ಅನಧಿಕೃತ ಲೇಔಟ್‌ ನಿರ್ಮಿಸಿದರೆ ಮುಟ್ಟುಗೋಲು: ಸಚಿವ ಕೃಷ್ಣ ಬೈರೇಗೌಡ

Published : Apr 26, 2025, 11:39 AM ISTUpdated : Apr 26, 2025, 11:41 AM IST
ಅನಧಿಕೃತ ಲೇಔಟ್‌ ನಿರ್ಮಿಸಿದರೆ ಮುಟ್ಟುಗೋಲು: ಸಚಿವ ಕೃಷ್ಣ ಬೈರೇಗೌಡ

ಸಾರಾಂಶ

ಇನ್ನು ಮುಂದೆ ನಿಯಮ ಮೀರಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು (ಏ.26): ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ನಿಯಮ ಮೀರಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇ-ಖಾತಾ ಕಡ್ಡಾಯಗೊಳಿಸಿ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೂ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡಾವಣೆ ನಿರ್ಮಾಣ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಅಕ್ರಮ ಬಡಾವಣೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ಇದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆ ನಿರ್ಮಿಸಲು ಬಿಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕು. ಈ ಸೂಚನೆ ಮೀರಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ವಸತಿ ಬಡಾವಣೆ ನಿರ್ಮಿಸಬೇಕಾದರೆ ಜಿಲ್ಲಾಧಿಕಾರಿಗಳಿಂದ ಭೂ ಬಳಕೆ ಪರಿವರ್ತನೆ ಮಾಡಿಸಿ ನಕ್ಷೆ ಮಂಜೂರಾತಿ ಪಡೆದು ಅದರಂತೆಯೇ ನಿರ್ಮಾಣ ಮಾಡಬೇಕು. ಬಳಿಕವೇ ನಿವೇಶನಗಳನ್ನು ಮಾರಾಟ ಮಾಡಲು ಅನುಮತಿ ನೀಡಬೇಕು. ಅಂತಹ ನಿವೇಶನಗಳಿಗೆ ಮಾತ್ರ ಇನ್ನು ಮುಂದೆ ಇ-ಖಾತಾ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ 1 ವರ್ಷ ಜೈಲೇ ಗತಿ

ವರ್ಷಾಂತ್ಯದೊಳಗೆ ಪೋಡಿ ದುರಸ್ತಿ: ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷ್ಣಬೈರೇಗೌಡ, ದಶಕಗಳ ಹಿಂದೆ ಸರ್ಕಾರದಿಂದ ಭೂ ಮಂಜೂರಾಗಿದ್ದರೂ, ಪಕ್ಕಾ ದಾಖಲೆಗಳಲ್ಲಿದೆ ಪರಿತಪಿಸುತ್ತಿದ್ದ ರೈತರಿಗೆ ಈ ವರ್ಷಾಂತ್ಯದೊಳಗೆ ಪೋಡಿ ದುರಸ್ಥಿ ಮಾಡಿಕೊಡಲಾಗುವುದು. ರೈತರಿಗೆ ಕಳೆದ 60 ವರ್ಷಗಳಿಂದ ನಾನಾ ಸರ್ಕಾರಿ ಯೋಜನೆಗಳ ಅಡಿ ಭೂ ಮಂಜೂರಾಗಿದೆ. ರೈತರು ಆ ಜಮೀನಿನಲ್ಲಿ ಅನುಭೋಗದಲ್ಲಿದ್ದಾರೆ, ಪಹಣಿಯಲ್ಲಿ ಅವರ ಹೆಸರಿದೆ ಎಂಬುದನ್ನು ಬಿಟ್ಟರೆ ಬೇರೆ ಯಾವ ದಾಖಲೆಗಳೂ ಇಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 

ಹೀಗಾಗಿ ರೈತರು ಪಕ್ಕಾ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಕಳೆದ ಜನವರಿ ತಿಂಗಳಿಂದ ರಾಜ್ಯಾದ್ಯಂತ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಎಲ್ಲಾ ಸರ್ಕಾರಿ ಜಮೀನುಗಳು ಮೂರು-ನಾಲ್ಕು ತಲೆ ಮಾರುಗಳ ಹಿಂದೆ ಮಂಜೂರಾಗಿದ್ದು, ಪ್ರತಿ ಅರ್ಜಿಯ ಹಿಂದೆಯೂ 5 ರಿಂದ 15 ಜನ ವಾರಸುದಾರರಿದ್ದಾರೆ. ಎಲ್ಲರಿಗೂ ಪೋಡಿ ದುರಸ್ತಿ ಮಾಡಿ ಈ ವರ್ಷಾಂತ್ಯದಲ್ಲಿ ಪಕ್ಕಾ ದಾಖಲೆ ಮಾಡುವ ಗುರಿ ಇದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಕೆಲ ಪ್ರಕರಣಗಳು ಬಾಕಿ ಉಳಿದರೆ, ಮುಂದಿನ ವರ್ಷದೊಳಗೆ ಎಲ್ಲಾ ಪ್ರಕರಣಗಳನ್ನೂ ಮುಗಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಭೂ ಸುರಕ್ಷಾ ಯೋಜನೆ ಅಡಿ ವರ್ಷಾಂತ್ಯದೊಳಗೆ ತಹಶೀಲ್ದಾರ್ ಕಚೇರಿಗಳಲ್ಲಿರುವ ಎಲ್ಲಾ ಮೂಲ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಭೂ ಮಾಪನಾ ಇಲಾಖೆ ಆಯುಕ್ತರಾದ ಮಂಜುನಾಥ್ ಹಾಜರಿದ್ದರು.

ಮೇ 20ರಂದು 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್‌ ಹಕ್ಕುಪತ್ರ ವಿತರಣೆ: ರಾಜ್ಯಾದ್ಯಂತ ಕಂದಾಯ ಗ್ರಾಮಗಳಲ್ಲಿನ ಒಂದು ಲಕ್ಷ ಕುಟುಂಬಗಳಿಗೆ ಮೇ 20 ರಂದು ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಹಾಡಿ, ಹಟ್ಟಿ, ತಾಂಡಾಗಳು ಸೇರಿದಂತೆ ಜನ ವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಅಂಗೀಕರಿಸದ ಕಾರಣ ಅಲ್ಲಿನ ನಿವಾಸಿಗಳು ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ತಾಂಡಾಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ.

ಸಿಐಡಿ ಚಾರ್ಜ್‌ಶೀಟ್‌ ಬೆನ್ನಲ್ಲೇ ಬ್ಯಾಂಕ್‌ ಸಾಲ ಕಟ್ಟಿದ ರಮೇಶ್

ಜತೆಗೆ ಹಟ್ಟಿ, ತಾಂಡಾ ನಿವಾಸಿಗಳ ಮನೆಗಳಿಗೆ ಕಾನೂನಿನ ಆಸರೆ ನೀಡಬೇಕು ಎಂಬ ಉದ್ದೇಶದಿಂದ 2016-17ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಹಕ್ಕುಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದರಡಿ ಮೇ 20ಕ್ಕೆ 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುವುದು. ಬಳಿಕ ವರ್ಷಾಂತ್ಯದ ವೇಳೆಗೆ ವಿವಿಧ ಕಾರಣಗಳಿಂದಾಗಿ ಬಿಟ್ಟುಹೋದ ಜನ ವಸತಿ ಪ್ರದೇಶಗಳನ್ನೂ ಗುರುತಿಸಿ ಕನಿಷ್ಠ 2 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ