ರೆಡ್ಡಿ ಬಗ್ಗೆ ಇರುವ ಮಹತ್ವದ ಸಾಕ್ಷ್ಯ ಯಾವುದು ..?

Published : Nov 14, 2018, 09:07 AM IST
ರೆಡ್ಡಿ ಬಗ್ಗೆ ಇರುವ ಮಹತ್ವದ ಸಾಕ್ಷ್ಯ ಯಾವುದು ..?

ಸಾರಾಂಶ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಿದ ಸಿಸಿಬಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದು, ವಿಚಾರಣೆ ಬಳಿಕ  ಜೈಲಾ ಬೇಲಾ ಎನ್ನುವುದು ನಿರ್ಧಾರವಾಗಲಿದೆ.

ಬೆಂಗಳೂರು :  ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿನ ಪ್ರಕರಣ ರದ್ದತಿಗೆ ಡೀಲ್‌ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಿದ ಸಿಸಿಬಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದಾರೆ.

ಅರ್ಜಿ ಸಂಬಂಧ ವಿಚಾರಣೆ ನಡೆಸಿರುವ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ.ಜಗದೀಶ್‌ ಅವರು, ಯಾವ ಸಾಕ್ಷ್ಯದ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪರ ವಕೀಲರನ್ನು ಪ್ರಶ್ನಿಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ.ಎಚ್‌.ಹನುಮಂತರಾಯ, ಆ್ಯಂಬಿಡೆಂಟ್‌ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಹೀಗಿದ್ದರೂ ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಐದನೇ ಆರೋಪಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ ಕೂಡಲೇ ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರಾಗಿದ್ದಾರೆ. ಹಣ ಕಳೆದುಕೊಂಡವರು ಅರ್ಜಿದಾರರ ವಿರುದ್ಧ ದೂರು ನೀಡಿಲ್ಲ. ಹಣ ಹೂಡಿಕೆ ಮಾಡುವ ವಿಚಾರದಲ್ಲಿ ನೇರವಾಗಿ ರೆಡ್ಡಿ ಭಾಗಿಯಾಗಿಲ್ಲ. ಸೂಕ್ತ ಮಾಹಿತಿ ಇಲ್ಲದೆ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರೆಡ್ಡಿ ಅವರ ಪಾತ್ರವೇ ಇಲ್ಲ. ಸಿಸಿಬಿ ಪೊಲೀಸರ ತನಿಖಾ ವೈಖರಿ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಪ್ರಕರಣದ ಮೊದಲ ಆರೋಪಿ ಫರೀದ್‌ನಿಂದ ರೆಡ್ಡಿ ಆಪ್ತ ಅಲಿಖಾನ್‌ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಪೊಲೀಸರು ರಿಮಾಂಡ್‌ ಅರ್ಜಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿಗೆ ಮಾಹಿತಿ ಇರುವುದಾಗಿ ಒಪ್ಪಿದ್ದಾರೆ. ಅಲ್ಲದೆ, ಆ ಹಣವನ್ನು ಹಿಂದಿರುಗಿಸಲು ಯತ್ನಿಸುವುದಾಗಿ ತನಿಖೆ ವೇಳೆ ಅಲಿಖಾನ್‌ ಪೊಲೀಸರಿಗೆ ಹೇಳಿದ್ದಾರೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಪ್ರಕರಣದ ಮೊದಲ ಆರೋಪಿ ಫರೀದ್‌ ವಿಚಾರಣೆ ವೇಳೆ ಅರ್ಜಿದಾರರ ಹೆಸರು ಹೇಳಿದ್ದಾನೆ. ಆರೋಪಿ ವಿರುದ್ಧ ಸಾಕ್ಷ್ಯಗಳಿವೆ. ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಕಲೆಹಾಕಲು ಮತ್ತಷ್ಟುಕಾಲಾವಕಾಶ ನೀಡಬೇಕು. ಹಾಗಾಗಿ ಜಾಮೀನು ಕೋರಿರುವ ಅರ್ಜಿ ವಜಾಗೊಳಿಸಬೇಕು ಎಂದು ವಾದಿಸಿದರು.

ಜಡ್ಜ್‌ರಿಂದ ಸಿಸಿಬಿಗೆ ಪ್ರಶ್ನೆಗಳ ಸುರಿಮಳೆ:  ಸರ್ಕಾರಿ ವಕೀಲರ ವಾದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಧೀಶರು, ಅರ್ಜಿದಾರರನ್ನು ಬಂಧಿಸುವುದಕ್ಕೆ ಸಾಕ್ಷ್ಯಾಧಾರಗಳು ಏನಿವೆ? ಯಾವ ಆಧಾರದಲ್ಲಿ ಬಂಧಿಸಿದ್ದೀರಿ? ದಾಖಲಾಗಿರುವ ಪ್ರಕರಣಕ್ಕೂ ತನಿಖೆ ನಡೆಯುತ್ತಿರುವ ಪ್ರಕರಣಕ್ಕೂ ಸಂಬಂಧವೇನು? ಅರ್ಜಿದಾರರ ವಿರುದ್ಧ ವಂಚನೆ ಆರೋಪಕ್ಕೆ ಸಾಕ್ಷಿಗಳೇನಿದೆ? ವಂಚನೆ ಪ್ರಕರಣಕ್ಕೂ ಜನಾರ್ದನ ರೆಡ್ಡಿ ಬಂಧನಕ್ಕೂ ಏನು ಸಂಬಂಧ? ಯಾವ ಸಾಕ್ಷ್ಯಗಳ ಆಧಾರದ ಮೇಲೆ ರೆಡ್ಡಿಯನ್ನು ಬಂಧಿಸಿದ್ದೀರಿ? ದಾಖಲಾಗಿರೋದು ವಂಚನೆ ಪ್ರಕರಣ. ಆದರೆ ನೀವು ತನಿಖೆ ಮಾಡುತ್ತಿರುವುದು ಮತ್ತೊಂದು ಪ್ರಕರಣ. ಗ್ರಾಹಕರಿಂದ ಸಂಗ್ರಹಿಸಿರುವ ಹಣವನ್ನು ಅರ್ಜಿದಾರರು ಪಡೆದುಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳೇನು? ವಂಚನೆ ಆರೋಪದಲ್ಲಿ ಅರ್ಜಿದಾರರ ಕೈವಾಡವಿರುವುದು ಕಾಣುತ್ತಿಲ್ಲ. ಆದರೂ ಬಂಧಿಸಲಾಗಿದೆ ಎಂದು ಸರ್ಕಾರಿ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರಕ್ಕೆ ಕಾಯ್ದಿರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು