ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನ ಔಷಧಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದ್ದು, ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆ.13): ರಾಜ್ಯದಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ, ಇದೊಂದು ಆಘಾತಕಾರಿ ಘಟನೆಯಾಗಿದ್ದು, ಇಂತಹ ನಿರ್ಧಾರ ಹಿಂಪಡೆಯುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಹಂಚಿಕೊಂಡಿರುವ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನ ಔಷಧಿ ಕೇಂದ್ರಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅನುಮತಿ ನೀಡಲಾಗುತ್ತಿಲ್ಲ. ರಾಜ್ಯ ಸರ್ಕಾರದ ಈ ನಿರ್ಧಾರ ಆಘಾತಕಾರಿಯಾಗಿದ್ದು, ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ರಾಜ್ಯದಲ್ಲಿ ಆಸ್ಪತ್ರೆ ಆವರಣದಲ್ಲಿ ಈ ರೀತಿಯ 189 ಜನ್ ಔಷಧಿ ಕೇಂದ್ರಗಳಿವೆ. ದೇಶದಲ್ಲಿಯೇ ಅತ್ಯಧಿಕ ಜನ್ ಔಷಧಿ ಕೇಂದ್ರಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ.
ತುಂಗಭದ್ರಾ ಜಲಾಶಯ ಮತ್ತೊಮ್ಮೆ ತುಂಬುತ್ತದೆ, ನಾನೇ ಬಾಗಿನ ಅರ್ಪಿಸುತ್ತೇನೆ; ಸಿಎಂ ಸಿದ್ದರಾಮಯ್ಯ
ಇನ್ನು ರಾಜ್ಯದ ಎಲ್ಲ ಜನ ಔಷಧಿ ಕೇಂದ್ರಗಳಲ್ಲಿ ಔಷಧಿಗಳ ಮೇಲೆ ಶೇ 70 ರಿಂದ 90 ರಷ್ಟು ರಿಯಾಯಿತಿ ದರದಲ್ಲಿ ಔಷಧಿ ದೊರೆಯುತ್ತಿದೆ. ಈ ಮೂಲಕ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಇನ್ನು ಬೆಂಗಳೂರು ದಕ್ಷಿಣ ಒಂದರಲ್ಲೇ ಪ್ರತೀ ತಿಂಗಳು 2 ಲಕ್ಷ ನಾಗರಿಕರು ಇದರ ಲಾಭ ಪಡೆಯುತ್ತಿದ್ದು, ಮಾಸಿಕ 2 ಕೋಟಿ ರೂ, ಗಳಷ್ಟು ಉಳಿತಾಯ ಇದರಿಂದ ಆಗುತ್ತಿದೆ. ಆದರೆ, ಈಗ ರಾಜ್ಯ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ, ಸರ್ಕಾರಿ ಆಸ್ಪತ್ರೆಗಳ ಬಳಿ ಜನ ಔಷಧಿ ಕೇಂದ್ರಗಳಿಗೆ ಅನುಮತಿ ನೀಡದಿರುವ ಕ್ರಮವು ರಾಜಕೀಯ ಪ್ರೇರಿತವಾಗಿದೆ. ಈ ನಿರ್ಧಾರದಿಂದ ಬಡ ಕುಟುಂಬಗಳಿಗೆ ಹೆಚ್ಚಿನ ತೊಂದರೆಯಾಗಲಿದೆ. ರಾಜ್ಯ ಸರ್ಕಾರವು ಈ ನಿರ್ಧಾರದಿಂದ ಹಿಂದೆ ಸರಿದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಚಂದ್ರಯಾನದ ರೂವಾರಿ ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು 'ಜನ ಔಷಧಿ' ಕೇಂಸ್ರ ಸ್ಥಾಪನೆ ಮೂಲಕ ಕಡಿಮೆ ದರಕ್ಕೆ ಔಷಧಿ ಕೊಡುತ್ತಿರುವುದು ಒಳ್ಳೆಯ ಯೋಜನೆ ಆಗಿರಬಹುದು. ಆದರೆ, ಆಸ್ಪತ್ರೆಗಳ ಆವರಣದಲ್ಲಿ ಯಾಕೆ ನೀವು ಜನ ಔಷಧಿ ಕೇಂದ್ರಗಳನ್ನು ತೆರೆಯುತ್ತಿದ್ದೀರಿ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲ ಔಷಧಿಗಳು ಕೂಡ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಹೀಗಿದ್ದ ಸಂದರ್ಭದಲ್ಲಿ ಏಕೆ ಆಸ್ಪತ್ರೆ ಆವರಣಗಳಲ್ಲಿಯೇ ಇಂತಹ ಜನ ಔಷಧಿ ಕೇಂದ್ರಗಳನ್ನು ತೆರೆಯಬೇಕು. ಸಾರ್ವಜಿಕರಿಗೆ ಅಗತ್ಯವಿರುವ ಮಾರುಕಟ್ಟೆಗಳ ಸ್ಥಳದಲ್ಲಿ ಜನ ಔಷಧಿ ಕೇಂದ್ರಗಳನ್ನು ತೆರೆದು, ಇತರೆ ದುಬಾರಿ ಇರುವ ಮೆಡಿಕಲ್ ಶಾಪ್‌ಗಳಿಗಿಂತ ಕಡಿಮೆ ದರಕ್ಕೆ ಔಷಧಿ ನೀಡಿ. ಅದನ್ನು ಬಿಟ್ಟು ಆಸ್ಪತ್ರೆ ಆವರಣಗಳಲ್ಲಿ ಯಾಕೆ ತೆರೆಯುತ್ತೀರಿ. ಇನ್ನು ಆಸ್ಪತ್ರೆಗಳಲ್ಲಿ ಯಾವ ಔಷಧಿಗಳು ಲಭ್ಯವಿರುವುದಿಲ್ಲವೋ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ, ಜನ ಔಷಧಿ ಕೆಂದ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.