ಪಂಚಮಸಾಲಿ ಸಮಾಜಕ್ಕೆ ಡಿ.19ರೊಳಗಾಗಿ 2 ಎ ಮೀಸಲಾತಿ ನೀಡಲು ಕಾಲಾವಕಾಶ ಕೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲಮಿತಿಯಲ್ಲಿ ಬೇಡಿಕೆ ಈಡೇರಿ ಸದಿದ್ದರೆ ಡಿ.22ಕ್ಕೆ ಬೆಳಗಾವಿಯಲ್ಲಿ 25 ಲಕ್ಷ ಪಂಚಮಸಾಲಿಗಳು ವಿರಾಟ್ ಪಂಚಶಕ್ತಿ ಸಮಾವೇಶದ ಜೊತೆಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.
ದಾವಣಗೆರೆ (ಡಿ.12): ಪಂಚಮಸಾಲಿ ಸಮಾಜಕ್ಕೆ ಡಿ.19ರೊಳಗಾಗಿ 2 ಎ ಮೀಸಲಾತಿ ನೀಡಲು ಕಾಲಾವಕಾಶ ಕೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲಮಿತಿಯಲ್ಲಿ ಬೇಡಿಕೆ ಈಡೇರಿ ಸದಿದ್ದರೆ ಡಿ.22ಕ್ಕೆ ಬೆಳಗಾವಿಯಲ್ಲಿ 25 ಲಕ್ಷ ಪಂಚಮಸಾಲಿಗಳು ವಿರಾಟ್ ಪಂಚಶಕ್ತಿ ಸಮಾವೇಶದ ಜೊತೆಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಕೇಳಿದ ಕಾಲಮಿತಿಯಲ್ಲೇ ಸಮುದಾಯಕ್ಕೆ ಮೀಸಲಾತಿ ಘೋಷಿಸಿದರೆ ಪಂಚಶಕ್ತಿ ಸಮಾವೇಶದಲ್ಲೇ ಬಸವರಾಜ ಬೊಮ್ಮಾಯಿಗೆ ಸನ್ಮಾನಿಸುತ್ತೇವೆ. ಬೇಡಿಕೆ ಈಡೇರದಿದ್ದರೆ ಸುವರ್ಣ ವಿಧಾನಸೌಧಕ್ಕೆ ಪಂಚಮಸಾಲಿಗಳ ಮುತ್ತಿಗೆ ನಿಶ್ಚಿತ ಎಂದರು. ಮುಂದಿನ ರೂಪುರೇಷೆಗಳ ಸಿದ್ಧಪಡಿಸಲು ಬೆಳಗಾವಿ ಗಾಂಧಿ ಭವನದಲ್ಲಿ ಡಿ.12ರ ಮಧ್ಯಾಹ್ನ 12ಕ್ಕೆ 2 ಎ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕಾರಿಣಿ ಸಭೆ ಇದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶೆಪ್ಪನವರ್, ಲಕ್ಷ್ಮೀ ಹೆಬ್ಬಾಳಕರ್, ಎಚ್.ಎಸ್.ಶಿವಶಂಕರ್, ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿ ಸಮಾಜದ ಸಚಿವರು, ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ಪಕ್ಷಗಳಲ್ಲಿರುವ ಪಂಚಮಸಾಲಿ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.
ಪಂಚಮಸಾಲಿ 2ಎ ಮೀಸಲಾತಿ: ಡಿಕೆಶಿ, ಸಿದ್ದು ಭೇಟಿಯಾದ ವಚನಾನಂದ ಶ್ರೀ
ಸಮಾಜ ಸುಮ್ಮನಿರಲು ಸಾಧ್ಯವಿಲ್ಲ: ಮೀಸಲಾತಿ ಘೋಷಣೆಗೆ ಇನ್ನು ಸಹನೆಯಿಂದ ಕಾಯಲು ಸಾಧ್ಯವಿಲ್ಲ. ನಾವು ನೀಡಿದ್ದ ಗಡುವು ಮುಗಿದಿದೆ. ಈಗ ಮುಖ್ಯಮಂತ್ರಿಗಳೇ ಸ್ವತಃ ಗಡುವು, ಕಾಲ ಮಿತಿ ತೆಗೆದುಕೊಂಡಿದ್ದಾರೆ. ಮೀಸಲಾತಿ ಘೋಷಿಸುತ್ತಾರೆಂಬ ವಿಶ್ವಾಸವು ಶೇ.99ರಷ್ಟು ನಮಗೂ ಇದೆ. ಸಿಎಂ ಬೊಮ್ಮಾಯಿ ಭೇಟಿ ಮಾಡಿದಾಗ ಸ್ಪಷ್ಟಭರವಸೆ ವ್ಯಕ್ತಪಡಿಸಿದ್ದಾರೆ. ಡಿ.12ರಂದು ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆ ಕೈಬಿಡಿ. ನೀವು ಹೋರಾಟ ಮಾಡಲು ನಿಗದಿಪಡಿಸಿರುವ ಒಂದು ವಾರದ ಒಳಗಾಗಿಯೇ ಮೀಸಲಾತಿ ಘೋಷಿಸುವ ಭರವಸೆ ಸಿಎಂ ನೀಡಿದ್ದಾರೆ. ಈ ಬಾರಿಯೂ ಕೈಕೊಟ್ಟರೆ ಪಂಚಮಸಾಲಿ ಸಮಾಜ ಸುಮ್ಮನಿರಲು ಸಾಧ್ಯವಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಹತ್ತು ಪಟ್ಟು ಬಲ ಹೆಚ್ಚಿದೆ: ಪೀಠವನ್ನೇ ಬಿಟ್ಟು, ಬೀದಿಗಿಳಿದು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳುತ್ತಿದ್ದೇವೆ. ಸಮಾಜವೂ ಕೈಜೋಡಿಸಿದೆ. 2 ತಿಂಗಳಿನಿಂದ ನಿರಂತರ ಹೋರಾಟ ನಡೆಸಿದ್ದೇವೆ. ಲಕ್ಷಾಂತರ ಜನರನ್ನು ಸೇರಿಸಿ, ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಿವಾಸದೆದುರು ಪ್ರತಿಭಟಿಸಿದ್ದೇವೆ. ಬೃಹತ್ ಪಾದಯಾತ್ರೆ, ಸಮಾವೇಶ, ರಾರಯಲಿ, ಮನೆ ಮನೆಗೆ ಹೋಗಿ ಮೀಸಲಾತಿ ಕೂಗು ಬಲವಾಗುವಂತೆ ಮಾಡಿದ್ದೇವೆ. ಬೆಳಗಾವಿ, ಧಾರವಾಡ, ಹುಕ್ಕೇರಿ, ಅರಭಾವಿ ಸೇರಿದಂತೆ ಅನೇಕ ಕಡೆ ಸಮಾವೇಶ ನಡೆಸಿದ್ದೇವೆ. ನಮ್ಮ ಹೋರಾಟಕ್ಕೆ ಈಗ ಹತ್ತು ಪಟ್ಟು ಬಲ ಬಂದಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಡಿ.19ರೊಳಗಾಗಿ ಪಡೆದು, ಅಂತಿಮ ನಿರ್ಧಾರ ಸಿಎಂ ಪ್ರಕಟಿಸಲಿ ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಾಕೀತು ಮಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ್, ರಾಘವೇಂದ್ರ, ಯೋಗೇಶ, ಕಂಚಿಕೇರಿ ಸಿದ್ದಣ್ಣ, ಬಸವರಾಜ ಕಾರಿಗನೂರು, ಪ್ರಕಾಶ ಹೊನ್ನಮರಡಿ, ವಿಜಯ ಬೆಂಡಿಗೇರಿ, ಚನ್ನಬಸಣ್ಣಗೌಡ, ಧನಂಜಯ ಇತರರು ಇದ್ದರು.
ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವೇ ವಿರಾಟ ಸಮಾವೇಶ: ಜಯಮೃತ್ಯುಂಜಯ ಶ್ರೀ
ಕೇಂದ್ರದ ಒಬಿಸಿ ಪಟ್ಟಿಗೆ ಎಲ್ಲಾ ಲಿಂಗಾಯತರ ಸೇರಿಬೇಕೆಂಬ ಅಖಿಲ ಭಾರತ ವೀರಶೈವ ಮಹಾಸಭಾದ ಒತ್ತಾಯಕ್ಕೆ ಸಹಮತವಿದೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಜೊತೆಗೆ ಎಲ್ಲಾ ಲಿಂಗಾಯತರಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ನೀಡುವಂತೆ ನಾನೂ ಆಗ್ರಹಿಸಿದ್ದೇನೆ. ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ಸ್ವಾಗತಾರ್ಹ. ಅಭಾವೀಮ ಮಹಾಧಿವೇಶನಕ್ಕೆ ಇನ್ನೂ ಆಹ್ವಾನ ಬಂದಿಲ್ಲ. ನಮ್ಮ ಬೇಡಿಕೆ ಏನಾಗುತ್ತದೆಂಬುದನ್ನು ನೋಡಿ, ಸಮಯ ಸಿಕ್ಕರೆ ಖಂಡಿತಾ ಭಾಗವಹಿಸುತ್ತೇವೆ.
-ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮದ ಪಂಚಮಸಾಲಿ ಪೀಠ