು ನೋಡದೇ, ಕೇವಲ ಮನುಷ್ಯತ್ವದ ಜಾತಿಯ ಮೇಲೆ ಇರಬೇಕು. ರಾಜಕಾರಣಿಗಳು ಜಾತಿಯತೆ ಬಿಟ್ಟು ಇರಬೇಕು. ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ ಹಾಗೂ ಯಡಿಯೂರಪ್ಪನವರ ಬಗ್ಗೆ ಮಾತನಾಡಿದಿರಿ, ಜನರಿಗೆ ನೋವಾಗುವ ಕೆಲಸ ಮಾಡಬೇಡಿ. ಯಡಿಯೂರಪ್ಪನವರು ಸಿಎಂ ಇದ್ದಾಗ ಪಾಲಿಕೆಗೆ ಕೊಟ್ಟಿದ್ದ ₹ 120 ಕೋಟಿ ಹಣವನ್ನು ವಾಪಸ್ ಪಡೆದರು ಎಂದು ಹೇಳಿದ್ದೀರಿ. ಯಾವುದೇ ಸರ್ಕಾರ ನಡೆಸುವಾಗ ಅದರ ಮುಖ್ಯಸ್ಥರು ತುರ್ತು ಸಂದರ್ಭದಲ್ಲಿ ಆ ಹಣವನ್ನು ವಾಪಸ್ ತೆಗೆದುಕೊಳ್ಳಬಹುದು. ಇದೇ ಯಡಿಯೂರಪ್ಪನವರು ಸಿಎಂ ಇದ್ದಾಗ ನಗರದ ಅಭಿವೃದ್ಧಿಗೆ ಹಾಗೂ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಯಾಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ಯತ್ನಾಳ ಉಚ್ಚಾಟನೆ ಬಳಿಕ ರಾಜೀನಾಮೆ ಪರ್ವ ನಡೆದಿದೆ ಎಂದು ಹವಾ ಸೃಷ್ಟಿ ಮಾಡಿದ್ದಾರೆ. ಆದರೆ, ಜಿಲ್ಲೆಯ 9 ಮಂಡಳಗಳ ಪದಾಧಿಕಾರಿಗಳೊಂದಿಗೆ ನಾನು ಮಾತನಾಡಿದ್ದೇನೆ. ಯಾರು ರಾಜೀನಾಮೆ ಕೊಟ್ಟಿಲ್ಲ, ಎಲ್ಲರೂ ಪಕ್ಷಕ್ಕೆ ಬೆಂಬಲಕೊಡುವ ಕೆಲಸ ಮಾಡಿದ್ದಾರೆ. ಕೇವಲ ನಗರ ಮಂಡಲದ ಅಧ್ಯಕ್ಷರೊಬ್ಬರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಜಾಗಕ್ಕೆ ಬರಲು ೫೦ ಜನ ಕಾರ್ಯಕರ್ತರು ನಾನು ಮಂಡಲ ಅಧ್ಯಕ್ಷ ಆಗುತ್ತೇನೆ ಎಂದು ತುದಿಗಾಲಮೇಲೆ ನಿಂತಿದ್ದಾರೆ. ನಿಮ್ಮ ಉಚ್ಚಾಟನೆಗೆ ಅಪ್ಪ-ಮಗ ಕಾರಣ ಎನ್ನುತ್ತಿದ್ದೀರಿ, ಅವರು ಕಾರಣರೇ ಅಲ್ಲ. ಉಚ್ಚಾಟನೆ ವಾಪಸ್ ಪಡೆಯುವುದು, ಪಕ್ಷಕ್ಕೆ ಕರೆಯುವದು ಹೈ ಕಮಾಂಡ್ ಗೆ ಬಿಟ್ಟಿದ್ದು. ಆದರೆ ಯತ್ನಾಳ ಅವರು ಹೋಗಿದ್ದರಿಂದ ಪಕ್ಷದ ಶಕ್ತಿ ಕಡಿಮೆಯಾಗಿಲ್ಲ, ಬದಲಾಗಿ ಇನ್ನೂ ಹೆಚ್ಚಾಗಿದೆ. ಜಿಲ್ಲೆಯ ಜನತೆ ವ್ಯಕ್ತಿಗೆ ಅಥವಾ ಜಾತಿಗೆ ಅಂಟಿಕೊಳ್ಳಬಾರದು, ದೇಶದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ವಿಜಯೇಂದ್ರ ಆಕ್ಟೀವ್
ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರ ವಹಿಸಿಕೊಂಡು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಮನೆಯ ಹಿರಿಯ ಸಾಲಮಾಡಿ ಮನೆಯನ್ನೇ ಬೀದಿಗೆ ತಂದಂತೆ ಕಾಂಗ್ರೆಸ್ ಪರಿಸ್ಥಿತಿ ಆಗಿದೆ. ಕೇಂದ್ರ ಸರ್ಕಾರ ಸಾಲ ಮಾಡಿಲ್ಲವಾ ಎಂದು ಕೇಳುವ ಸಿದ್ದರಾಮಯ್ಯನವರೇ, ನೀವು ಕೇಂದ್ರದ ಅಭಿವೃದ್ಧಿಯನ್ನು ನೋಡಬೇಕು. ಭಾರತವನ್ನು ವಿಶ್ವಗುರುವನ್ನಾಗಿಸಲು ಮೋದಿ ಸಾಲ ಮಾಡಿದ್ದಾರೆ. ನಿಮ್ಮ ಹಾಗೆ ನೌಕರರಿಗೆ ಸಂಬಳ ಕೊಡಲು ಆಗದಂತೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ, ಗುತ್ತಿಗೆದಾರರಿಗೆ ಹಣ ಕೊಡಲು ನಿಮ್ಮ ಬಳಿ ಹಣ ಇಲ್ಲ. ಕೆರೆ ತುಂಬಿಸಲು ಕಾಲುವೆಗೆ ಹರಿಸುವ ನೀರು ಕೊನೆ ಭಾಗಕ್ಕೆ ಹೋಗುವುದಿಲ್ಲ, ಈ ಕುರಿತು ಅಧಿಕಾರಿಗಳು ಹಾಗೂ ಶಾಸಕರು ಗಮನಹರಿಸಬೇಕು. ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮತದಾರರು ತಮ್ಮ ತಮ್ಮ ಮನೆಗಳ ಸುತ್ತಲೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರು ನೀಡುವ ಮೂಲಕ ಪ್ರಾಣಿ-ಪಕ್ಷಿಗಳ ಸಂಕುಲ ರಕ್ಷಣೆ ಮಾಡಬೇಕು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಜಯಕುಮಾರ ಕೂಡಿಗನೂರ, ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್‌ಗೆ ಬರೆದುಕೊಟ್ಟಿಲ್ಲ' : ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
ವಿಜಯಪುರ ನಗರ, ಮುದ್ದೇಬಿಹಾಳ ಸೇರಿ ಇಡೀ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕೊಡುಗೆ ಬಹಳಷ್ಟಿದೆ. ನೀವು ಅಪ್ಪ-ಮಗ ಎಂದು ಮಾತನಾಡಿದ್ದೀರಿ. ವಿಜಯೇಂದ್ರನನ್ನು ಅರ್ಹತೆಗೆ ತಕ್ಕಂತೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪನವರ ಮಗ ವಿಜಯೇಂದ್ರ ಎಂದು ಹುದ್ದೆ ಕೊಟ್ಟಿಲ್ಲ, ಅವರ ಅರ್ಹತೆಗೆ ತಕ್ಕಂತೆ ಹುದ್ದೆ ಕೊಟ್ಟಿದ್ದಾರೆ. ಹಾಗಾಗಿ ಅಪ್ಪ-ಮಗ ಎಂಬುದನ್ನು ಬಿಡಬೇಕು.ಗುರುಲಿಂಗಪ್ಪ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ