
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಏ.26): ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಸಂಬಂಧ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡಿಕೆ ವಿಚಾರವಾಗಿ ರಾಜ್ಯಪಾಲರು ಹಾಗೂ ಲೋಕಾಯುಕ್ತ ಪೊಲೀಸರ ಮಧ್ಯೆ ಹಗ್ಗಾಜಗ್ಗಾಟ ಮುಂದುವರೆದಿದೆ. ಈಗ ಮೂರನೇ ಬಾರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ. ಇದಕ್ಕಾಗಿ ರಾಜ್ಯಪಾಲರ ಸೂಚನೆ ಅನ್ವಯ ಆರೋಪ ಪಟ್ಟಿ ಸೇರಿ ಸುಮಾರು 12 ಸಂಪುಟಗಳಲ್ಲಿ 6 ಸಾವಿರ ಪುಟಗಳ ದಾಖಲೆ ಸಮೇತ ಬುಧವಾರ ಸಂಜೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.
2 ಬಾರಿ ವಾಪಸ್ ಕಳುಹಿಸಿದ್ದ ಗವರ್ನರ್: 2015ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಂದು ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಸುದೀರ್ಘವಾಗಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಆದರೆ 2023ರಲ್ಲಿ ಆಗಿನ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಚಿಕ್ಕಸ್ವಾಮಿ ಅವರು, ಜನಾರ್ದನ ರೆಡ್ಡಿ ವಿರುದ್ಧದ ಆರೋಪಗಳಿಗೆ ಹುರುಳಿಲ್ಲ ಎಂದು ಹೇಳಿ ಲೋಕಾಯುಕ್ತ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಆಡಳಿತ ಇತ್ತು. ಆದರೆ ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ಸ್ವೀಕರಿಸದೆ ಮರು ತನಿಖೆಗೆ ಆದೇಶಿಸಿತ್ತು.
ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ 1 ವರ್ಷ ಜೈಲೇ ಗತಿ
ಹೀಗೆ ಎರಡು ಬಾರಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರೂ ಒಪ್ಪದ ನ್ಯಾಯಾಲಯ, ಮತ್ತೆ ರೆಡ್ಡಿ ವಿರುದ್ಧ ತನಿಖೆಗೆ ಸೂಚಿಸಿತ್ತು. ಅಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬದಲಾಗಿ ಮತ್ತೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೇರಿತು. ಇದೇ ವೇಳೆ ಲೋಕಾಯುಕ್ತ ಸಂಸ್ಥೆಗೆ ಐಜಿಪಿಯಾಗಿ ಸುಬ್ರಹ್ಮಣ್ಯೇಶ್ವರ ರಾವ್ ನೇಮಕಗೊಂಡರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಅವರು, ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ತಿಪ್ಪೇಸ್ವಾಮಿ ಅವರನ್ನು ಹೊಸದಾಗಿ ತನಿಖಾಧಿಕಾರಿಯಾಗಿ ನೇಮಿಸಿದ್ದರು. ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಆಸ್ತಿ ಸಂಪಾದಿಸಿರುವುದು ರುಜುವಾಯಿತು. ಅಂತೆಯೇ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರಿಗೆ ಕಳೆದ ವರ್ಷ ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸಿದ್ದರು.
ಆದರೆ ಮೊದಲು ಆರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ ಸಲ್ಲಿಸುವಂತೆ ಸೂಚಿಸಿದ್ದ ಕಡತವನ್ನು ರಾಜ್ಯಪಾಲರು ಮರಳಿಸಿದ್ದರು. ಈ ಸೂಚನೆ ಮೇರೆಗೆ ಆರೋಪ ಪಟ್ಟಿ ಭಾಷಾಂತರಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದರು. ಆದರೆ ಇದೇ ಪ್ರಕರಣದಲ್ಲಿ ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಬಿ ರಿಪೋರ್ಟ್ ಅನ್ನು ಭಾಷಾಂತರಿಸಿ ಸಲ್ಲಿಸುವಂತೆ ನಿರ್ದೇಶಿಸಿ ಎರಡನೇ ಬಾರಿ ಪ್ರಾಸಿಕ್ಯೂಷನ್ ಅನುಮತಿ ಕಡತವನ್ನು ರಾಜ್ಯಪಾಲರು ಮರಳಿಸಿದ್ದರು. ಈಗ 500 ಪುಟಗಳ ‘ಬಿ’ ರಿಪೋರ್ಟ್‌ನ ಹಾಗೂ 5,500 ಪುಟಗಳ ಆರೋಪ ಪಟ್ಟಿ ಸೇರಿ 6 ಸಾವಿರ ಪುಟಗಳ ವರದಿಯನ್ನು ಪ್ರಾಸಿಕ್ಯೂಷನ್ ಅನುಮತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Koppal: ಯುವಕರಿಗೆ ಕನ್ಯೆಯರ ಅಭಾವ, ಮಕ್ಕಳ ಕೊರಳಿಗೆ ಮಾಂಗಲ್ಯ!
₹67 ಕೋಟಿ ಅಕ್ರಮ ಆಸ್ತಿ ಸಂಪಾದನೆ: ತಮ್ಮ ಆದಾಯಕ್ಕಿಂತ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶೇ.27 ರಷ್ಟು ಅಂದರೆ 67 ಕೋಟಿ ರು ಮೌಲ್ಯದ ಆಸ್ತಿಯನ್ನು ಕಾನೂನುಬಾಹಿರವಾಗಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಕಂಪನಿ ಸೇರಿದಂತೆ ರಾಜ್ಯಕ್ಕೆ ಸಿಮೀತವಾಗಿ ತನಿಖೆ ನಡೆಸಲಾಗಿದೆ. ರೆಡ್ಡಿ ಅವರ ವಿದೇಶ ಕಂಪನಿಗಳ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ಸಮಸ್ಯೆ ಎದುರಾಯಿತು. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ