
ಮೈಸೂರು(ಮೇ.15): ಶಾಸಕ ಜಿಟಿ ದೇವೇಗೌಡ ಮೊಮ್ಮಗಳ ಅಂತ್ಯಸಂಸ್ಕಾರದಲ್ಲಿ ನಟ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಿಟಿ ದೇವೇಗೌಡ ಪುತ್ರ ಹರೀಶ್ ಗೌಡ ಅವರ 3 ವರ್ಷದ ಮಗಳು ಗೌರಿ, ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾಳೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಗೌರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಗುಂಗ್ರಾಲ್ ಛತ್ರದಲ್ಲಿರುವ ಜಿಟಿ ದೇವೇಗೌಡ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನೇರವೇರಸಲಾಗಿದೆ.ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ನಿಖಿಲ್ ಕುಮಾರಸ್ವಾಮಿ, ಜಿಟಿಡಿ ಕುಟಂಬಕ್ಕೆ ಸಾಂತ್ವನ ಹೇಳಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಿಟಿ ದೇವೇಗೌಡರ 3 ವರ್ಷದ ಮೊಮ್ಮಗಳು ವಿಧಿವಶ
ಅಸ್ಥಿಮಜ್ಜೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಗೌರಿ
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡರ ಮೊಮ್ಮಗಳು ಗೌರಿ (3) ಶನಿವಾರ ತಡರಾತ್ರಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ನಿಧನವಾಗಿದ್ದಾಳೆ. ಗೌರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡರ ಪುತ್ರಿ. ಅಸ್ಥಿಮಜ್ಜೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೌರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ ಮೈಸೂರು ತಾಲೂಕು ಇಲವಾಲ ಹೋಬಳಿ ಗುಂಗ್ರಾಲ್ ಛತ್ರ ಗ್ರಾಮಕ್ಕೆ ತಂದು, ಜಿ.ಟಿ. ದೇವೇಗೌಡರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗೌರಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮೊಮ್ಮಗಳ ಸಾವಿನ ಶೋಕದಲ್ಲಿರುವ ಶಾಸಕ ಜಿ.ಟಿ.ದೇವೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗೌರಿಯ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ದೇವೇಗೌಡ: ವೈ.ಎಸ್.ವಿ.ದತ್ತಾ
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೂರು ವರ್ಷದ ಮಗು ಗೌರಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ದೇವರು ಆ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಗೌರಿ ಸಾವಿನ ಸುದ್ದಿ ತಿಳಿದು ಅತೀವ ಸಂಕಟವಾಯಿತು. ಬಾಳಿ ಬದುಕಬೇಕಿದ್ದ ಎಳೆಯ ಕಂದಮ್ಮನ ಅಗಲಿಕೆಯಿಂದ ನೊಂದಿರುವ ಜಿ.ಟಿ.ದೇವೇಗೌಡರ ಕುಟುಂಬದ ಶೋಕದಲ್ಲಿ ನಾನು ಭಾಗಿ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ.ದೇವೇಗೌಡರ ಮೊಮ್ಮಗಳು, ಮೂರು ವರ್ಷದ ಹಸುಗೂಸು ಗೌರಿ ಅನಾರೋಗ್ಯದಿಂದ ಅಸುನೀಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ಮುದ್ದು ಕಂದಳ ಅಗಲಿಕೆ ನನಗೆ ಬಹಳ ದುಃಖ ಉಂಟು ಮಾಡಿದೆ. ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಜಿ.ಟಿ.ದೇವೇಗೌಡರು, ಅವರ ಪುತ್ರ ಹರೀಶ್ ಮತ್ತು ಕುಟುಂಬಕ್ಕೆ ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ