Asianet Suvarna News Asianet Suvarna News

ತುಂಗಭದ್ರಾ ಜಲಾಶಯ ಮತ್ತೊಮ್ಮೆ ತುಂಬುತ್ತದೆ, ನಾನೇ ಬಾಗಿನ ಅರ್ಪಿಸುತ್ತೇನೆ; ಸಿಎಂ ಸಿದ್ದರಾಮಯ್ಯ

ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ ತ್ವರಿತವಾಗಿ ಮುಗಿಯುತ್ತದೆ, ರೈತರು ಆತಂಕಪಡುವ ಅಗತ್ಯವಿಲ್ಲ. ಈ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Tungabhadra Reservoir will be filled again and submit bagina to dam says CM Siddaramaiah sat
Author
First Published Aug 13, 2024, 6:40 PM IST | Last Updated Aug 13, 2024, 6:40 PM IST

ವಿಜಯನಗರ (ಆ.13): ತುಂಗಭದ್ರಾ ಜಲಾಶಯದ ಗೇಟ್ ನ ದುರಸ್ತಿಯನ್ನು ತ್ವರಿತವಾಗಿ ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಬರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ತುಂಗಭದ್ರಾ ಜಲಾಶಯದ 19ನೇ ಗೇಟ್ ತುಂಡಾಗಿದೆ. ಜಲಾಶಯದ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚಿಸಿದ್ದೇನೆ. ಅವರಿಂದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಜಲಶಾಯ ಮಂಡಳಿಯದಾಗಿದ್ದು, ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ.

ತುಂಗಭದ್ರಾ ಜಲಾಶಯದ ನಿರ್ಮಾಣ ದೇಶಕ್ಕೆ ಸ್ವಾತಂತ್ರ್ಯ ಬಂದ ಮರು ವರ್ಷವೇ ಕೈಗೆತ್ತಿಕೊಂಡು ಅಂದರೆ 1948ರಲ್ಲಿ ಪ್ರಾರಂಭವಾಗಿ 1953ರಲ್ಲಿ ಪೂರ್ಣಗೊಂಡು, 1954 ರಿಂದ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಪ್ರಾರಂಭಿಸಲಾಯಿತು. ಸುಮಾರು 70 ವರ್ಷಗಳಷ್ಟು ಹಳೆಯದಾದ ಡ್ಯಾಂನಲ್ಲಿ ಇಲ್ಲಿನವರೆಗೆ ಯಾವುದೇ ಗೇಟ್ ನ ಚೈನ್ ತುಂಡಾಗಿರಲಿಲ್ಲ. ಜಲಾಶಯದಲ್ಲಿ ಈ ವರ್ಷ 115 ಟಿಎಂಸಿ ನೀರಿದ್ದು, ಈಗಾಗಲೇ 25 ಟಿಎಂಸಿ ನೀರನ್ನು  ರೈತರ ಜಮೀನಿಗೆ ಬಿಡಲಾಗಿದೆ. ರೈತರ ಮೊದಲನೇ ಬೆಳೆಗೆ 90 ಟಿಎಂಸಿ ನೀರು ಬೇಕಾಗಿದ್ದು, ಈ ಪ್ರಮಾಣದ ನೀರು ಜಲಾಶಯದಲ್ಲಿ ಲಭ್ಯವಿದೆ. ಆದರೆ ಜಲಾಶಯದ 19ನೇ ಗೇಟ್ ತುಂಡಾಗಿರುವುದರಿಂದ 35 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಜಲಾಶಯದ ನೀರನ್ನು ಬಿಡದೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ನೀರು ಉಳಿಯುತ್ತದೆ ಎಂದರು.

ಟಿಬಿ ಡ್ಯಾಂ ನೀರು ಉಳಿಸಿಕೊಳ್ಳುವ ಪ್ರಯತ್ನ, ಗೇಟ್ ಅಯಸ್ಸು 40 ವರ್ಷ, ಜಲಾಶಯದ್ದು 70 ವರ್ಷ: ಆಂಧ್ರ ತಜ್ಞ ಕನ್ನಯ್ಯ

ಗೇಟ್ ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗಲಿದೆ. ಹಿಂದುಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದ್ದು, ಕನ್ನಯ್ಯ ನಾಯ್ಡು ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 9 ಲಕ್ಷ  ಹಾಗೂ ಆಂಧ್ರ ತೆಲಂಗಾಣಗಳಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಕಿರುವ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅದಲ್ಲದೇ, ಆಗಸ್ಟ್ 17 ರಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

2019ರಲ್ಲಿ ಜಲಾಶಯದ ನೀರು ಬಿಡುವ ಕಾಲುವೆಗಳಲ್ಲಿ ಸಮಸ್ಯೆ ಆಗಿತ್ತೇ ಹೊರತು, ಜಲಾಶಯದ ಗೇಟ್ ಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೇಟ್ ನ ಸರಪಳಿ ತುಂಡಾಗಿರುವ ಘಟನೆ ನಡೆದಿದೆ. ತಜ್ಞರ ಸಲಹೆಯಂತೆ 50 ವರ್ಷಗಳಿಗೊಮ್ಮೆ ಗೇಟ್  ಹಾಗೂ ಸರಪಳಿಗಳನ್ನು ಬದಲಾಯಿಸಬೇಕಾಗಿದ್ದು, ಇನ್ನು ಮುಂದೆ ತಜ್ಞರ ಸಲಹೆಯಂತೆ ತುಂಗಭದ್ರಾ ಮಂಡಳಿ  ಹಾಗೂ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರ್ಕಾರ ನೇಮಿಸಿದ ತುಂಗಭದ್ರ ಮಂಡಳಿ ಅಸ್ತಿತ್ವದಲ್ಲಿದ್ದು, ಕೇಂದ್ರ ಜಲ ಆಯೋಗ ಹಾಗೂ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸದಸ್ಯರೂ ಇದರಲ್ಲಿದ್ದಾರೆ. ಇಂತಹ ಘಟನೆಗಳಿಗೆ ಕಾರಣವೇನು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ತುಂಗಭದ್ರಾ ನೀರು ಉಳಿಸಲು ಗ್ರೇಟ್‌ ಐಡಿಯಾ ಕೊಟ್ಟ ತಜ್ಞ ಕನ್ನಯ್ಯ, ನೀರು ಪೋಲಾಗುತ್ತಿರುವುದಕ್ಕೆ ಮರುಕ

ನವಲಿ ಜಲಾಶಯ ನಿರ್ಮಾಣಕ್ಕೆ 15 ಸಾವಿರ ಕೋಟಿ ರೂ.ಗಳ ಡಿಪಿಆರ್ ತಯಾರಾಗಿದ್ದು, ಇದು ಅಂತರರಾಜ್ಯ ಯೋಜನೆಯಾಗಿದೆ. ಡಿಪಿಆರ್ ಗೆ ಒಪ್ಪಿಗೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios